“ಸರ್ಕಾರ ಕೂಡಲೇ ಮೆಟ್ರೋ ದರ ಇಳಿಕೆ ಮಾಡಬೇಕು. ಇಲ್ಲವಾದರೇ, ಮುಂದಿನ ದಿನಗಳಲ್ಲಿ ಮೆಟ್ರೋ ‘ಬಾಯ್‌ಕಾಟ್’ ಮಾಡಬೇಕಾಗುತ್ತದೆ” ಎಂದು ಕರ್ನಾಟಕ ಇಂಡಸ್ಟ್ರೀಯಲ್ ಅಂಡ್ ಅದರ್ ಎಸ್ಟಾಬ್ಲಿಷ್‌ಮೆಂಟ್ಸ್ ಎಂಪ್ಲಾಯೀಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕೆ ಎ ಗಂಗಣ್ಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮೆಟ್ರೋ ದರ ಏರಿಕೆ ಖಂಡಿಸಿ ಜನಾಂದೋಲನ ಸಂಘಟನಾ ವೇದಿಕೆ ಹಾಗೂ ಕರ್ನಾಟಕ ಇಂಡಸ್ಟ್ರೀಯಲ್ ಅಂಡ್ ಅದರ್ ಎಸ್ಟಾಬ್ಲಿಷ್‌ಮೆಂಟ್ಸ್ ಎಂಪ್ಲಾಯೀಸ್ ಫೆಡರೇಷನ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ವೇಳೆ ಮಾತನಾಡಿದ ಅವರು, “ಸಾರ್ವಜನಿಕರ ತೆರಿಗೆ ಹಣದಿಂದ ಸರ್ಕಾರಿ ಸಂಸ್ಥೆಯೊಂದು ಲಾಭ ಪಡೆಯಲು ಇಷ್ಟೊಂದು ದರ ಏರಿಕೆ ಮಾಡಿದ್ದಾರೆ. ಸರ್ಕಾರಿ ಸಂಸ್ಥೆಯೊಂದು ಲಾಭಕೋರತನ ಮನಸ್ಥಿತಿ ಬೆಳೆಸಿಕೊಂಡರೆ, ಇದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ದರ ಏರಿಕೆ ಮಾಡಲು ಮುಂದಾಗಬಹುದು. ಬಿಜೆಪಿ ಮತ್ತು ಕಾಂಗ್ರೆಸ್ ಅನುಕೂಲಕರ ರಾಜಕೀಯ ಮಾಡುತ್ತಿದ್ದಾರೆ. ಜೆಡಿಎಸ್ ಮುಖಂಡರು ಈ ಬಗ್ಗೆ ಬಾಯಿನೇ ಬಿಡುತ್ತಿಲ್ಲ. ಶಾಸಕರು, ಸಂಸದರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ರಾಜಕೀಯ ನಾಯಕರು ನಿಜವಾಗಿಯೂ ಜನರ ಪರವಾಗಿದ್ದರೇ, ಜನರ ಪರವಾಗಿ ಬೀದಿಗಿಳಿದು ಹೋರಾಟ ಮಾಡಬೇಕು” ಎಂದರು.
“ದರ ನಿಗದಿ ಸಮಿತಿಯನ್ನು ಕೇಂದ್ರ ಸರ್ಕಾರ ಮಾಡಿದ್ದು, ಈ ಸಮಿತಿಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ಇದ್ದಾರೆ. ಹಾಗಾಗಿ, ಈ ದರ ಏರಿಕೆ ನಮ್ಮದಲ್ಲ ಎಂದು ಇಬ್ಬರು ನುಣುಚಿಕೊಳ್ಳದೇ, ಕೂಡಲೇ ಇದಕ್ಕೆ ಪರಿಹಾರ ನೀಡಬೇಕು. ಇನ್ನೊಂದು ವಾರದಲ್ಲಿ ದರ ಇಳಿಕೆ ಮಾಡಲೇಬೇಕು. ಇದು ಹೀಗೆಯೇ ಮುಂದುವರಿದರೆ, ಮುಂದೊಂದು ದಿನ ಬೆಂಗಳೂರಿನಲ್ಲಿ ಮೆಟ್ರೋ ಬಾಯ್‌ಕಾಟ್ ಮಾಡಬೇಕಾಗುತ್ತದೆ” ಎಂದು ಕೆ ಎ ಗಂಗಣ್ಣ ಹೇಳಿದರು.
