“ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದ ಸಮಸ್ಯೆ, ಹಿಂದಿ ಹೇರಿಕೆ, ಬೆಳಗಾವಿಯಲ್ಲಿ ಕರ್ನಾಟಕದ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಸೇರಿದಂತೆ ಕನ್ನಡಿಗರ ಅಸ್ಮಿತೆಗೆ ಎಲ್ಲ ರೀತಿಯಲ್ಲೂ ಧಕ್ಕೆ ಆಗುತ್ತಿದೆ. ಎಂಇಎಸ್ ಪುಂಡರ ದಾಂಧಲೆ ಹೆಚ್ಚಳವಾಗುತ್ತಿದೆ. ತೆರಿಗೆ ಹಣದಲ್ಲಿ ಸಮಪಾಲು ಕೊಡದೇ ಮಲತಾಯಿ ಧೋರಣೆಯನ್ನ ಕೇಂದ್ರ ಸರ್ಕಾರ ತೋರುತ್ತಿದೆ. ಶಿಕ್ಷಣದಲ್ಲಿಯೂ ಕನ್ನಡವನ್ನ ಕೊಲೆ ಮಾಡುತ್ತಿದ್ದಾರೆ. ಇದೆಲ್ಲದರ ವಿರುದ್ಧವಾಗಿ ಮಾರ್ಚ್ 22ರಂದು ಕರ್ನಾಟಕ ಬಂದ್ ನಡೆಯಲಿದೆ” ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಮಾತನಾಡಿದ ಅವರು, “ಹೋಟೆಲ್ ಉದ್ಯಮಿದಾರರು ಈ ಕರ್ನಾಟಕ ಬಂದ್‌ಗೆ ಬೆಂಬಲ ಇಲ್ಲ ಎಂದು ಹೇಳಿ ಗೊಂದಲ ಉಂಟು ಮಾಡುತ್ತಿದ್ದಾರೆ. ನೇರವಾಗಿ ನಾಳೆ ನಡೆಯುವ ಕರ್ನಾಟಕ ಬಂದ್‌ಗೆ ಏಳು ಕೋಟಿ ಕನ್ನಡಿಗರು ಬೆಂಬಲ ಕೊಡಬೇಕು. ಮಾರ್ಚ್ 22ರಂದು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ನೂರಕ್ಕೆ ನೂರು ಕರ್ನಾಟಕ ಬಂದ್ ನಡೆಯುತ್ತದೆ. ಯಾವುದೇ ಕಾರಣಕ್ಕೂ ಕರ್ನಾಟಕ ಬಂದ್ ಮಾಡುವುದನ್ನ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನಾಳೆ ಟೌನ್ ಹಾಲ್ ನಿಂದ ಮೆರವಣಿಗೆ ಹೊರಡುತ್ತೇವೆ. ಬೆಂಗಳೂರಿನ ಎಲ್ಲ ಮಾಲ್‌ಗಳು ಬಂದ್ ಆಗಬೇಕು” ಎಂದು ತಿಳಿಸಿದ್ದಾರೆ.
“ಕರ್ನಾಟಕದ ಬಂದ್ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಪರವಾಗಿ, ಎಂಇಎಸ್, ಶಿವಸೇನೆ ವಿರುದ್ದ, ಸಂಭಾಜಿ ಪ್ರತಿಮೆ ವಿರುದ್ಧ, ಕಂಡಕ್ಟರ್ ಗೆ ಹೊಡೆದ ವಿರುದ್ಧವಾಗಿದೆ. ಈ ರಾಜ್ಯದ ಪರವಾಗಿ ಈ ಕರ್ನಾಟಕ ಬಂದ್ ಮಾಡುತ್ತಿದ್ದೇವೆ. ನಾಳೆ ಚಾಲಕರಿಗಾಗಿ, ಚಾಲಕರಿಗೆ ಶಕ್ತಿ ಕೊಡಲು ಚಾಲಕರಿಗೆ ಧೈರ್ಯ ತುಂಬಲು, ಚಾಲಕರಲ್ಲಿ ಸ್ವಾಭಿಮಾನ ತುಂಬಲು ಈ ಬಂದ್ ನಡೆಯುತ್ತಿದೆ. ನಾಳೆ ಚಾಲಕರು ಯಾರು ಗಾಡಿ ಹತ್ತ ಬಾರದು. ಬೆಳಗಾವಿಯಲ್ಲಿ ನಾಳೆ ಬಂದ್‌ಗೆ ಬೆಂಬಲ ಕೊಡುತ್ತಿದ್ದಾರೆ. ಮಹಾದಾಯಿ ಪರವಾಗಿ ನವಲಗುಂದ ನರಗುಂದ ಬಂದ್ ಆಗಲಿದೆ” ಎಂದು ಹೇಳಿದ್ದಾರೆ.
