“ಬಂಗಾರಪೇಟೆ, ಕೆಂಗೇರಿ, ಕೃಷ್ಣರಾಜಪುರ, ಮಂಡ್ಯ, ಚನ್ನಪಟ್ಟಣ, ಹೊಸೂರು, ಹಿಂದೂಪುರ, ಕುಪ್ಪಂ, ಮಾಲೂರು, ರಾಮನಗರ, ತುಮಕೂರು ಹಾಗೂ ವೈಟ್‌ಫೈಲ್ಡ್ ನಿಲ್ದಾಣಗಳನ್ನು (15 ನಿಲ್ದಾಣ) ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಆಧುನೀಕರಿಸಲು ಉದ್ದೇಶಿಸಲಾಗಿದೆ” ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್ ಹೇಳಿದ್ದಾರೆ.
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ರೈಲ್ವೆ ವಿಭಾಗೀಯ ಕಚೇರಿಯಲ್ಲಿ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ (ಡಿಆರ್‌ಯುಸಿಸಿ) ಮೂರನೇ ಸಭೆ ನಡೆಸಿತು. ಈ ವೇಳೆ, ಮಾತನಾಡಿದ ಅವರು, “ಯಶವಂತಪುರ-ಚೆನ್ನಸಂದ್ರ ನಡುವೆ ದ್ವಿಪಥೀಕರಣ, ಬೈಯ್ಯಪ್ಪನಹಳ್ಳಿ-ಹೊಸೂರು ಮತ್ತು ಪೆನುಕೊಂಡ-ಧರ್ಮಾವರಂ ನಡುವೆ ವಿದ್ಯುದ್ದೀಕರಣದೊಂದಿಗೆ ದ್ವಿಪಥೀಕರಣ ಮತ್ತು ಬೆಂಗಳೂರು ಕಂಟೋನ್ಮೆಂಟ್ – ವೈಟ್‌ಫೀಲ್ಡ್‌ನ ಚತುಷ್ಪಥ ಕಾಮಗಾರಿ ವೇಗವಾಗಿ ನಡೆಯುತ್ತಿದೆ” ಎಂದು ಅವರು ತಿಳಿಸಿದ್ದಾರೆ.
“ನವೆಂಬರ್ 2023ರಲ್ಲಿ ವಿಭಾಗವು ತನ್ನ ಅತ್ಯಧಿಕ ಸರಕು ಆದಾಯ ₹24.22 ಕೋಟಿ ಗಳಿಸಿದೆ. ವಿಭಾಗವು ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೆ ₹173.17 ಕೋಟಿ ಒಟ್ಟು ಸರಕು ಸಾಗಣೆ ಆದಾಯವನ್ನು ದಾಖಲಿಸಿದೆ” ಎಂದು ಹೇಳಿದ್ದಾರೆ.
“ಏಪ್ರಿಲ್ 2023ರಲ್ಲಿ ವಿಭಾಗವು, ಪೆಟ್ರೋಲಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆಯನ್ನು ಹೊಸದಾಗಿ ಪ್ರಾರಂಭಿಸಿದೆ. ಇಲ್ಲಿಯವರೆಗೆ 63 ರೇಕ್‌ಗಳನ್ನು ಲೋಡ್ ಮಾಡಲಾಗಿದ್ದು, ₹9.33 ಕೋಟಿ ಆದಾಯ ಗಳಿಸಿದೆ” ಎಂದು ಮಾಹಿತಿ ನೀಡಿದ್ದಾರೆ.
“ವಿಭಾಗವು ಅಕ್ಟೋಬರ್, 2023ರಲ್ಲಿ ದೊಡ್ಡಬಳ್ಳಾಪುರದಿಂದ ರಾಜಸ್ಥಾನದ ಕನಕಪುರಕ್ಕೆ ಮೊದಲ ಬಾರಿಗೆ ಟ್ರ್ಯಾಕ್ಟರ್‌ಗಳನ್ನು ಲೋಡ್ ಮಾಡಿದೆ. ಆಟೋಮೊಬೈಲ್ ಸಾಗಣೆಗೆ ಸಂಬಂಧಿಸಿದಂತೆ, ವಿಭಾಗವು ನವೆಂಬರ್, 2023 ರವರೆಗೆ 430 ರೇಕ್‌ಗಳನ್ನು ಲೋಡ್ ಮಾಡಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 35% ಹೆಚ್ಚಾಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಷ್ಟ್ರದ ಭವಿಷ್ಯ ಯುವ ಸಮೂಹದ ಕೈಯಲ್ಲಿದೆ : ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
“ಒಟ್ಟಾರೆ, ಸರಕು ಲೋಡಿಂಗ್ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ವಿಭಾಗವು ನವೆಂಬರ್, 2023 ರವರೆಗೆ 515 ರೇಕ್‌ಗಳನ್ನು ಲೋಡ್ ಮಾಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 46% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕ್ಯಾತಸಂದ್ರ, ನಿಡವಂದ, ಪೆನುಕೊಂಡ ಮತ್ತು ವೈಟ್‌ಫೀಲ್ಡ್‌ನಲ್ಲಿರುವ ಗೂಡ್ಸ್ ಶೆಡ್‌ಗಳನ್ನು ಫೆನ್ಸಿಂಗ್/ಬೌಂಡರಿ, ಶೆಲ್ಟರ್, ವರ್ತಕರ ಕೊಠಡಿಗಳು, ಕಾರ್ಮಿಕರಿಗೆ ಕ್ಯಾಂಟೀನ್, ವಿಶ್ರಾಂತಿ ಕೊಠಡಿ ಮುಂತಾದ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೆ ಏರಿಸಲು ಉದ್ದೇಶಿಸಲಾಗಿದೆ” ಎಂದು ಹೇಳಿದ್ದಾರೆ.
ರೈಲು ನಿಲ್ದಾಣಗಳಲ್ಲಿನ ಪ್ರಯಾಣಿಕರ ಸೌಕರ್ಯಗಳನ್ನು ಸುಧಾರಿಸಲು ರೈಲುಗಳಲ್ಲಿ ಪ್ರಯಾಣಿಕರ ಸುಖಾನುಭವವನ್ನು ವರ್ಧಿಸಲು ಮತ್ತು ವಿಭಾಗದ ಪಾರ್ಸೆಲ್ ಆದಾಯವನ್ನು ಹೆಚ್ಚಿಸಲು ಸಲಹೆಗಳನ್ನು ನೀಡಲು ಅವರು ಸದಸ್ಯರಿಗೆ ಕರೆ ನೀಡಿದರು.