ಮಳಿಗೆಗಳು, ವಾಣಿಜ್ಯ ಕಟ್ಟಡಗಳಲ್ಲಿ ಶೇ.60ರಷ್ಟು ಕನ್ನಡವುಳ್ಳ ನಾಮಫಲಕ ಅಳವಡಿಸಿಕೊಳ್ಳಲು ನೀಡಿದ್ದ ಗಡುವನ್ನ ಸರ್ಕಾರ ಮಾರ್ಚ್ 14ರವರೆಗೆ ವಿಸ್ತರಿಸಿದೆ. ಮಾರ್ಚ್ 14ರ ನಂತರವೂ ನಾಮಫಲಕಗಳು ಬದಲಾಗದೇ ಇದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಮತ್ತೆ ಹೋರಾಟ ನಡೆಸುತ್ತದೆ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕಾ ಹೇಳಿಕೆ ನೀಡಿರುವ ನಾರಾಯಣಗೌಡ, “ರಾಜ್ಯ ಸರ್ಕಾರ ಸಮಗ್ರ ಕನ್ನಡ ಅನುಷ್ಠಾನ ವಿಧೇಯಕವನ್ನು ಮಂಡಿಸಿ, ಕಾನೂನನ್ನು ಜಾರಿಗೆ ತಂದಿದೆ. ಹೀಗಿದ್ದರೂ ಬೆಂಗಳೂರಿನಲ್ಲಿ ಇನ್ನೂ ಹಲವೆಡೆ ನಾಮಫಲಕಗಳು ಬದಲಾಗಿಲ್ಲ. ಮಾರ್ಚ್ 14ರ ಒಳಗೆ ಬದಲಾಗದಿದ್ದರೆ, ಕರವೇ ಹೋರಾಟದ ಬಿಸಿ ಮುಟ್ಟಿಸಲಿದೆ” ಎಂದಿದ್ದಾರೆ.
“ಕನ್ನಡ ವಿಧೇಯಕ ಜಾರಿಗೆ ಬಂದ ಹಿನ್ನೆಲೆಯಲ್ಲಿ ಮಾರ್ಚ್ 5ರಂದು ರಾಜ್ಯದ ಜಿಲ್ಲಾ ಕೇಂದ್ರಗಳು, ತಾಲ್ಲೂಕು ಕೇಂದ್ರಗಳಲ್ಲಿ ಕರವೇ ಕಾರ್ಯಕರ್ತರು ಜಾಗೃತಿ ಮೆರವಣಿಗಳನ್ನು ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರದ ಕಾನೂನಿನ ಪ್ರಕಾರ ಶೇ.60 ರಷ್ಟು ಕನ್ನಡ ಅಕ್ಷರಗಳೊಂದಿಗೆ ಅಗ್ರಸ್ಥಾನದಲ್ಲಿ ಕನ್ನಡ ನಾಮಫಲಕ ಅಳವಡಿಸುವಂತೆ ಜಾಗೃತಿ ಮೂಡಿಸಲಾಗುತ್ತದೆ” ಎಂದು ಹೇಳಿದ್ದಾರೆ.
“ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಆಯಾ ಭಾಗರ ಸ್ಥಳೀಯ ಆಡಳಿತ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸರ್ಕಾರದ ಕಾನೂನಿನ ಅನುಷ್ಠಾನದ ವಿಷಯದಲ್ಲಿ ಬೇಜವಾಬ್ದಾರಿ ತೋರಿದರೆ ಅಧಿಕಾರಗಳ ವಿರುದ್ಧವೂ ಕರವೇ ಹೋರಾಟ ಸಂಘಟಿಸಲಿದೆ” ಎಂದಿದ್ದಾರೆ.
“ರಾಜ್ಯದ ಪ್ರತಿ ನಗರ, ಪಟ್ಟಣ, ಹಳ್ಳಿಯ ನಾಮಫಲಕಗಳೂ ಕನ್ನಡೀಕರಣವಾಗುವವರೆಗೆ ಕರ್ನಾಟಕ ರಕ್ಷಣಾ ವೇದಿಕೆ ವಿರಮಿಸುವ ಪ್ರಶ್ನೆಯೇ ಇಲ್ಲ. ಪೊಲೀಸರ ಹತ್ತಾರು ಕೇಸುಗಳು, ಜೈಲು ಶಿಕ್ಷೆ ಎಲ್ಲವನ್ನು ಅನುಭವಿಸಿ ನಾವು ಹೋರಾಟ ರೂಪಿಸಿದ್ದೇವೆ. ನಾಮಫಲಕ ಅಭಿಯಾನ ನೂರಕ್ಕೆ ನೂರು ಯಶಸ್ವಿಯಾಗುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ” ಎಂದು ತಿಳಿಸಿದ್ದಾರೆ.