“ಕರ್ನಾಟಕದಲ್ಲಿ ಪರಭಾಷೆಯವರ ದಾಳಿಯಾಗುತ್ತಿದೆ. ಪರಭಾಷಿಕರು ದಾಳಿ ಮಾಡುತ್ತಿದ್ದಾರೆ. ಬಂದ್ ಮಾಡುವ ಮೂಲಕ ಪರಭಾಷಿಕರ ದಬ್ಬಾಳಿಕೆ ನಿಲ್ಲಿಸಲೇಬೇಕು. ಬೆಂಗಳೂರನ್ನ ನಾಲ್ಕು ಭಾಗ ಮಾಡೋಕೆ ಮುಂದಾಗಿದ್ದಾರೆ. ಗ್ರೇಟರ್ ಬೆಂಗಳೂರು ನಮಗೆ ಬೇಡವೇ ಬೇಡ. ಮೆಟ್ರೊ ದರ್ ಇಳಿಕೆ ಮಾಡಲೇಬೇಕು. ಮೆಟ್ರೊದಲ್ಲಿ ಕನ್ನಡಿಗರು ಕೆಲಸ ಮಾಡಬೇಕು. ನಾಳೆ ಎಸ್ ಎಸ್ ಎಲ್ ಸಿ ಎಕ್ಸಾಮ್ ಇಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ” ಎಂದಿದ್ದಾರೆ.
“ಬೆಳಗಾವಿಯ ಕೆಲವೆಡೆ ಕನ್ನಡಿಗನ ಮೇಲೆ ಮರಾಠಿಗರ ದಬ್ಬಾಳಿಕೆ ಹೆಚ್ಚಾಗಿದ್ದು, ಇದನ್ನ ಖಂಡಿಸಿ ಮಾ. 22ರಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಇದಲ್ಲದೇ ಮಹದಾಯಿ, ಕಳಸಾ ಬಂಡೂರಿ ಹಾಗೂ ಮೇಕೆದಾಟು ಯೋಜನೆ ಜಾರಿ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನಾ ಜಾಥಾ ನಡೆಸಲಾಗುತ್ತದೆ. ಕನ್ನಡಿಗರಿಗಾಗಿ, ಕನ್ನಡಗರ ಸ್ವಾಭಿಮಾನಕ್ಕಾಗಿ ಈ ಬಂದ್ ಅನ್ನು ನಡೆಸಲಾಗುತ್ತಿದೆ. ರಾಜ್ಯ ಬಂದ್‌ಗೆ ಎಲ್ಲಾ ಸಂಘಟನೆಯವರು ಬೆಂಬಲಿಸಬೇಕು” ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.
