ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸವಾಲೆಸೆದ ರಾಜ್ಯ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, “ಕರ್ನಾಟಕದ ಜನರಿಗೆ ಅನ್ಯಾಯ ಮಾಡಿದ್ದೀರಿ. ನಿರ್ಮಲಾ ಅವರು ಮೈಸೂರಿಗೆ ಬರಲಿ ಬಹಿರಂಗವಾಗಿ ಚರ್ಚೆಗೆ ಸಿದ್ಧವಿದ್ದೇವೆ” ಎಂದು ಹೇಳಿದರು.
ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, “ನಾವು ಹಣಕಾಸು ಆಯೋಗದ ಶಿಫಾರಸಿನ ಆಧಾರದಲ್ಲಿ ಸಾಂವಿಧಾನಿಕವಾಗಿ ನಮಗೆ ಬರಬೇಕಾದ ಹಣವನ್ನು ಕೇಳುತ್ತಿದ್ದೇವೆ. ನಾವು ಭಿಕ್ಷೆ ಕೇಳುತ್ತಿಲ್ಲ. ನಮ್ಮ ರಾಜ್ಯದ ಹಕ್ಕನ್ನು ಕೇಳಿದಾಗ, ನಾವು ಸುಳ್ಳು ಹೇಳುತ್ತಿದ್ದೇವೆಂದು ಆರೋಪ ಹೊರಿಸಿ, ಕರ್ನಾಟಕದ ಜನರಿಗೆ ಅನ್ಯಾಯ ಮಾಡಿದ್ದೀರಿ. ನಿರ್ಮಲಾ ಅವರು ಮೈಸೂರಿಗೆ ಬರಲಿ ಬಹಿರಂಗವಾಗಿ ಚರ್ಚೆಗೆ ಸಿದ್ಧವಿದ್ದೇವೆ” ಎಂದು ಸವಾಲೆಸೆದರು.
“ನಮ್ಮ ಗ್ಯಾರಂಟಿಗೆ ನಯಾಪೈಸೆ ಬೇಕಾಗಿಲ್ಲ. ನಮ್ಮ ತೆರಿಗೆಯಿಂದ ನಮ್ಮ ಪಾಲನ್ನು ಕೊಡಿ. ನಮ್ಮ ರಾಜ್ಯಕ್ಕೆ ಬರಬೇಕಾದ ಬರಪರಿಹಾರವನ್ನು ಕೊಡಿ. ನಿಮ್ಮ ಉದಾರತನ ಬೇಕಾಗಿಲ್ಲ. ನಮ್ಮ ರಾಜ್ಯದ ಜನ ಇರುವುದು ವೋಟು ಹಾಕಲು ತೆರಿಗೆ ಕಟ್ಟಲು ಅಲ್ಲ. ನಾವು ಎರಡನೇ ದರ್ಜೆಯ ಪ್ರಜೆಗಳಲ್ಲ, ನಾವೂ ಕೂಡ ಸಮಾನ ಪ್ರಜೆಗಳು” ಎಂದು ಕೇಂದ್ರ ಸರ್ಕಾರದ ವಿರುದ್ಧ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ವಾಗ್ದಾಳಿ ನಡೆಸಿದರು.
“ಕೇಂದ್ರ ಹಣಕಾಸು ಸಚಿವರು ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆ ಪಾಲು ಯಾವುದೇ ಹಣ ಬಾಕಿ ಉಳಿಸಿಕೊಂಡಿಲ್ಲವೆಂದು ಹೇಳಿಕೆಯನ್ನು ನೀಡಿದ್ದಾರೆ. ಇದು ಹೇಗಿದೆ ಎಂದರೆ ನಿಮಗೆ ಮನವರಿಕೆ ಮಾಡಲು (convince) ಆಗದಿದ್ದರೆ ಗೊಂದಲವನ್ನು (confuse) ಸೃಷ್ಟಿಸಿ ಎಂಬಂತಿದೆ. ಇದು ಅನ್ಯಾಯವನ್ನು ಮರೆಮಾಚಲು ಸತ್ಯವನ್ನು ಮುಚ್ಚಿಹಾಕಲು ಮಾಡುತ್ತಿರುವ ಪ್ರಯತ್ನ” ಎಂದು ಆರೋಪಿಸಿದರು.
