ರಾಜಧಾನಿ ಬೆಂಗಳೂರಿನಲ್ಲಿ ನಡೆದ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಹಗುರವಾಗಿ ಮಾತನಾಡಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
“ಲೈಂಗಿಕ ದೌರ್ಜನ್ಯವನ್ನು ಸಹಜಗೊಳಿಸುವುದು ತಮ್ಮ ಹೇಳಿಕೆಯ ಉದ್ದೇಶವಾಗಿರಲಿಲ್ಲ..” ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
“ನಿನ್ನೆ ನಾನು ನೀಡಿದ ಹೇಳಿಕೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಯಾವಾಗಲೂ ಮಹಿಳೆಯರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ವ್ಯಕ್ತಿ. ನಿರ್ಭಯಾ ನಿಧಿಯನ್ನು ಮಹಿಳೆಯರ ಸುರಕ್ಷತೆಗಾಗಿ ಚೆನ್ನಾಗಿ ಬಳಸಿಕೊಳ್ಳಲಾಗಿದೆಯೆ ಎಂದು ನಾನು ಖಚಿತಪಡಿಸಿಕೊಂಡಿದ್ದೇನೆ. ನನ್ನ ಹೇಳಿಕೆಯನ್ನು ತಿರುಚುವುದು ನನಗೆ ಇಷ್ಟವಿಲ್ಲ. ಇದರಿಂದ ಯಾವುದೇ ಮಹಿಳೆಯರಿಗೆ ನೋವಾಗಿದ್ದರೆ, ನಾನು ವಿಷಾದ ವ್ಯಕ್ತಪಡಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ..” ಎಂದು ಪರಮೇಶ್ವರ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಇನ್‌ಸ್ಟಾ ಹೆಲ್ಪ್’ -ಗೃಹ ಕಾರ್ಮಿಕರನ್ನು ಮತ್ತಷ್ಟು ಅಭದ್ರತೆಗೆ ದೂಡುವ ಅಪಾಯ
ಬೆಂಗಳೂರಿನ ತಮ್ಮ ನಿವಾಸದ ಬಳಿ ನಿನ್ನೆ ಮಾತನಾಡಿದ್ದ ಅವರು, ಇಷ್ಟು ದೊಡ್ಡ ಸಿಟಿಯಲ್ಲಿ ಅಲ್ಲಿ ಇಲ್ಲಿ ಇಂತಹ ಒಂದು ಘಟನೆಗಳು ಆಗುತ್ತವೆ. ನಿತ್ಯವೂ ಪೊಲೀಸ್ ಕಮಿಷನರ್ಗೆ ಎಚ್ಚರಿಕೆಯಿಂದ ಇರಬೇಕು. ಬೀಟ್ ವ್ಯವಸ್ಥೆ ಚೆನ್ನಾಗಿ ಆಗಬೇಕು ಅಂತ ಹೇಳುತ್ತೇನೆ. ಪ್ರತಿ ಏರಿಯಾ ಮಾನಿಟರ್ ಮಾಡಬೇಕು. ಪೆಟ್ರೋಲಿಂಗ್ ಅನ್ನು ಶಿಸ್ತಿನಿಂದ, ಪರಿಣಾಮಕಾರಿಯಾಗಿ ಮಾಡಬೇಕು ಅಂತ ನಿತ್ಯ ಸೂಚನೆ ಕೊಡುತ್ತೇನೆ. ಅಲ್ಲೊಂದು ಇಲ್ಲೊಂದು ಘಟನೆ ಆದಾಗ ಸ್ವಾಭಾವಿಕವಾಗಿ ಜನರ ಗಮನ ಸೆಳೆಯುತ್ತದೆ. ಅಷ್ಟಕ್ಕೇ ನಾವು ಬಿಡೋದಿಲ್ಲ.
ನಿರಂತರವಾಗಿ ಪೊಲೀಸ್ ಇಲಾಖೆ ಕೆಲಸ ಮಾಡ್ತಿದೆ. ದಿನವಿಡಿ ಮಳೆ, ಚಳಿ ಅನ್ನದೇ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಇಷ್ಟು ದೊಡ್ಡ ಪಟ್ಟಣದಲ್ಲಿ ಅಲ್ಲೊಂದು ಇಲ್ಲೊಂದು ಘಟನೆ ಆಗುತ್ತದೆ. ಅದಕ್ಕೆ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಬೆಂಗಳೂರಲ್ಲಿ ಬೀಟ್ ವ್ಯವಸ್ಥೆ ಸುಧಾರಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ. ನಾನು ಪೊಲೀಸ್ ಕಮಿಷನರ್ ಜೊತೆಗೆ ಮಾತಾಡಿದ್ದೇನೆ ಎಂದರು.