ಕರ್ನಾಟಕ ಲೋಕಸೇವಾ ಆಯೋಗವು ಭ್ರಷ್ಟಾಚಾರದಿಂದ ಕೂಡಿದ್ದು, ಗ್ರೂಪ್ ಡಿ ಹುದ್ದೆಯಿಂದ ಹಿಡಿದು ಗ್ರೂಪ್ ಎ ಹುದ್ದೆಗಳನ್ನು ಕೋಟಿಗಳಿಗೆ ಹರಾಜು ಹಾಕಲಾಗುತ್ತಿದೆ. ಫಲಿತಾಂಶ ಪ್ರಕಟಿಸಲು ಕೂಡ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ, ಪ್ರತಿಭಟಿಸಿದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕಾಂತಕುಮಾರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಕೆಪಿಎಸ್‌ಸಿ ಕಚೇರಿಯ ಮುಂದೆ ಆಗಮಿಸಿದ ಕಾಂತಕುಮಾರ್, ಪ್ರತಿಭಟನಾ ರೂಪಕವಾಗಿ ಮೊಟ್ಟೆ ಹಾಗೂ ಮಡಕೆಗಳನ್ನು ತಂದು ಅದನ್ನು ಒಡೆದು ಹಾಕಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕರ್ನಾಟಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಕೆಪಿಎಸ್‌ಸಿ ಅಧ್ಯಕ್ಷರೇ ಗ್ರೂಪ್ ಡಿ ಹುದ್ದೆಯಿಂದ ಹಿಡಿದು ಗ್ರೂಪ್ ಎ ಹುದ್ದೆಯವರೆಗೂ ಲಕ್ಷ ಲಕ್ಷ ಕೋಟಿ ಕೋಟಿಗಳಿಗೆ ಹುದ್ದೆಗಳನ್ನು ಹರಾಜು ಹಾಕಿ ಭ್ರಷ್ಟರ ಕೊಂಪೆಯನ್ನಾಗಿ ಪರಿವರ್ತಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
Kpsc ಯಲ್ಲಿ ಅಧ್ಯಕ್ಷರೇ ಗ್ರೂಪ್ ಡಿ ಹುದ್ದೆಯಿಂದ ಹಿಡಿದು ಗ್ರೂಪ್ ಎ ಹುದ್ದೆಯವರೆಗೂ ಲಕ್ಷ ಲಕ್ಷ ಕೋಟಿ ಕೋಟಿ ಗಳಿಗೆ ಹುದ್ದೆಗಳನ್ನು ಹರಾಜು ಹಾಕಿ ಭ್ರಷ್ಟರ ಕೊಂಪೆಯನ್ನಾಗಿ ಪರಿವರ್ತಿಸಿದ್ದಾರೆ ಈ ಅನ್ಯಾಯವನ್ನು ಪ್ರಶ್ನಿಸಲು ಹೋಗಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷರಾದ ಕಾಂತಕುಮಾರ್ ಅವರನ್ನು ಈ ರೀತಿ ಬಂಧಿಸಬಹುದೇ ? pic.twitter.com/PlQsZTirOs
— AKSSA OFFICIAL (@AKSSAofficial) January 12, 2024
“ಒಂದೊಂದು ಹುದ್ದೆಯ ಭರ್ತಿ ಮಾಡಲು ಒಂದು ವರ್ಷದ ಬದಲು ಐದು ವರ್ಷ ತೆಗೆದುಕೊಳ್ಳುತ್ತಿದ್ದಾರೆ. 15 ನೋಟಿಫಿಕೇಶನ್‌ಗಳ ಪರೀಕ್ಷೆ ನಡೆದು ಎರಡು ವರ್ಷಗಳಾಗಿದೆ. ಆದರೆ ಅದರ ಫಲಿತಾಂಶವನ್ನು ಕೆಪಿಎಸ್‌ಸಿ ಇನ್ನೂ ಪ್ರಕಟಿಸಿಲ್ಲ. ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಕೂಡಲೇ ಅಲ್ಲಿಂದ ತೆರವು ಮಾಡಿಸಬೇಕು. ನಮ್ಮ ಹೋರಾಟ ನಿರಂತರವಾಗಿರಲಿದೆ” ಎಂದು ಹೇಳುತ್ತಿದ್ದಂತೆಯೇ ಮಧ್ಯಪ್ರವೇಶ ಮಾಡಿದ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು, ಕಾಂತಕುಮಾರ್ ಅವರನ್ನು ದರದರನೆ ಎಳೆದೊಯ್ದು, ಬಂಧಿಸಿದ್ದಾರೆ.
ಪೊಲೀಸರ ನಡೆಯನ್ನು ಖಂಡಿಸಿರುವ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ, ಕೆಪಿಎಸ್‌ಸಿಯನ್ನು ಭ್ರಷ್ಟರ ಕೊಂಪೆಯನ್ನಾಗಿ ಪರಿವರ್ತಿಸಿದ್ದಾರೆ. ಈ ಅನ್ಯಾಯವನ್ನು ಪ್ರಶ್ನಿಸಲು ಹೋಗಿದ್ದ ನಮ್ಮ ಸಂಘಟನೆಯ ಅಧ್ಯಕ್ಷರಾದ ಕಾಂತಕುಮಾರ್ ಅವರನ್ನು ಈ ರೀತಿ ಬಂಧಿಸಬಹುದೇ?” ಎಂದು ವಿಡಿಯೋ ಹಂಚಿಕೊಂಡು ಪ್ರಶ್ನಿಸಿದೆ.
ಕಾಂತಕುಮಾರ್ ಅವರ ಬಂಧನದ ಬಗ್ಗೆ ಈ ದಿನ.ಕಾಮ್‌ಗೆ ಮಾಹಿತಿ ನೀಡಿರುವ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು, “ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ್ದಾರೆ. ಹಾಗಾಗಿ, ಕಾನೂನು ಉಲ್ಲಂಘಿಸಿದ್ದಕ್ಕಾಗಿ ಬಂಧಿಸಿದ್ದೇವೆ. ಎಫ್ಐಆರ್ ದಾಖಲಿಸಿಕೊಂಡಿದ್ದೇವೆ. ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ” ಎಂದು ತಿಳಿಸಿದರು.