“ನಿರ್ಮಲಾ ಅವರು 2021ನೇ ವರ್ಷಕ್ಕೆ ಹಣಕಾಸು ಆಯೋಗದವರು ಮಾಡಿರುವ ಶಿಫಾರಸು ಅಂತಿಮ ವರದಿಯಲ್ಲಿ ಬಂದಿಲ್ಲ ಎಂದಿದ್ದಾರೆ. ಹಣಕಾಸು ವರ್ಷಕ್ಕೆ ಒಂದು ವರದಿಯನ್ನು ಕೊಟ್ಟಿದ್ದಾರೆ. 2019- 20ರಲ್ಲಿ ನೀಡಿದ ಅನುದಾನಕ್ಕಿಂತ ಈ ವರ್ಷ ಕಡಿಮೆ ಅನುದಾನವನ್ನು ನೀಡುವಂತಿಲ್ಲವೆಂದು ಹಣಕಾಸು ಆಯೋಗ ಹೇಳುತ್ತದೆ. ಹಣಕಾಸು ಆಯೋಗದವರು 2019-20ರಲ್ಲಿ ಕರ್ನಾಟಕಕ್ಕೆ ಎಷ್ಟು ಅನುದಾನ ಬಂದಿತ್ತು ಮತ್ತು 2020-21ರಲ್ಲಿ ಎಷ್ಟು ಅನುದಾನ ಬರಬೇಕೆಂದು ಲೆಕ್ಕ ಹಾಕಿದ್ದು, ಕೇಂದ್ರದಿಂದ ಬರುವ ಹಣ 5,000 ಕೋಟಿ ರೂಪಾಯಿ ಕಡಿಮೆಯಾಗುತ್ತಿದೆ” ಎಂದು ವಿವರಿಸಿದರು.
“5,495 ಕೋಟಿ ರೂಪಾಯಿ ಅನುದಾನ ಕಡಿಮೆಯಾಗುತ್ತಿದೆ. ಇಷ್ಟು ಹಣವನ್ನು ವಿಶೇಷವಾಗಿ ಕೊಡಬೇಕೆಂದು ಹಣಕಾಸು ಆಯೋಗ ಹೇಳಿದೆ. 19-20ರಲ್ಲಿ 36,675 ಕೋಟಿ ರೂಪಾಯಿ ತೆರಿಗೆ ಬಂದಿದೆ. 2020-21ರಲ್ಲಿ 31,180 ಕೋಟಿಗೆ ತೆರಿಗೆ ಕುಸಿದಿದೆ. ಈ ಕುಸಿತವಾಗಿರುವ 6,465 ಕೋಟಿ ರೂಪಾಯಿಯನ್ನು ಸರಿದೂಗಿಸಬೇಕೆಂದು ಹಣಕಾಸು ಆಯೋಗ ಹೇಳಿದೆ. ವರದಿಯ ಪುಟ 37ರಲ್ಲಿ ಇದರ ಉಲ್ಲೇಖವಿದೆ. ಇದಕ್ಕೆ ಕೇಂದ್ರ ಸರ್ಕಾರದವರು ಏನು ಮಾಡಿದ್ದಾರೆಂಬ ಪ್ರಶ್ನೆ ಇಲ್ಲಿ ಬರುತ್ತದೆ” ಎಂದರು.
ಯಡಿಯೂರಪ್ಪ ಸುಳ್ಳು ಹೇಳಿದ್ದಾರಾ?
“ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 2020ರ ಸೆಪ್ಟೆಂಬರ್ 17ರಲ್ಲಿ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿ ಎಂದು ಕೋರಿದ್ದರು. ಇದು ಪತ್ರಿಕೆಯಲ್ಲಿ ವರದಿಯಾಗಿದೆ. ಈಗ ಸಿದ್ದರಾಮಯ್ಯನವರು ಸುಳ್ಳು ಹೇಳುತ್ತಿದ್ದಾರೆ ಎನ್ನುವುದಾದರೆ ಯಡಿಯೂರಪ್ಪನವರು ಸುಳ್ಳು ಹೇಳಿದ್ದಾರಾ” ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಸಕಾಲ ಯೋಜನೆ ಅಡಿ 120 ಸೇವೆಗಳ ಸೇರ್ಪಡೆ: ಸಚಿವ ಕೃಷ್ಣ ಬೈರೇಗೌಡ
“ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ. ‘ನಾನು ನಿಮಗೆ ಈಗಾಗಲೇ ಉತ್ತರಿಸಿದ್ದೇನೆ. ನಿಮ್ಮ ವಿಶೇಷ ಅನುದಾನವನ್ನು ನೀವೇ ಭರಿಸಿಕೊಳ್ಳಿ’ ಎಂದು ಆ ಸಂದರ್ಭದಲ್ಲಿ ವಿತ್ತ ಸಚಿವೆ ಉತ್ತರಿಸಿದ್ದಾರೆ. ಬಸವರಾಜ ಬೊಮ್ಮಾಯಿಯವರು ಇದ್ದಾಗ ಗ್ಯಾರಂಟಿ ಯೋಜನೆ ಇತ್ತೇ” ಎಂದು ಕೇಳಿದರು.
