50ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದೇವೆ. ನವೆಂಬರ್ 1ರಂದು ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಿಸಬೇಕು. ನವೆಂಬರ್ 1ರಂದು ಎಲ್ಲ ಶಾಲಾ, ಕಾಲೇಜುಗಳು, ಕಾರ್ಖಾನೆಗಳು ಮತ್ತು ಐಟಿಬಿಟಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸಲೇಬೇಕು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೂಚನೆ ನೀಡಿದರು.
ತನ್ನ ನಿವಾಸದಲ್ಲಿ ಆಯುಧ ಪೂಜೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಬೆಂಗಳೂರು ಜಿಲ್ಲೆಯಲ್ಲಿ ಶೇ 50 ಜನ ಹೊರಗಿನಿಂದ ಬಂದವರಿದ್ದಾರೆ. ಹೊರಗಿನಿಂದ ಬಂದವರು ಸಹ ಕನ್ನಡ ಕಲಿಯಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಮಾಡಬೇಕು. ರಾಷ್ಟ್ರಧ್ವಜದ ರೀತಿ ಕನ್ನಡ ಬಾವುಟಕ್ಕೆ ಗೌರವ ಕೊಡಬೇಕು. ಬಾವುಟ ಹಾರಿಸುವ ಮೂಲಕ ಶ್ರದ್ಧಾ, ಭಕ್ತಿ ಗೌರವ ತೋರಿಸಬೇಕು ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ ಜನಗಣತಿ ಎತ್ತುವ ಹಲವು ಪ್ರಶ್ನೆಗಳು
ಬೆಂಗಳೂರಿನಲ್ಲಿ ಎಲ್ಲರೂ ರಾಜೋತ್ಸವ ಆಚರಣೆ ಮಾಡುತ್ತಾರೆ. ರಾಜ್ಯೋತ್ಸವ ಆಚರಣೆಗೆ ಯಾವ ಕನ್ನಡ ಸಂಘಟನೆಗಳು ಕೂಡ ಒತ್ತಡ ಹೇರಬಾರದು. ಸರ್ಕಾರವೇ ಆದೇಶಿಸಿದೆ. ಅದರಂತೆ ರಾಜೋತ್ಸವ ಆಚರಣೆ ಮಾಡುತ್ತಾರೆ. ಆಚರಣೆ ಮಾಡದ ಸಂಸ್ಥೆ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕು ಅಂತ ಸರ್ಕಾರ ನಿರ್ಧಾರ ಮಾಡುತ್ತೆ. ಕನ್ನಡ ಸಂಘಟನೆಗಳು ಖಾಸಗಿ ಸಂಸ್ಥೆಗಳ ಬಳಿ ಹೋಗಿ ಗಲಾಟೆ, ಬೆದರಿಸುವುದು ಬೇಡ ಎಂದು ಹೇಳಿದರು.
ಕೊರೊನಾ ಅಕ್ರಮ ಕುರಿತ ತನಿಖೆಗೆ ಎಸ್ಐಟಿ ರಚನೆ ವಿಚಾರವಾಗಿ ಮಾತನಾಡಿದ ಅವರು, ನನ್ನ ನೇತೃತ್ವದಲ್ಲಿ ಸಬ್ ಕಮಿಟಿ ಮಾಡಲಾಗಿದೆ. ಹಬ್ಬದ ಬಳಿಕ ಈ ಬಗ್ಗೆ ಮಾತನಾಡುತ್ತೇನೆ. ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ನಾಡಿದ್ದು ಮಾತನಾಡುತ್ತೇನೆ ಎಂದು ಹೇಳಿದರು.
