ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವಾಗ ವೃದ್ಧರೊಬ್ಬರು ಕುಸಿದು ಬಿದ್ದು ಕೆಲವು ಗಂಟೆಗಳ ನಂತರ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಅಧಿಕಾರಿಗಳ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಪೊಲೀಸ್ ಇನ್ಸ್ಪೆಕ್ಟರ್ ಆಗಿರುವ ಮುತ್ತುರಾಜ್ ಟಿ ಅವರ ತಂದೆ ತಿಮ್ಮೇಗೌಡ(67) ಮೃತಮಟ್ಟ ವ್ಯಕ್ತಿ.
ತಿಮ್ಮೇಗೌಡ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ಕಂಡಯ್ಯನಪಾಳ್ಯ ಗ್ರಾಮದವರು. ಇವರು ಮೆಟ್ರೋದಲ್ಲಿ ಸಂಚರಿಸುತ್ತಿರುವ ವೇಳೆ ಕುಸಿದು ಬಿದ್ದಾಗ ಸಕಾಲದಲ್ಲಿ ಬಿಎಂಆರ್ಸಿಎಲ್ ಸಿಬ್ಬಂದಿ ಬಂದು ಸಹಾಯ ಮಾಡಲಿಲ್ಲ. ವೈದ್ಯಕೀಯ ನೆರವು ಹಾಗೂ 108 ಆಂಬ್ಯುಲೆನ್ಸ್ ಸೇವೆ ನೀಡಲಿಲ್ಲ. ನಿಗಮದ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ಸಾವಾಗಿದೆ ಎಂದು ಮೃತಪಟ್ಟ ವ್ಯಕ್ತಿಯ ಮಗ ಮುತ್ತುರಾಜ್ ಟಿ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರಿನಲ್ಲಿ ತಿಳಿಸಿದ್ದಾರೆ.
ತಿಮ್ಮೇಗೌಡ ಅವರು ಚಾಮರಾಜನಗರದಿಂದ ಬೆಂಗಳೂರಿನಲ್ಲಿರುವ ಮಗನ ಮನೆಗೆ ಬಂದಿದ್ದರು. ಜುಲೈ 20ರಂದು ರಾತ್ರಿ 9 ಗಂಟೆಗೆ ತಮ್ಮ ತವರು ಊರಿಗೆ ಬಸ್ ಮೂಲಕ ವಾಪಾಸ್ ತೆರಳಲು ಯೋಜಿಸಿದ್ದರು. ಅದರಂತೆಯೇ, ಅವರು ಕೆಂಗೇರಿಗೆ ತೆರಳಲು ಬೈಯಪ್ಪನಹಳ್ಳಿಯಲ್ಲಿ ಮೆಟ್ರೋ ಹತ್ತಿದ್ದರು. ಎಸ್ವಿ ರಸ್ತೆ ನಿಲ್ದಾಣದಿಂದ ಮೆಟ್ರೊ ರೈಲು ಹೊರಡುವಷ್ಟರಲ್ಲಿಯೇ ತಿಮ್ಮೇಗೌಡ ಅವರು ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಸಹ ಪ್ರಯಾಣಿಕರು ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ಇಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬ್ರ್ಯಾಂಡ್ ಬೆಂಗಳೂರು: ಡಿಸಿಎಂ ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ
ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ತಿಮ್ಮೇಗೌಡ 15-20 ನಿಮಿಷಗಳ ಕಾಲ ಪ್ಲಾಟ್ಫಾರ್ಮ್ ಮೇಲೆ ಮಲಗಿದ್ದರು. ಸಹ ಪ್ರಯಾಣಿಕರಲ್ಲಿ ಒಬ್ಬರು ತಿಮ್ಮೇಗೌಡ ಅವರನ್ನು ಆಟೋ ರಿಕ್ಷಾದ ಮೂಲಕ 11.15 ಕ್ಕೆ ಇನ್ಫೆಂಟ್ರಿ ರಸ್ತೆಯಲ್ಲಿರುವ ಸ್ವರ್ಶ ಆಸ್ಪತ್ರೆಗೆ ದಾಖಲಿಸಿದರು. ಮರುದಿನ ಬೆಳಗ್ಗೆ 11.57ಕ್ಕೆ ತಿಮ್ಮೇಗೌಡ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು” ಎಂದು ದೂರಿನಲ್ಲಿ ತಿಳಿಸಲಾಗಿದೆ.
“ತಿಮ್ಮೆಗೌಡ ಅವರು ಕುಸಿದು ಬಿದ್ದಾಗಲೂ ಬಿಎಂಆರ್ಸಿಎಲ್ ಸಿಬ್ಬಂದಿ ಸಹಾಯಕ್ಕೆ ಬಂದಿಲ್ಲ. ಯಾವುದೇ ರೀತಿಯ ವೈದ್ಯಕೀಯ ನೆರವು ನೀಡಿಲ್ಲ. ಮೆಟ್ರೊ ನಿಲ್ದಾಣದಲ್ಲಿ ಬಿದ್ದ ವ್ಯಕ್ತಿಯನ್ನು ಹೊರಗೆ ಕರೆ ತಂದು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಲಿಲ್ಲ. ಮೆಟ್ರೋ ನಿಲ್ದಾಣದಲ್ಲಿಯೇ 15 ರಿಂದ 20 ನಿಮಿಷಗಳ ಕಾಲ ಮಲಗಿದ್ದರು. ಆಂಬ್ಯುಲೆನ್ಸ್ ಕರೆಸುವ ಪ್ರಯತ್ನ ಮಾಡಲಿಲ್ಲ” ಎಂದು ಆರೋಪಿಸಿದ್ದಾರೆ.