ಕನ್ನಡದ ನಿರ್ಮಾಪಕ ಸಾರಾ ಗೋವಿಂದ್, “ನಾಳೆ ಬಂದ್‌ಗೆ ನಾವು ಸಂಪೂರ್ಣವಾದ ಬೆಂಬಲ ನೀಡುತ್ತೇವೆ. ಕನ್ನಡಿಗರಿಗಾಗಿ ಮಾಡುತ್ತಿರುವ ಸ್ವಾಭಿಮಾನದ ಬಂದ್ ಇದಾಗಿದೆ. ಕನ್ನಡಿಗರ ಉದ್ಯೋಗ, ಮಹಾದಾಯಿ, ಮೇಕೆದಾಟು, ಎಂಇಎಸ್ ವಿರುದ್ದವಾಗಿ ಹೋರಾಟ ಮಾಡುತ್ತಿದ್ದೇವೆ. ಈ ಹಿಂದೆ ಕನ್ನಡ ಬಂದ್ ಮಾಡುವ ಬಗ್ಗೆ ಎಲ್ಲಿಯೂ ಚರ್ಚೆ ಆಗಿರಲಿಲ್ಲ. ಈ ಬಾರಿ ಅಸೆಂಬ್ಲಿಯಲ್ಲಿ ಚರ್ಚೆ ಆಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮುನಿರತ್ನ ಹನಿಟ್ರ್ಯಾಪ್ ಪ್ರಕರಣ: ಸರ್ಕಾರದಿಂದ ರಕ್ಷಣೆ ಇಲ್ಲ: ಸಂತ್ರಸ್ತೆ ಆರೋಪ
ಕನ್ನಡಪರ ಹೋರಾಟಗಾರ ಕೆ.ಆರ್. ಕುಮಾರ್ ಮಾತನಾಡಿ, “20ಕ್ಕೂ ಹೆಚ್ಚು ಬೇಡಿಕೆಗಳಿಗೆ ಆಗ್ರಹಿಸಿ ಈ ಬಂದ್ ನಡೆಯುತ್ತಿದೆ. ಕನ್ನಡಿಗರ ಪರವಾಗಿ ಕರ್ನಾಟಕದ ಪರವಾಗಿ ಈ ಹೋರಾಟವನ್ನು ಮಾಡುತ್ತಿದ್ದೇವೆ. ವಾಣಿಜ್ಯ ಅಂಗಡಿಗಳು, ಮಾಲ್‌ಗಳು ಈ ಹೋರಾಟಕ್ಕೆ ಬೆಂಬಲವನ್ನ ನೀಡಬೇಕು ಎಂದು ಮನವಿ ಮಾಡಿದ್ದೇವೆ. ಆದರೆ, ಸರ್ಕಾರ ಪರೋಕ್ಷವಾಗಿ ಪೊಲೀಸರ ಮೂಲಕ ವಿಫಲಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುತ್ತಿದೆ. ಕರ್ನಾಟಕ ಸರ್ಕಾರದ ಹಲವಾರು ಯೋಜನೆಗಳು ಕರ್ನಾಟಕ ಹಿಂದುಳಿಯುವುದಕ್ಕೆ ಕಾರಣವಾಗಿದೆ. ಪಕ್ಷಾತೀತವಾಗಿ ಕರ್ನಾಟದ ಬಂದ್‌ಗೆ ಬೆಂಬಲ ನೀಡುತ್ತಿವೆ” ಎಂದು ಹೇಳಿದರು.
“ರಾಜ್ಯ ಮತ್ತು ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಲು ಈ ಹೋರಾಟ ಮಾಡುತ್ತಿದ್ದೇವೆ. ನಾಳೆ ಪೊಲೀಸರು ಕಾರ್ಯಕರ್ತರನ್ನ ಹೆದರಿಸುವುದು, ಬೆದರಿಸುವುದು ಮಾಡಿದರೇ ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ. ನಾವು ಕನ್ನಡದ ಪರವಾಗಿ ಹೋರಾಟ ಮಾಡುತ್ತಿದ್ದೇವೆ” ಎಂದರು.
ಆಟೋ ಚಾಲಕ ಸಂಘದ ಮಜುನಾಥ್ ಮಾತನಾಡಿ, “ಆಟೋ ರಿಕ್ಷಾ, ಟ್ಯಾಕ್ಸಿ, ಗೂಡ್ಸ್ ಎಲ್ಲರೂ ಕೂಡ ನಾವು ನಾಳೆ ನಡೆಯುವ ಹೋರಾಟಕ್ಕೆ ಬೆಂಬಲ ನೀಡುತ್ತೇವೆ” ಎಂದರು.