ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಹನ ಸಂಚಾರ ದಟ್ಟಣೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮದ್ದಾಗಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ಭಾಗವಾಗಿ ಇದೀಗ 718 ಮೀಟರ್ ಸುರಂಗ ಮಾರ್ಗ ಕೊರೆದು ರುದ್ರ ಹೆಸರಿನ ಸುರಂಗ ಕೊರೆಯುವ ಯಂತ್ರ ಯಶಸ್ವಿಯಾಗಿ ಹೊರಬಂದಿದೆ.
ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ. ರುದ್ರ ಎಂಬ ಹೆಸರಿನ ಟಿಬಿಎಂ ಲಕ್ಕಸಂದ್ರ ನಿಲ್ದಾಣದಿಂದ ಜು.14 ರಂದು ಸುರಂಗ ಕೊರೆಯುವ ಕಾಮಗಾರಿ ಆರಂಭಿಸಿತ್ತು. ಲಕ್ಕಸಂದ್ರ ನಿಲ್ದಾಣದಿಂದ ಲ್ಯಾಂಗ್ಫೋರ್ಡ್ಟೌನ್ ನಿಲ್ದಾಣದವರೆಗೆ ಬರೋಬ್ಬರಿ 718 ಮೀಟರ್ ಸುರಂಗ ಕೊರೆದು ಯಶಸ್ವಿಯಾಗಿ ಅ.26 ರಂದು ಹೊರಬಂದಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ರುದ್ರ ಟಿಬಿಎಂ ಬರೋಬ್ಬರಿ 100 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಸಂಪೂರ್ಣವಾಗಿ ಸುರಂಗ ಕೊರೆದು ಹೊರಬಂದಿದೆ. ಲಕ್ಕಸಂದ್ರದಿಂದ ಲ್ಯಾಂಗ್ ಫೋರ್ಡ್ ವರೆಗೆ ಎರಡನೇ ಹಂತದ ಮೆಟ್ರೋ ಸುರಂಗ ಮಾರ್ಗ ಕಾಮಗಾರಿ ನಡೆಯುತ್ತಿದೆ. ಎರಡನೇ ಹಂತದ ಕಾಮಗಾರಿಯಲ್ಲಿ ಇದು ಏಳನೇ ಟಿಬಿಎಂ ಕಾರ್ಯಾಚರಣೆಯಾಗಿದೆ ಎಂದು ಮಾಹಿತಿ ನೀಡಿದೆ.
ವಮಿಕಾ ಹೆಸರಿನ ಸುರಂಗ ಕೊರೆಯುವ ಯಂತ್ರ ಕಳೆದ ತಿಂಗಳು ಆಗಸ್ಟ್ನಲ್ಲಿ ಕಾಳೇನ ಅಗ್ರಹಾರ–ನಾಗವಾರ ಗುಲಾಬಿ ಮಾರ್ಗದಲ್ಲಿ 721 ಮೀಟರ್ ಮೆಟ್ರೋ ಸುರಂಗ ಕೊರೆದು ಹೊರ ಬಂದಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರೈಡ್ ಕ್ಯಾನ್ಸಲ್ ಆಗದ ರ‍್ಯಾಪಿಡೋದಿಂದ ‘ಆಟೋ ಪ್ಲಸ್’ ಹೊಸ ಸೇವೆ ಆರಂಭ
ಈ ಹಿಂದೆ ಟಿಬಿಎಂ ಯಂತ್ರವು ಸೌತ್ ರ‍್ಯಾಂಪ್ ಮತ್ತು ಡೈರಿ ಸರ್ಕಲ್ ನಿಲ್ದಾಣದ ಮಧ್ಯೆ ಒಟ್ಟು 613.2 ಮೀಟರ್ ಸುರಂಗ ಕೊರೆದಿತ್ತು. ನಂತರ ಡೇರಿ ವೃತ್ತದ ನಿಲ್ದಾಣದಿಂದ ಲಕ್ಕಸಂದ್ರ ಮೆಟ್ರೋ ನಿಲ್ದಾಣದ ಮಧ್ಯದವರೆಗಿನ 746.2 ಮೀಟರ್ ಉದ್ದದ ಸುರಂಗ ಕೊರೆದು ಟಿಬಿಎಂ ಯಶಸ್ವಿಯಾಗಿ ಹೊರಬಂದಿತ್ತು ಎಂದು ತಿಳಿಸಿದೆ.