ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಅಡಿಯಲ್ಲಿ ಸರ್ಕಾರಿ ಕೋಟಾದಡಿ ನೀಡಲಾಗುವ ಸೀಟ್‌ಗಳ ಹಂಚಿಕೆಯಲ್ಲಿ ಹಗರಣ ನಡೆದಿದೆ. ಹಣ ಪಡೆದು ಸೀಟ್ ಬ್ಲಾಕಿಂಗ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದಲ್ಲಿ ಈವರೆಗೆ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸರ್ಕಾರಿ ಕೋಟಾದಡಿ ಖಾಸಗಿ ಕಾಲೇಜುಗಳಲ್ಲಿ ಸೀಟು ಸಿಕ್ಕರೂ ಸುಮಾರು 2,625 ಅಭ್ಯರ್ಥಿಗಳು ಕಾಲೇಜುಗಳಿಗೆ ದಾಖಲಾಗಿರಲಿಲ್ಲ. ಆ ಅಭ್ಯರ್ಥಿಗಳು ಪ್ರವೇಶ ಪಡೆಯದಿದ್ದಾಗ ಅರ್ಹ ಅಭ್ಯರ್ಥಿಗಳಿಗೆ ಸೀಟು ನೀಡದೆ ವಂಚಿಸಲಾಗಿದೆ. ಜೊತೆಗೆ, ಸೀಟು ಅಗತ್ಯವಿಲ್ಲದ ಅಭ್ಯರ್ಥಿಗಳನ್ನು ಸಂಪರ್ಕಿಸಿ ಕೌನ್ಸೆಲಿಂಗ್ಗೆ ಬರುವಂತೆ ಮಾಡಿದ್ದು, ಉದ್ದೇಶಪೂರ್ವಕವಾಗಿ ಅರ್ಹ ಅಭ್ಯರ್ಥಿಗಳಿಗೆ ಸೀಟು ಸಿಗದಂತೆ ಮಾಡಲಾಗಿದೆ. ಸರ್ಕಾರಿ ಕೋಟಾದ ಸೀಟುಗಳನ್ನು ಮ್ಯಾನೆಜ್‌ಮೆಂಟ್ ಕೋಟಾದ ಸೀಟುಗಳಾಗಿ ಪರಿವರ್ತಿಸಿ, ಹೆಚ್ಚು ಶುಲ್ಕ ವಸೂಲಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಸೀಟ್ ಬ್ಲಾಕಿಂಗ್ ಹಗರಣದ ಬಗ್ಗೆ ಕೆಇಎ ಆಡಳಿತಾಧಿಕಾರಿ ಇಸಾಲುದ್ದೀನ್ ಜೆ. ಗಾಡಿಯಲ್ ಅವರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಬೆಂಗಳೂರಿನ ಬಿಎಂಎಸ್ ಕಾಲೇಜು, ಆಕಾಶ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜು ಹಾಗೂ ನ್ಯೂ ಹಾರಿಜನ್ ಇಂಜಿನಿಯರಿಂಗ್ ಕಾಲೇಜುಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಸಿಕೊಂಡಿದ್ದಾರೆ. 10 ಮಂದಿಯನ್ನು ಬಂಧಿಸಿದ್ದಾರೆ.