ಕೇಂದ್ರ ಸರ್ಕಾರವು ಪ್ರತಿವರ್ಷ ಸೆಪ್ಟೆಂಬರ್ 14ರಂದು (ಇಂದು) ಹಿಂದಿ ದಿವಸ ಆಚರಣೆಯನ್ನು ಮಾಡುತ್ತಿದ್ದು, ಈ ದಿನ ‘ಕರಾಳ ದಿನ’ ಆಚರಿಸಲು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕರೆ ನೀಡಿದೆ. ಹಿಂದಿ ಭಾಷೆ ಹೇರಿಕೆ ವಿರುದ್ಧ ಇಂದು ಕರವೇ ಬೃಹತ್ ಪ್ರತಿಭಟನೆಯನ್ನು ನಡೆಸಲಿದೆ.
ಈ ಹಿಂದಿ ವಿವಸ ಎಂಬುದು ಅನ್ಯಭಾಷಿಕರ ಮೇಲೆ ಹಿಂದಿ ಹೇರುವ ಹುನ್ನಾರವಾಗಿದೆ. ಈ ಹಿಂದಿ ಹೇರಿಕೆ ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟು ಮಾಡುತ್ತಿದೆ. ಆದ್ದರಿಂದ ಸೆಪ್ಟೆಂಬರ್ ನಾವು ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ನಡೆಸಲಿದ್ದೇವೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ತಿಳಿಸಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಯಲಿದೆ.
ಹಿಂದಿಗೆ ಅನೈತಿಕವಾಗಿ ವಿಶೇಷ ಮನ್ನಣೆಯನ್ನು ನೀಡುವ ಸಂವಿಧಾನದ 343ರಿಂದ 351ನೇ ವಿಧಿಗಳನ್ನು ರದ್ದುಪಡಿಸಿ ಎಲ್ಲ ಭಾಷೆಗಳೂ ಒಕ್ಕೂಟದ ದೃಷ್ಟಿಯಲ್ಲಿ ಸಮಾನ ಎಂದು ಸಾರಬೇಕು ಎಂದು ಕರವೇ ಆಗ್ರಹಿಸಿದೆ.
ಇದನ್ನು ಓದಿದ್ದೀರಾ? ಕೆಪಿಎಸ್‌ಸಿ ಮರುಪರೀಕ್ಷೆಗೆ ಸೂಚನೆ; ಸಿಎಂಗೆ ಕರವೇ ಅಭಿನಂದನೆ
ಕೇಂದ್ರ ಸರ್ಕಾರವು ಕೂಡಲೇ ಸಂವಿಧಾನಕ್ಕೆ ತಿದ್ದುಪಡಿ ತಂದು 8ನೇ ಪರಿಚ್ಚೇದದಲ್ಲಿ ಉಲ್ಲೇಖಿಸಿರುವ ಎಲ್ಲ 22 ಭಾಷೆಗಳನ್ನೂ ಅಧಿಕೃತ, ಆಡಳಿತ ಭಾಷೆಗಳನ್ನಾಗಿ ಮಾಡಿ ದೇಶದ ಬಹುತ್ವ, ಸಾರ್ವಭೌಮತ್ವವನ್ನು ಕಾಪಾಡಬೇಕು ಎಂದು ಕರವೇ ನಾಯಕ ನಾರಾಯಣಗೌಡ ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಕೇಂದ್ರ ಸರಕಾರಿ ಇಲಾಖೆಗಳು, ಉದ್ಯಮಗಳಲ್ಲಿ ಕನ್ನಡವೇ ವ್ಯವಹಾರದ ಭಾಷೆಯಾಗಬೇಕು. ಎಲ್ಲ ಬಗೆಯ ಪತ್ರ ವ್ಯವಹಾರ ಕನ್ನಡದಲ್ಲೇ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಮಕ್ಕಳಿಗೆ ಹಿಂದಿಯನ್ನು ಒಂದು ಭಾಷೆಯನ್ನಾಗಿ ಕಡ್ಡಾಯವಾಗಿ ಕಲಿಸುವುದು ಮೊದಲ ಹಂತದ ಹೇರಿಕೆಯಾಗಿದೆ. ಹಿಂದಿ ಕಲಿತವರಿಗೆ ಮನ್ನಣೆ ನೀಡುವುದು, ನೌಕರಿ ನೇಮಕಾತಿ, ಶಿಕ್ಷಣ ನೇಮಕಾತಿಗಳೂ ಸೇರಿದಂತೆ ವಿವಿಧ ಪ್ರವೇಶ ಪರೀಕ್ಷೆಗಳಲ್ಲಿ ಹಿಂದಿ ಕಲಿತವರಿಗೆ ಮನ್ನಣೆ ನೀಡುವುದು, ಹಿಂದಿ ಸಪ್ತಾಹ-ಹಿಂದಿ ದಿವಸ ಎಂಬ ಕಾರ್ಯಕ್ರಮಗಳ ಮೂಲಕ ಇತರ ಭಾಷಿಕರು ಹಿಂದಿ ಕಲಿಯುವಂತೆ ಒತ್ತಡ ಹೇರುವುದು, ಇವೆಲ್ಲವೂ ಕೂಡಾ ಕೇಂದ್ರ ಸರ್ಕಾರದಿಡಯಲ್ಲಿ ನಡೆಯುವ ವ್ಯವಸ್ಥಿತ ಕುತಂತ್ರಗಳು ಎಂದು ಕರವೇ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ಹೇಳಿದ್ದಾರೆ.