ಉತ್ತರಾವಾದರೂ ನೀಡಿ
“ರಾಜ್ಯಗಳಿಗೆ ನೀಡಿರುವ ವಿಶೇಷ ಅನುದಾನವನ್ನು ಹಿಂಪಡೆಯಲಾಗುತ್ತದೆ. ಆದರೆ ಇದಕ್ಕೆ ಯಾವುದೇ ಉತ್ತರವನ್ನು ನೀಡಲಾಗಿಲ್ಲ. 2021-22ನೇ ಸಾಲಿನ ವರದಿಯಲ್ಲಿ ಆರು ಸಾವಿರ ಕೋಟಿಗಳನ್ನು ಶಿಫಾರಸು ಮಾಡಲಾಗಿದೆ. ಈ ಆರು ಸಾವಿರ ಕೋಟಿಯನ್ನು ಯಾಕೆ ನೀಡಿಲ್ಲವೆಂಬ ಉತ್ತರವನ್ನು ನೀಡಿ” ಎಂದು ಹೇಳಿದರು.
“ಹಣಕಾಸು ಆಯೋಗದ ಒಂದೇ ಒಂದು ಶಿಫಾರಸನ್ನು ನಾವು ತಿದ್ದುಪಡಿ ಮಾಡಲ್ಲ ಎಂದು ನಿರ್ಮಲಾ ಅವರೇ ಹೇಳಿದ್ದಾರೆ. ₹11,495 ಕೋಟಿ ಕರ್ನಾಟಕಕ್ಕೆ ಬರಬೇಕಿದೆ. ಹಣಕಾಸು ಆಯೋಗದ ಶಿಫಾರಸ್ಸೇ ಅಂತಿಮ ಎಂದ ನೀವು ಈಗ ಮಾಡುತ್ತಿರುವುದು ಏನು? ಕರ್ನಾಟಕಕ್ಕೆ ಅನ್ಯಾಯ ಮಾಡಬೇಡಿ” ಎಂದರು.
“ಇದು ರಾಜಕೀಯ ಕೆಸರೆರೆಚಾಟ ಆಗಬಾರದು, ರಾಜಕೀಯ ತೆವಲಾಟ ಆಗಬಾರದು. ಯಾಕೆ ಈ ಧೋರಣೆ. ಕರ್ನಾಟಕದಂತಹ ಪ್ರಗತಿಪರ ರಾಜ್ಯಗಳಿಗೆ ಅನ್ಯಾಯವೇಕೆ” ಎಂದು ಪ್ರಶ್ನಿಸಿದ ಅವರು, “ಗ್ಯಾರಂಟಿಗೆ ಕೇಂದ್ರ ಸರ್ಕಾರದ ನಯಾಪೈಸೆಯೂ ಬೇಕಾಗಿಲ್ಲ. ನಮ್ಮ ಗ್ಯಾರಂಟಿಗೆ ಬೇಕಾದ ಹಣವನ್ನು ನಾವೇ ಹೊಂದಿಸಿಕೊಳ್ಳುತ್ತಿದ್ದೇವೆ. ಗ್ಯಾರಂಟಿ ಜೊತೆಗೆ ₹11,200 ಕೋಟಿ ಪಿಂಚಣಿ ನೀಡುತ್ತೇವೆ. ಈ ಪೈಕಿ 550 ಕೋಟಿ ರೂಪಾಯಿ ಕೇಂದ್ರದಿಂದ ಬರುತ್ತದೆ. ಉಳಿದ ಮೊತ್ತ ರಾಜ್ಯ ಸರ್ಕಾರವೇ ಹೊಂದಿಸುತ್ತದೆ” ಎಂದು ಹೇಳಿದರು.