“ನಮ್ಮ ಸಚಿವ ಸಂಪುಟದಲ್ಲಿಯೇ ಮಹಿಳಾ ಪ್ರಾತಿನಿಧ್ಯವಿಲ್ಲ, ಈ ಸರ್ಕಾರದಲ್ಲಿ ಇರುವುದು ನಾನೊಬ್ಬಳೇ ಮಹಿಳಾ ಮಂತ್ರಿ. ಅದೂ ಕೂಡಾ ಅರ್ಹತೆ ಆಧಾರದಲ್ಲಿ ಅಲ್ಲ, ಮಹಿಳಾ ಕೋಟ ಇರುವ ಕಾರಣದಿಂದಾಗಿ ನಾನು ಸಚಿವೆ ಆಗಿದ್ದೇನೆ” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳವಾರ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, “ಸರ್ಕಾರಿ ಉದ್ಯೋಗ ಸೇರಿದಂತೆ ಬೇರೆ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರಿಗೆ ಉದ್ಯೋಗ ಅವಕಾಶಗಳು ಕಡಿಮೆಯಾಗಿದೆ. ಮಹಿಳೆಯರು ಈಗ ಎಲ್ಲಾ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ್ದಾರೆ. ಆದರೂ ಕೂಡಾ ಪುರುಷರಿಗೆ ಸಮಾನವಾದ ಅವಕಾಶ ಮಹಿಳೆಯರಿಗೆ ಲಭ್ಯವಾಗುತ್ತಿಲ್ಲ. ಸಮಾನ ಅವಕಾಶ ಸಿಕ್ಕರೆ ಮಾತ್ರ ಮಹಿಳೆಯರು ಮಾಡಿದ ಸಾಧನೆ ಸಾರ್ಥಕ” ಎಂದು ಸಚಿವೆ ಅಭಿಪ್ರಾಯಿಸಿದರು.
“ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಮಹಾತ್ಮರಾಗಲು, ನೆಹರೂ ದೇಶವನ್ನು ಮುನ್ನಡೆಸಲು ಅವರ ಪತ್ನಿಯರ ಕೊಡುಗೆಯೂ ಇದೆ, ಅವರ ಪತ್ನಿಯರ ತ್ಯಾಗ ಪರಿಶ್ರಮವೂ ಇದರಲ್ಲಿದೆ. ದೇಶದಲ್ಲಿ ಬಹುತೇಕ ಪುರಷ ಸಾಧಕರ ಹಿಂದೆ ಮಹಿಳೆಯರ ಪಾತ್ರ ಇರುತ್ತದೆ” ಎಂದು ಹೇಳಿದರು.
“ಭಾರತದಲ್ಲಿ ಕೌಟುಂಬಿಕ ಚೌಕಟ್ಟಿನಲ್ಲಿಯೇ ಇದ್ದು, ಸೀಮಿತ ಅವಕಾಶವನ್ನು ಬಳಸಿಕೊಂಡು ಮಹಿಳೆಯರು ಮಾಡಿದ, ಮಾಡುತ್ತಿರುವ ಸಾಧನೆಗೆ ನಮ್ಮ ಜಗತ್ತು ಬೆರಗಾಗಿದೆ. ಮಹಿಳೆಯರು ಕೂಲಿ ಕಾರ್ಮಿಕರಾಗಿಯೂ ಕೆಲಸ ಮಾಡುತ್ತಾರೆ, ಗಗನಯಾನಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ, ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಇದ್ದಾರೆ” ಎಂದರು.