ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಕಾರ್ಯಾಚರಣೆ ಭರದಿಂದ ಸಾಗಿದೆ. ಈಗಾಗಲೇ ನಗರದಲ್ಲಿ ತನ್ನ ವಿಸ್ತರಣೆಯನ್ನು ಹೆಚ್ಚಿಸಿಕೊಂಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್) ತನ್ನ ಕಾರ್ಯವನ್ನು ಮುಂದುವರೆಸಿದೆ. ಇದೀಗ, ಸುರಂಗ ಕೊರೆಯುವ ಮೂಲಕ ಮೆಟ್ರೋ ಕಾಮಗಾರಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಸುರಂಗ ಕೊರೆಯುವ ಯಂತ್ರ (ಟಿಬಿಎಮ್) ತುಂಗಾ ತನ್ನ ಎರಡನೇ ಕಾರ್ಯಾಚರಣೆ ಮುಗಿಸಿ ಕಾಡುಗೊಂಡನಹಳ್ಳಿ ನಿಲ್ದಾಣದಿಂದ ಹೊರಬಂದಿದೆ.
ತುಂಗಾ ಟಿಬಿಎಂ ವೆಂಕಟೇಶಪುರ ನಿಲ್ದಾಣ ಮತ್ತು ಶಾಧಿ ಮಹಲ್ ಶಾಫ್ಟ್ ನಡುವೆ 1064 ಮೀ ಸುರಂಗದ ಕಾಮಗಾರಿ ಪೂರ್ಣಗೊಳಿಸಿದೆ. 2022 ಅಕ್ಟೋಬರ್ 31ರಂದು ವೆಂಕಟೇಶಪುರ ನಿಲ್ದಾಣದಿಂದ ಸುರಂಗ ಮಾರ್ಗದ ಕಾಮಗಾರಿ ಪ್ರಾರಂಭಿಸಿ, 2023 ಡಿಸೆಂಬರ್ 6ರಂದು ಅರೇಬಿಕ್ ಕಾಲೇಜು ಬಳಿಯ ಕಾಡುಗೊಂಡನಹಳ್ಳಿ (ಕೆ.ಜಿ ಹಳ್ಳಿ) ನಿಲ್ದಾಣದಲ್ಲಿ ಹೊರಬಂದಿದೆ. ಬರೋಬ್ಬರಿ 1184.4 ಮೀ ಕಾಮಗಾರಿ ಪೂರ್ಣಗೊಳಿಸಿದೆ.
ಈ ಪ್ರಗತಿಯೊಂದಿಗೆ, ಒಟ್ಟು 20992 ಮೀಟರ್‌ಗಳಲ್ಲಿ 18832.30 ಮೀ ಅಂದರೆ ಶೇ. 89.70% ರಷ್ಟು ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಡಿ. 11ರಿಂದ ಬೆಂಗಳೂರಿನಿಂದ ನಂದಿಬೆಟ್ಟಕ್ಕೆ ಎಲೆಕ್ಟ್ರಿಕ್ ರೈಲಿನಲ್ಲಿ ಸಂಚರಿಸಿ
ಒಟ್ಟಾರೆ ರೀಚ್-6ರ ಸುರಂಗ ಮಾರ್ಗಕ್ಕಾಗಿ ನಿಯೋಜಿಸಲಾದ 9 ಟಿಬಿಎಂಗಳಲ್ಲಿ, 7 ಟಿಬಿಎಂಗಳು ಸುರಂಗ ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಿದೆ.
ಶೇ. 89.70ರಷ್ಟು ಸುರಂಗ ಕಾಮಗಾರಿ ಬುಧವಾರ ಪೂರ್ಣಗೊಂಡಿದೆ. ಕೆಜಿ ಹಳ್ಳಿ ನಿಲ್ದಾಣದಲ್ಲಿ ನೂರಾರು ಕಾರ್ಮಿಕರು ಜಮಾಯಿಸಿ ಟಿಬಿಎಂ ತುಂಗಾ ಎರಡನೇ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಳಿಸುತ್ತಿದ್ದಂತೆ ಸಂಭ್ರಮಾಚರಣೆ ಮಾಡಿದರು.
ಸುರಂಗ ನಿರ್ಮಾಣಕ್ಕಾಗಿ ಜರ್ಮನ್ ನಿರ್ಮಿತ ಹೆರೆಂಕ್ನೆಕ್ಟ್ ಯಂತ್ರವನ್ನು ಮೊದಲ ಬಾರಿಗೆ ಜುಲೈ 23, 2021 ರಂದು ಬೆಂಗಳೂರಿನಲ್ಲಿ ನಿಯೋಜಿಸಲಾಯಿತು. ಪಿಂಕ್ ಲೈನ್ ಮಾರ್ಗದಲ್ಲಿನ ವೆಂಕಟೇಶಪುರ ಮತ್ತು ಟ್ಯಾನರಿ ರಸ್ತೆಯ ನಡುವಿನ 1,260 ಮೀಟರ್ ಸುರಂಗ ಕೊರೆಯಲು 13 ತಿಂಗಳು ಹಿಡಿಯಿತು.
ಪಿಂಕ್ ಲೈನ್ ಬೆಂಗಳೂರಿನ ಮೆಟ್ರೋದಲ್ಲಿ 13.92 ಕಿಮೀ ಮತ್ತು 6.98 ಕಿಮೀ ಎತ್ತರದ ವಿಭಾಗಗಳೊಂದಿಗೆ ಉದ್ದವಾದ ಸುರಂಗ ಮಾರ್ಗ ವಿಭಾಗಗಳಲ್ಲಿ ಒಂದಾಗಿದೆ. ಪಿಂಕ್ ಲೈನ್‌ನಲ್ಲಿ 18 ನಿಲ್ದಾಣಗಳಿದ್ದು, ಈ ಪೈಕಿ 12 ಭೂಗತ ಮತ್ತು ಆರು ಸಾಮಾನ್ಯ ನಿಲ್ದಾಣಗಳಾಗಿವೆ.