ರಾಜ್ಯ ರಾಜಧಾನಿ ಬೆಂಗಳೂರಿನ ಎಲ್ಲೆಡೆ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಕಳೆಗಟ್ಟುತ್ತಿದೆ. ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲು ಕೃಷ್ಣನ ಭಕ್ತರು ಸಿದ್ಧತೆ ನಡೆಸಿದ್ದಾರೆ. ಮುಖ್ಯವಾಗಿ ನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಇಸ್ಕಾನ್ ದೇಗುಲಕ್ಕೆ ಬುಧವಾರ ಸಾವಿರಾರು ಜನ ಬರುವ ನಿರೀಕ್ಷೆಯಿದೆ. ಹಾಗಾಗಿ, ಬೆಂಗಳೂರು ಸಂಚಾರ ಪೊಲೀಸ್ ನಗರದ ಕೆಲವೆಡೆ ಸಂಚಾರ ನಿರ್ಬಂಧ ಮಾಡಿದೆ.
ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಇಸ್ಕಾನ್ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು, ಗಣ್ಯ ವ್ಯಕ್ತಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವುದರಿಂದ ಸೆ. 6 ಮತ್ತು 7ರಂದು ಡಾ.ರಾಜ್ ಕುಮಾರ್ ರಸ್ತೆ ಮತ್ತು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಸಂಚಾರವನ್ನು ನಿರ್ಬಂಧಿಸಿದೆ ಹಾಗೂ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೆಂಗಳೂರು ಸಂಚಾರ ಪೊಲೀಸ್, “ಯಶವಂತಪುರ ಕಡೆಯಿಂದ – ಓರಾಯನ್ ಮಾಲ್- ಡಾ.ರಾಜ್ ಕುಮಾರ್ ರಸ್ತೆಯ ಮಾರ್ಗವಾಗಿ ಮೆಜೆಸ್ಟಿಕ್ ಕಡೆಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಮಾರಪ್ಪನಪಾಳ್ಯ – ಯಶವಂತಪುರ ಫ್ಲೈಓವರ್ ಮಾರ್ಗವಾಗಿ – ಬಿ.ಹೆಚ್.ಇ.ಎಲ್ (ಕೆ-08) ಅಂಡರ್ ಪಾಸ್ ಮೂಲಕ – ಸರ್ಕಲ್ ಮಾರಮ್ಮ ಬಳಿ ಬಲ ತಿರುವು ಪಡೆದು – ಮಾರ್ಗೋಸ ರಸ್ತೆ ಮಲ್ಲೇಶ್ವರಂ ಮಾರ್ಗವಾಗಿ – ಕೆ.ಸಿ. ಜನರಲ್ ಆಸ್ಪತ್ರೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು – ಮಲ್ಲೇಶ್ವರಂ ಬ್ರಿಡ್ಜ್ ಅಂಡರ್ ಪಾಸ್ ಮೂಲಕ – ಲಿಂಕ್ ರಸ್ತೆಯಲ್ಲಿ ಸಂಚರಿಸಿ – ಶೇಷಾದ್ರಿಪುರಂ ಮಾರ್ಗವಾಗಿ ಕೆಂಪೆಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಕಡೆ ಸಂಚರಿಸಬೇಕು” ಎಂದು ಹೇಳಿದೆ.
ಯಶವಂತಪುರ ಕಡೆಯಿಂದ ಬಂದ ಬಿಎಂಟಿಸಿ ಬಸ್‌ಗಳು ಮತ್ತು ವಾಹನ ಸವಾರರು – ಜಿ.ಎಸ್.ಎಫ್ ಸರ್ಕಲ್- ಓರಾಯನ್ ಮಾಲ್ ಮುಂಭಾಗ ಡಾ.ರಾಜ್ ಕುಮಾರ್ ರಸ್ತೆಯ ಮೂಲಕ – ಡಾ.ರಾಜ್ ಕುಮಾರ್ ರಸ್ತೆ 10ನೇ ಕ್ರಾಸ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು – ಡಯಕಾನ್ ಜಂಕ್ಷನ್ ಮಾರ್ಗವಾಗಿ – ರಾಜಾಜಿನಗರ 1ನೇ ಬ್ಲಾಕ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು – ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಸಂಚರಿಸಿ ಮಾಗಡಿ ರಸ್ತೆ, ವಿಜಯನಗರ ಕಡೆಗೆ ಸಂಚರಿಸಬೇಕು ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಬ್ಬೆದ್ದು ನಾರುತ್ತಿರುವ ಪಾರಂಪರಿಕ ರಸೆಲ್ ಮಾರುಕಟ್ಟೆ: ಕ್ರಮ ಕೈಗೊಳ್ಳದ ಬಿಬಿಎಂಪಿ
ಸುಗಮ ಸಂಚಾರಕ್ಕಾಗಿ ಮಾಡಲಾದ ಮಾರ್ಪಾಡುಗಳಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದೆ.