ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ ನಡೆಸಲು ತನ್ನ ಬಳಿ ಹಣ ಮತ್ತು ಸಿಬ್ಬಂದಿಯ ಕೊರತೆ ಇದೆ. ಆದ್ದರಿಂದ ರಾಜ್ಯ ಸರ್ಕಾರದಿಂದ ಹಣ ಕೊಡಿಸಿ ಎಂದು ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಸುಪ್ರೀಂ ಕೋರ್ಟ್ ಈ ಮೊದಲು ಜೂನ್ 30ರೊಳಗೆ ಚುನಾವಣೆ ಮುಗಿಸುವಂತೆ ಗಡುವು ನೀಡಿತ್ತು. ಆದರೆ, ಈಗ ಹಣಕಾಸಿನ ಮುಗ್ಗಟ್ಟು ಮತ್ತು ಜನಗಣತಿ ಕಾರ್ಯದಲ್ಲಿ ಸಿಬ್ಬಂದಿಗಳು ತೊಡಗಿಸಿಕೊಂಡಿರುವ ಕಾರಣ, ಈ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸುವಂತೆ ಆಯೋಗವು ಕೇಳಿಕೊಂಡಿದೆ.
ಇದನ್ನು ಓದಿದ್ದೀರಾ? ಜೂನ್ 30ರೊಳಗೆ ಜಿಬಿಎ ಚುನಾವಣೆ ನಡೆಸಿ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಿಬ್ಬಂದಿಗಳು ರಾಷ್ಟ್ರೀಯ ಜನಗಣತಿ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ನಿರತರಾಗಿರುವುದರಿಂದ ಜೂನ್ ಒಳಗೆ ಚುನಾವಣೆ ನಡೆಸುವುದು ಕಷ್ಟಕರ ಎಂದು ಆಯೋಗವು ನ್ಯಾಯಾಲಯಕ್ಕೆ ವಿವರಿಸಿದೆ.
ಚುನಾವಣೆ ನಡೆಸಲು ಆಯೋಗವು ಸಂಪೂರ್ಣವಾಗಿ ರಾಜ್ಯ ಸರ್ಕಾರದ ಮೇಲೆ ಅವಲಂಬಿತವಾಗಿದೆ. ತಕ್ಷಣವೇ ಅಗತ್ಯ ಅನುದಾನ ಮತ್ತು ಮೂಲಸೌಕರ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಆಯೋಗವು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದೆ.





