ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಬೆಂಗಾವಲು ಪಡೆ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಬಂಧಿತ ಆರೋಪಿಯನ್ನು ಅಹಮ್ಮದ್ ದಿಲ್ವಾರ್ ಹುಸೇನ್ ಎಂದು ಗುರುತಿಸಲಾಗಿದೆ. ದಿಲ್ವಾರ್ ಕಾನ್‌ಸ್ಟೆಬಲ್ ದಿನೇಶ್ ಎಂಬವರ ಮೇಲೆ ಬೈಕ್ ಹತ್ತಿಸಿ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಏರ್ ಶೋ-2025ಕ್ಕೆ ಚಾಲನೆ | ಬೆಂಗಳೂರಲ್ಲಿ ಯುದ್ಧ ವಿಮಾನಗಳ ಮಹಾ ಕುಂಭಮೇಳ: ರಾಜನಾಥ್ ಸಿಂಗ್
ಫೆಬ್ರವರಿ 11ರಂದು ರಾಜನಾಥ್ ಸಿಂಗ್ ಅವರು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ಜಾಗತಿಕ ಹೂಡಿಕೆದಾರರ ಸಮಾವೇಶ’ ಇನ್ವೆಸ್ಟ್ ಕರ್ನಾಟಕ-2025ಕ್ಕೆ ಚಾಲನೆ ನೀಡಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಂದಿದ್ದರು. ಈ ಸಂದರ್ಭದಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಫೆಬ್ರವರಿ 11ರಂದು ಮಧ್ಯಾಹ್ನ 1:50ಕ್ಕೆ ಅನಿಲ್ ಕುಂಬ್ಳೆ ಸರ್ಕಲ್ ಬಳಿ ರಾಜನಾಥ್ ಸಿಂಗ್ ಮತ್ತು ಅವರ ಬೆಂಗಾವಲು ಪಡೆ ತೆರಳುತ್ತಿದ್ದಾಗ ಆರೋಪಿ ಪೊಲೀಸ್ ಭದ್ರತೆಯನ್ನು ಮೀರಿ ಬೈಕ್‌ನಲ್ಲಿ ನುಗ್ಗಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಕಾನ್‌ಸ್ಟೆಬಲ್ ದಿನೇಶ್ ನೀಡಿದ ದೂರಿನ ಆಧಾರದಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ದೂರು ದಾಖಲಿಸಿದ್ದು, ಹುಸೇನ್ ಬಂಧನ ಮಾಡಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