ಜನಾಂದೋಲನ ಸಂಘಟನೆಯ ಸಂಚಾಲಕ ಧರಣೇಶ್ ಮಾತನಾಡಿ, “ಜನರ ಸ್ಥಿತಿಗತಿಗಳನ್ನ ಪರಿಗಣನೆಗೆ ತೆಗೆದುಕೊಳ್ಳದೇ, ಜನರ ಅಭಿಪ್ರಾಯವನ್ನ ತೆಗೆದುಕೊಳ್ಳದೇ, ಮೆಟ್ರೋ ದರ ಏರಿಕೆ ಮಾಡಿದ್ದಾರೆ. ಇವತ್ತು ಕೆಲಸದ ದಿನ ಆದರೂ ಕೂಡ ಹಲವು ಕಾರ್ಮಿಕರು ಇವತ್ತಿನ ದಿನ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡು ಸೇರಿ ಜನರ ಮೇಲೆ ದರ ಹೇರಿಕೆ ಹಾಕಿದ್ದಾರೆ. ಕೇಂದ್ರ 5 ಅಧಿಕಾರಿಗಳು ರಾಜ್ಯದ 5 ಅಧಿಕಾರಿಗಳು ಸೇರಿ ದರ ಹೆಚ್ಚಳ ಮಾಡಿದ್ದಾರೆ. ಇದು ಅವೈಜ್ಞಾನಿಕ ದರ ಏರಿಕೆಯಾಗಿದೆ. ಯಾವ ಆಧಾರದ ಮೇಲೆ 100% ದರ ಏರಿಕೆ ಮಾಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಈ ಕಮಿಟಿಯಲ್ಲಿ ನಿವೃತ್ತ ನ್ಯಾಯಾಧೀಶರೊಬ್ಬರೂ ಇದ್ದಾರೆ. ಅವರು ಕೂಡ ಜನರ ಸಮಸ್ಯೆಗಳನ್ನ ಪರಿಗಣನೆಗೆ ತೆಗೆದುಕೊಂಡಿಲ್ಲ” ಎಂದು ತಿಳಿಸಿದರು.
“ಮೆಟ್ರೋ ಮಹಿಳೆಯರಿಗೆ, ರೋಗಿಗಳಿಗೆ, ವಯೋವೃದ್ಧರಿಗೆ ಉತ್ತಮ ಸಾರಿಗೆ ವ್ಯವಸ್ಥೆಯಾಗಿದೆ. ಇದು ಜನರಿಗೆ ಸೇವೆ ನೀಡಬೇಕಾದ ಸಂಸ್ಥೆಯಾಗಬೇಕು. ಲಾಭ ಗಳಿಸಬೇಕು ಎಂಬುದನ್ನ ಬಿಡಬೇಕು. ಮೆಟ್ರೋ ದರ ಏರಿಕೆಯಿಂದ ಜನರು ಬಸ್ ಆಟೋಗಳನ್ನ ಅವಲಂಬಿಸುತ್ತಿದ್ದಾರೆ. ಈ ದರ ಏರಿಕೆಯಿಂದ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತದೆ. ಈ ಮೆಟ್ರೋವನ್ನ ಅತಿ ಹೆಚ್ಚು ಬಳಸುತ್ತಿರುವವರು ಐಟಿ-ಬಿಟಿ ಕಂಪನಿಯಲ್ಲಿ ಕೆಲಸ ಮಾಡುವವರು, ಮೇಲು ಮಧ್ಯಮರ್ಗದ ಜನ ಹಾಗೇಯೇ ಮಧ್ಯಮರ್ಗದ ಜನ ಈ ಮೆಟ್ರೋವನ್ನು ಹೆಚ್ಚಾಗಿ ಬಳಸುತ್ತಾರೆ. ಈ ಮೆಟ್ರೋ ರನ್ ಆಗುವುದು ಕೂಡ ವಿದ್ಯುತ್ ಮೂಲಕ. ಆದರೆ, ವಿದ್ಯುತ್ ದರ ಜಾಸ್ತಿ ಆಗಿಲ್ಲ. ಆದರೆ, ಯಾವ ಆಧಾರದ ಮೇಲೆ ದರ ಏರಿಕೆ ಮಾಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಸರ್ಕಾರದ ಈ ಧೋರಣೆ ಪರಿಸರ ವಿರೋಧಿ ಮತ್ತು ಜನ ವಿರೋಧಿ ಧೋರಣೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕನ್ನಡೇತರರಿಗಾಗಿ ಉಚಿತ ಕನ್ನಡ ಕಲಿಕಾ ಕೇಂದ್ರ ಆರಂಭ
ವಕೀಲ ವಿನೋದ್ ಮಾತನಾಡಿ, “ಮೆಟ್ರೋ ದರ ಹೆಚ್ಚಳದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ನಗರದಲ್ಲಿ ಪ್ರತಿಯೊಬ್ಬರು ಮೆಟ್ರೋ ಬಳಸುವುದಕ್ಕೆ ಅನಿವಾರ್ಯ ಮಾಡಿದ್ದಾರೆ. ಅನಿವಾರ್ಯ ಮಾಡಿ ದರ ಹೆಚ್ಚಳ ಮಾಡಿದ್ದಾರೆ. ತೇಜಸ್ವಿ ಸೂರ್ಯ ಅವರು ಪಾರ್ಲಿಮೆಂಟ್‌ನಲ್ಲಿ ರಾಜಕೀಯವಾಗಿ ಮಾತನಾಡಿದ್ದಾರೆ. ಹೊರತು ಜನರ ಪರವಾಗಿ ಅವರು ಧ್ವನಿ ಎತ್ತಿಲ್ಲ. ಯಾಕೆಂದರೆ, ಈ ದರ ಏರಿಕೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಇವೆ. ಆದರೆ, ತೇಜಸ್ವಿ ಸೂರ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ಮಾತ್ರ ಮಾತಾಡಿದ್ದಾರೆ. ಮೆಟ್ರೋ ದರ ಏರಿಕೆ ವಿಚಾರದಲ್ಲಿ ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರು ಧ್ವನಿ ಎತ್ತಬೇಕು. ಎಲ್ಲರೂ ಒಟ್ಟಾಗಿ ಧ್ವನಿ ಎತ್ತಿದಾಗ ಮಾತ್ರ ಪ್ರತಿಫಲ ಸಿಗುತ್ತದೆ” ಎಂದರು.
ನೌಕರ್ ಲೋಕೇಶ್ ಮಾತನಾಡಿ, “ನಾನು ಕೆಲಸ ಮಾಡುವ ಕಂಪನಿ ಪಕ್ಕ ಮೆಟ್ರೋ ಸ್ಟೇಷನ್ ಇದೆ. ನಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಕೂಡ ಈ ಮೆಟ್ರೋ ಬಳಸುತ್ತಾರೆ. ನಾವು ಕಾರ್ಮಿಕರು ನಮಗೆ ಸಿಗುವುದು ಕಡಿಮೆ ಸಂಬಳ. 20 ರಿಂದ 30 ರೂಪಾಯಿ ಇದ್ದ ಟಿಕೆಟ್ ದರ ಈಗ ಡಬಲ್ ಮಾಡಿದ್ದಾರೆ. ಅಂದರೆ, 60 ದಿಂದ 80 ರೂಪಾಯಿಗೆ ದರ ಏರಿಕೆ ಮಾಡಿದ್ದಾರೆ. ಮೆಟ್ರೋ ದರ ಇಷ್ಟೊಂದು ಏರಿಕೆ ಮಾಡಿದ್ದಾರೆ. ನಮ್ಮ ಮಕ್ಕಳು ಕೂಡ ಮೆಟ್ರೋವನ್ನ ಅವಲಂಬಿಸಿದ್ದಾರೆ. ಅವರದು ಕೂಡ 25 ರೂಪಾಯಿ ಇದ್ದ ದರ 60 ರೂಪಾಯಿ ಆಗಿದೆ. ಮೆಟ್ರೋ ದರ ಇಳಿಕೆ ಆಗಲೇಬೇಕು. ಅಲ್ಲಿಯವರೆಗೂ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ” ಎಂದರು.
