2023 ಕಳೆದು 2024ರ ಹೊಸ ವರ್ಷಕ್ಕೆ ಕಾಲಿಡಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವೇಳೆ, ನಗರದ ಹಲವೆಡೆ ಸಂಭ್ರಮಾಚರಣೆಯ ಕಾರ್ಯಕ್ರಮ ನಡೆಯುತ್ತದೆ. ಇನ್ನು ಬ್ರೀಗೆಡ್ ರೋಡ್‌ನಲ್ಲಿ ಹೊಸ ವರ್ಷದ ಆಚರಣೆಗೆ ಜನಜಾತ್ರೆಯೇ ತುಂಬಿರುತ್ತದೆ. ಈ ಹಿನ್ನೆಲೆ, ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಪ್ರಯಾಣಿಕರ ಅನುಕೂಲಕ್ಕಾಗಿ ನೇರಳೆ ಮತ್ತು ಹಸಿರು ಮಾರ್ಗದ ರೈಲುಗಳನ್ನು 2023ರ ಡಿಸೆಂಬರ್ 31ರಂದು ತಡರಾತ್ರಿ 1:30 ರವರೆಗೆ ಸಂಚರಿಸಲಿವೆ ಎಂದು ಹೇಳಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಬಿಎಂಆರ್‌ಸಿಎಲ್, “ಹೊಸ ವರ್ಷ 2024ರ ಮುನ್ನಾದಿನದಂದು ನಿಗಮವು ಮೆಟ್ರೋ ರೈಲು ಸೇವೆಗಳನ್ನು ನೇರಳೆ ಮತ್ತು ಹಸಿರು ಮಾರ್ಗದಲ್ಲಿ ವಿಸ್ತರಿಸುತ್ತಿದೆ. ಕೊನೆಯ ರೈಲು ಸೇವೆ ಎಲ್ಲ ಟರ್ಮಿನಲ್ ನಿಲ್ದಾಣಗಳಿಂದ ಡಿಸೆಂಬರ್ 31ರ ಮಧ್ಯರಾತ್ರಿ 01:30 ಗಂಟೆಗೆ ಓಡಾಡಲಿವೆ. ಈ ವಿಸ್ತ್ರತ ಅವಧಿಯಲ್ಲಿ ರೈಲು ಸೇವೆಗಳು 15 ನಿಮಿಷಗಳ ಅಂತರದಲ್ಲಿ ಸಂಚರಿಸುತ್ತವೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ- ಮೆಜೆಸ್ಟಿಕ್‌ನಿಂದ ರಾತ್ರಿ 2:15 ಗಂಟೆಗೆ ಎಲ್ಲ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ಹೊರಡುತ್ತವೆ” ಎಂದು ತಿಳಿಸಿದೆ.
ಆದಾಗ್ಯೂ, ಪೊಲೀಸ್ ಇಲಾಖೆಯ ಸಲಹೆಯ ಮೇರೆಗೆ ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ, ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಸಾರ್ವಜನಿಕ ಪ್ರವೇಶ ಮತ್ತು ನಿರ್ಗಮನಕ್ಕೆ 2023ರ ಡಿಸೆಂಬರ್ 31ರಂದು ರಾತ್ರಿ 11 ಗಂಟೆಯಿಂದ ಮುಚ್ಚಲಾಗುವುದು. ರೈಲುಗಳು ಎಂಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ. ಆದಾಗ್ಯೂ, ಮೆಟ್ರೋ ರೈಲುಗಳು ಪಕ್ಕದ ನಿಲ್ದಾಣಗಳಾದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಎಂದಿನಂತೆ ನಿಲ್ಲುತ್ತವೆ. ಹೀಗಾಗಿ ವಿಸ್ತೃತ ರೈಲು ಸೇವೆಯನ್ನು ಬಳಸಲು ಮೆಟ್ರೋ ಪ್ರಯಾಣಿಕರು ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಗೆ ತೆರಳಲು ಸೂಚಿಸಲಾಗಿದೆ.
“ಯಾವುದೇ ಮೆಟ್ರೋ ನಿಲ್ದಾಣಗಳಿಂದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್‌ಗೆ ವಿಸ್ತರಿಸಿದ ಅವಧಿಯಲ್ಲಿ ಪ್ರಯಾಣವನ್ನು ಟೋಕನ್‌ಗಳು, ಸ್ಮಾರ್ಟ್ ಕಾರ್ಡ್‌ಗಳು, ಎನ್‌ಸಿಎಮ್‌ಸಿ ಕಾರ್ಡ್‌ಗಳು ಮತ್ತು ಕ್ಯೂಆರ್ ಟೆಕೆಟ್‌ಗಳ ಮೂಲಕ ಮಾಡಬಹುದು. ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್‌ನಿಂದ ರಾತ್ರಿ 11 ಗಂಟೆಯ ನಂತರ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಹಿಂತಿರುಗಲು ಸ್ಮಾರ್ಟ್ ಕಾರ್ಡ್‌ಗಳು, ಎನ್‌ಸಿಎಮ್‌ಸಿ ಕಾರ್ಡ್‌ಗಳು, ಕ್ಯೂಆರ್ ಟಿಕೆಟ್‌ಗಳ ಮೂಲಕ ಮತ್ತು ಟೋಕನ್‌ಗಳ ಬದಲಿಗೆ ಪೇಪರ್ ಟಿಕೆಟ್‌ಗಳ ಮೂಲಕ ಮಾತ್ರ ಪ್ರಯಾಣಿಸಬಹುದಾಗಿದೆ” ಎಂದು ಹೇಳಿದೆ.
“ಟ್ರಿನಿಟಿ/ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಂದ ರಾತ್ರಿ 11 ಗಂಟೆಯ ನಂತರ ಹಿಂದಿರುಗುವ ಪ್ರಯಾಣಿಕರು ₹50 ಬೆಲೆಯ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಅನ್ನು ಮುಂಚಿತವಾಗಿ ಯಾವುದೇ ಮೆಟ್ರೋ ನಿಲ್ದಾಣಗಳಲ್ಲಿ ರಾತ್ರಿ 8 ಘಂಟೆಯಿಂದ ಖರೀದಿ ಮಾಡಬಹುದಾಗಿದೆ. ಟ್ರಿನಿಟಿ ಹಾಗೂ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ಡಿ.31 ರ ರಾತ್ರಿ 11 ಗಂಟೆಯ ನಂತರ ಪ್ರವೇಶಕ್ಕೆ ಮಾತ್ರ ಮಾನ್ಯವಾಗಿರುತ್ತದೆ” ಎಂದು ಮಾಹಿತಿ ನೀಡಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ವಿದ್ಯುತ್ ತಂತಿ ತಗುಲಿ 10 ವರ್ಷದ ಬಾಲಕಿ ಸಾವು
“ಜನದಟ್ಟಣೆಯನ್ನು ತಪ್ಪಿಸಲು ಮತ್ತು ಸಹ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವೈಟ್‌ಫೀಲ್ಡ್ (ಕಾಡುಗೋಡಿ) ಕಡೆಗೆ ಪ್ರಯಾಣಿಕರು ಟ್ರಿನಿಟಿ ಮೆಟ್ರೋ ನಿಲ್ದಾಣವನ್ನು ಮತ್ತು ಚಲ್ಲಘಟ್ಟ, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ಕಡೆಗೆ ಪ್ರಯಾಣಿಸುವವರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ಬಳಸಲು ಸೂಚಿಸಲಾಗಿದ್ದು, ಈ ಎರಡೂ ನಿಲ್ದಾಣಗಳು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಸಮಾನ ಅಂತರದಲ್ಲಿವೆ” ಎಂದು ಹೇಳಿದೆ.
ಪ್ರಯಾಣಿಕರು ಮೇಲಿನ ಬದಲಾವಣೆ ಗಮನಿಸಿ ತೊಂದರೆ-ಮುಕ್ತ ಸುರಕ್ಷಿತ ಪ್ರಯಾಣಕ್ಕಾಗಿ ಬಿಎಂಆರ್‌ಸಿಎಲ್ ನೊಂದಿಗೆ ಸಹಕರಿಸಲು ಕೋರಿದೆ.
ಹೊಸ ವರ್ಷಾಚರಣೆಗಾಗಿ ಎಂಜಿ ರಸ್ತೆಯ ಸಮೀಪದಲ್ಲಿರುವ ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಜನರನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಎಂಜಿ ರಸ್ತೆ ನಿಲ್ದಾಣಕ್ಕೆ ಪ್ರವೇಶ ನಿರ್ಬಂಧಿಸುವ ಕ್ರಮಕ್ಕೆ ಮುಂದಾಗಿದೆ.