ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ‘ಪೂರ್ಣ ಸ್ವರಾಜ್ಯ’ ಎಂಬ ಪ್ರತಿಜ್ಞೆಯನ್ನು ಘೋಷಿಸಿದ್ದರು. ಅದರ ಉದ್ದೇಶ, ದೇಶದ ಪ್ರತಿಯೊಬ್ಬ ಪ್ರಜೆಯೂ ಗೌರವಯುವ ಬದುಕನ್ನ ಕಟ್ಟಿಕೊಳ್ಳಬೇಕೆಂಬುದಾಗಿತ್ತು. ಯಾವ ಸರ್ಕಾರ ಜನರನ್ನು ಶೋಷಣೆ ಮಾಡುತ್ತದೆಯೋ, ಅಂತಹ ಸರ್ಕಾರವನ್ನು ಕಿತ್ತೊಗೆಯಬೇಕು ಎಂದೂ ಆ ಹೋರಾಟಗಾರರು ಹೇಳಿದ್ದರು. ಈಗ ನಾವೂ ‘ಚಲೇ ಜಾವ್’ ಚಳುವಳಿಯನ್ನ ಮಾಡಬೇಕಿದೆ ಎಂದು ಹಿರಿಯ ಹೋರಾಟಗಾರ ಎಸ್.ಆರ್ ಹಿರೇಮಠ್ ಹೇಳಿದ್ದಾರೆ.
“ಅಂಬೇಡ್ಕರ್ ಅವರು ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳಲ್ಲಿ ಸರ್ಕಾರಗಳು ಜನಪರವಾದ ನೀತಿಗಳನ್ನು ತರಬೇಕು ಎಂದು ಹೇಳಿದ್ದಾರೆ. ಆದರೆ, ಅವರ ಆಶಯಕ್ಕೆ ವಿರೋಧವಾಗಿ ನೀತಿಗಳು ಜಾರಿಯಾಗುತ್ತಿವೆ. ಅದಾನಿ, ಅಂಬಾನಿಗಳಂತಹ ಬಂಡವಾಳಿಗರ ಸಂಪತ್ತು ಹೆಚ್ಚುತ್ತಿವೆ. ಸುಳ್ಳು ಭರವಸೆಗಳನ್ನು ನೀಡಿ, ಜನರನ್ನು ಸರ್ಕಾರಗಳು ಯಾಮಾರಿಸುತ್ತಿವೆ” ಎಂದರು.
“ಈಗ ಎರಡನೇ ಸ್ವಾತಂತ್ರ್ಯ ಹೋರಾಟವನ್ನ ನಾವೆಲ್ಲರೂ ಮಾಡಬೇಕಾಗಿದೆ. ಕೋಮುವಾದಿ, ಬಂಡವಾಳಶಾಹಿ ಪರವಾದ ಬಿಜೆಪಿ ಸರ್ಕಾರವನ್ನು ಸೋಲಿಸಬೇಕಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಸೋಲಿಸಿದ್ದೇವೆ. ಆದರೆ, ಅವರು ಮುಂದೆ ಮತ್ತೆ ಮುನ್ನೆಲೆಗೆ ಬರುತ್ತಾರೆ. ಹೀಗಾಗಿ, ಸುದೀರ್ಘ ಹೋರಾಟಗಳು ಕೋಮುವಾದಿ, ಬಂಡವಾಳಶಾಹಿಗಳ ವಿರುದ್ಧ ನಡೆಯಬೇಕಿದೆ. ರಾಷ್ಟ್ರವನ್ನ ಕಟ್ಟುವಲ್ಲಿ ನಾವೆಲ್ಲರೂ ದುಡಿಯಬೇಕಿದೆ” ಎಂದು ಎಸ್.ಆರ್ ಹಿರೇಮಠ್ ಹೇಳಿದ್ದಾರೆ.