ಕೆಪಿಎಸ್ಸಿ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಗೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ ಎ ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಕೆಪಿಎಸ್‌ಸಿ ವಿವಾದಗಳ ಕುರಿತಾದ ಮುಖ್ಯಮಂತ್ರಿಗಳ ನಿನ್ನೆಯ ಹೇಳಿಕೆ “ಹಾವೂ ಸಾಯಲಿಲ್ಲ, ಕೋಲೂ ಮುರಿಯಲಿಲ್ಲ” ಎಂಬಂತೆ ಕೇಳಿಸುತ್ತದೆ. ಮುಖ್ಯಮಂತ್ರಿಗಳು ತಮ್ಮ ಮೇಲಿನ ಭಾರವನ್ನು ನ್ಯಾಯಾಲಯಕ್ಕೆ ಹೊರಿಸುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಅವರಿಗೆ ಚೆನ್ನಾಗಿ ಗೊತ್ತಿದೆ. ಆದರೆ ಅವರು ಮರು ಅಧಿಸೂಚನೆ ಹೊರಡಿಸಲು ಹಿಂಜರಿಯುತ್ತಿದ್ದಾರೆ. ಇದಕ್ಕೆ ಕಾರಣ ಅವರ ಸುತ್ತ ಇರುವ ಅಧಿಕಾರಶಾಹಿಯ ಲಾಬಿ ಎಂದಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ ಸುಧಾರಣೆಗೆ ಮುಖ್ಯಮಂತ್ರಿಗಳು ನಿನ್ನೆ ಹಲವು ಪ್ರಸ್ತಾಪಗಳನ್ನು ಮುಂದಿಟ್ಟಿದ್ದಾರೆ. ಅವೆಲ್ಲವೂ ಸ್ವಾಗತಾರ್ಹ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮುಂದೆಂದೂ ತೊಂದರೆಯಾಗದಂತೆ ಪ್ರಶ್ನೆ ಪತ್ರಿಕೆಗಳನ್ನು ಕನ್ನಡದಲ್ಲಿಯೇ ತಯಾರಿಸಿ, ನಂತರ ಇಂಗ್ಲಿಷ್ ಗೆ ಅನುವಾದಿಸುವಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ತಪ್ಪಿತಸ್ಥ ವಿಷಯ ತಜ್ಞರು, ಭಾಷಾಂತರಕಾರರ ಮೇಲೆ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ. ಕಳೆದ ಆರೇಳು ತಿಂಗಳಿನಿಂದ ನಾವು ನಡೆಸುತ್ತಿರುವ ಹೋರಾಟಕ್ಕೆ ದೊರೆತ ಭಾಗಶಃ ಗೆಲುವು ಇದು. ನಾವು ಬೀದಿಯಲ್ಲಿ ನಿಂತು ಹೋರಾಡದಿದ್ದರೆ ಇದ್ಯಾವುದೂ ಆಗುತ್ತಿರಲಿಲ್ಲ ಎಂದು ನಾರಾಯಣ ಗೌಡ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಹುಲ್ ಸುತ್ತಮುತ್ತ ‘ದಿಬ್ಬಣದ ಕುದುರೆಗಳು’ ಇವೆ ಎಂಬ ದೂರೂ ಇದೆಯಲ್ಲ?
ಈಗಾಗಲೇ ಆಗಿರುವ ಪ್ರಮಾದಕ್ಕೆ ಅವರ ಮಾತುಗಳಲ್ಲಿ ಯಾವ ಉತ್ತರವೂ ಇಲ್ಲ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆದ ಅನ್ಯಾಯವನ್ನು ನ್ಯಾಯಾಲಯವೇ ಸರಿಪಡಿಸಬೇಕೇ? ಅದು ಮುಖ್ಯಮಂತ್ರಿಗಳಿಂದ ಆಗದ ಕೆಲಸವೇ? ಕೆಪಿಎಸ್‌ಸಿ ಸ್ವಾಯತ್ತ ಸಂಸ್ಥೆ, ಸರ್ಕಾರ ಮಧ್ಯ ಪ್ರವೇಶಿಸಲು ಆಗದು ಎಂಬ ಇಂಗಿತ ಅವರದು. ಹಾಗೆಂದು ಅನ್ಯಾಯ ನೋಡಿಕೊಂಡು ಸುಮ್ಮನಿರುತ್ತೀರಾ? ನಾವು ಮರುಪರೀಕ್ಷೆ ಮಾಡಿ ಎಂದು ಕೇಳುತ್ತಿಲ್ಲ, ಮರು ಅಧಿಸೂಚನೆ ಹೊರಡಿಸಿ ಎಂದು ಕೇಳುತ್ತಿದ್ದೇವೆ. ಅದು ನಿಮ್ಮ ಕೈಯಲ್ಲೇ ಇದೆಯಲ್ಲವೇ? ಕೆಪಿಎಸ್ಸಿ ಅಧ್ಯಕ್ಷರು, ಸದಸ್ಯರು, ಅಲ್ಲಿನ ಅಧಿಕಾರಿಗಳು ನಿಮ್ಮ ಮಾತು ಕೇಳುವುದಿಲ್ಲವೆ? ಯಾಕಾಗಿ ಈ ಅಸಹಾಯಕತೆಯ ಪ್ರದರ್ಶನ ಎಂದು ನಾರಾಯಣ ಗೌಡ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳು ಉತ್ತರ ನೀಡುವಾಗ ಕೆಪಿಎಸ್‌ಸಿ ಕೊಟ್ಟ ಮಾಹಿತಿಯನ್ನು ಯಥಾವತ್ತಾಗಿ ಓದಿದರು. ಕೆಪಿಎಸ್‌ಸಿ ಪ್ರಕಾರ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿ ಆದ ದೋಷಗಳ ತನಿಖೆಗೆ ತಜ್ಞರ ಸಮಿತಿಯೊಂದನ್ನು ನೇಮಿಸಿತ್ತು. ಆ ಸಮಿತಿ ಆರು ದೋಷಗಳನ್ನು ಗುರುತಿಸಿ 5 ಕೃಪಾಂಕ ನೀಡಲು ಶಿಫಾರಸು ಮಾಡಿದೆ! ಆರು ದೋಷಗಳಲ್ಲಿ ಮೂರು ದೋಷಗಳು ಇಂಗ್ಲಿಷ್ ಮತ್ತು ಕನ್ನಡ ಎರಡೂ ಪ್ರಶ್ನೆಪತ್ರಿಕೆಗಳಲ್ಲಿ ಆಗಿರುವ ಸಾಮಾನ್ಯ ದೋಷ, ಅನುವಾದದ ದೋಷವಲ್ಲ! ಎಂಥ ಮೋಸ? ಎಂಥ ದುರಹಂಕಾರದ ಸಮರ್ಥನೆ ಎಂದು ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಎಸ್ ಎಸ್ ಎಲ್ ಸಿ ಓದಿರುವ ನಮ್ಮ ಹಳ್ಳಿಗಾಡಿನ ಪ್ರತಿಭಾವಂತ ಹೆಣ್ಣುಮಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟರೆ ಆಕೆ ಸಮರ್ಥವಾಗಿ ಆಗಿರುವ ತಪ್ಪುಗಳನ್ನು ಗುರುತಿಸುತ್ತಾಳೆ. ಹೀಗಿರುವಾಗ ಎರಡೂ ಪ್ರಶ್ನೆಪತ್ರಿಕೆಗಳಲ್ಲಿ ಆಗಿರುವ 80 ದೋಷಗಳು ಈ ತಜ್ಞರ ಸಮಿತಿಗೆ ಕಾಣಲಿಲ್ಲವೇ? ಹೊಟ್ಟೆಗೆ ಇವರು ಏನು ತಿನ್ನುತ್ತಾರೆ? ಅಥವಾ ಈ ತಜ್ಞರ ಸಮಿತಿಯೆಂಬುದೇ ಕೆಪಿಎಸ್‌ಸಿ ಆಡಿದ ನಾಟಕವೇ? ಪ್ರತಿಯೊಂದು ತಪ್ಪುಗಳನ್ನೂ ನಾವು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೆವು. ಹೀಗಿದ್ದಾಗ್ಯೂ ಅವರು ಕೆಪಿಎಸ್ಸಿ ಕೊಟ್ಟ ಸುಳ್ಳು ಉತ್ತರ, ಮೋಸದ ಸಮರ್ಥನೆಯನ್ನೇ ಹೇಳಬೇಕಿತ್ತೇ ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳ ಒಟ್ಟು ಹೇಳಿಕೆ ಅಧಿಕಾರಶಾಹಿಯ ಪ್ರಭಾವಳಿಯಲ್ಲಿ ಓರ್ವ ಕನ್ನಡಪರ ಚಿಂತನೆಯ ರಾಜಕಾರಣಿ ಅಸಹಾಯಕತೆಯಲ್ಲಿ ಕೈ ಚೆಲ್ಲಿ ಕುಳಿತಂತೆ ಕಾಣುತ್ತದೆ. ಸಿದ್ಧರಾಮಯ್ಯನವರಂಥ ಗಟ್ಟಿ ಗುಂಡಿಗೆಯ ನಾಯಕರು ಹೀಗೆ ಐಎಎಸ್ ಲಾಬಿಗೆ ಶರಣಾಗಬಾರದಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಈ ಹೋರಾಟವನ್ನು ಮುಂದುವರೆಸುತ್ತದೆ. ಇದಕ್ಕೊಂದು ತಾರ್ಕಿಕ ಅಂತ್ಯ ದೊರೆಯುವವರೆಗೆ ಮುಂದುವರೆಸುತ್ತದೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಅಧೀರರಾಗಬಾರದು. ನಮಗೆ ನ್ಯಾಯಾಲಯಗಳಾದರೂ ನ್ಯಾಯ ಕೊಡಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳೋಣ. ಅಲ್ಲೂ ನಮಗೆ ನ್ಯಾಯ ಸಿಗದೇ ಇದ್ದರೆ ಮತ್ತೆ ಬೀದಿಯಲ್ಲಿ ನಿಲ್ಲೋಣ. ಈ ನಾಡಿನ ಭವಿಷ್ಯ ರೂಪಿಸಬೇಕಾದ ಯುವಕ,ಯುವತಿಯರನ್ನು ಈ ಸರ್ಕಾರ, ಈ ವ್ಯವಸ್ಥೆ ಏನು ಮಾಡುತ್ತದೆ, ನೋಡಿಯೇ ಬಿಡೋಣ. ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ ಎಂದು ನಾರಾಯಣ ಗೌಡ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
