ಆರೋಪಿಗಳ ಪರವಾಗಿ ವರದಿ ಸಲ್ಲಿಸಲು ಒಂದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಬೆಂಗಳೂರು ನಗರದ ಕೆಂಪೇಗೌಡನಗರ ಪೊಲೀಸ್ ಠಾಣೆಯ ಪಿಐ ಮತ್ತು ಪಿಎಸ್‌ಐ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಪಿಐ ಶಿವಾಜಿ ರಾವ್ ಮತ್ತು ಪಿಎಸ್‌ಐ ಶಿವಾನಂದ ಜಿ ಅವರು ಆವಲಹಳ್ಳಿ ನಿವಾಸಿ ಕೇಶವಮೂರ್ತಿ ವಿರುದ್ಧ ದಾಖಲಾಗಿದ್ದು ಪ್ರಕರಣದಲ್ಲಿ ಆರೋಪಿ ಪರವಾಗಿ ವರದಿ ನೀಡಲು ಆರು ಲಕ್ಷ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಇದನ್ನು ಓದಿದ್ದೀರಾ? ಬೆಂಗಳೂರು | ಹೆರಿಗೆ ಮಾಡಿಸಲು ಲಂಚ: ಮಲ್ಲಸಂದ್ರ ಹೆರಿಗೆ ಆಸ್ಪತ್ರೆ ನರ್ಸ್ ಬಂಧನ
ಈ ಬಗ್ಗೆ ಕೇಶವಮೂರ್ತಿ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು ಲೋಕಾಯುಕ್ತ ಪೊಲೀಸರು ಲಂಚ ಪಡೆಯುವ ಸಂದರ್ಭದಲ್ಲೇ ಸಾಕ್ಷಿ ಸಮೇತವಾಗಿ ಬಂಧಿಸಲು ಕಾರ್ಯಾಚರಣೆ ರೂಪಿಸಿದ್ದರು.
ಪೊಲೀಸರ ಸೂಚನೆಯಂತೆ ಕೇಶವಮೂರ್ತಿ ಅವರು ಕೆಂಪೇಗೌಡ ನಗರ ಪೊಲೀಸ್ ಠಾಣೆಯ ಬಳಿ ಪಿಐ ಮತ್ತು ಪಿಎಸ್‌ಐಗೆ ಒಂದು ಲಕ್ಷ ರೂಪಾಯಿ ನೀಡಿದ್ದಾರೆ. ಈ ಸಂದರ್ಭದಲ್ಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ.
ಲೋಕಾಯುಕ್ತ ಡಿವೈಎಸ್‌ಪಿ ಗಿರೀಶ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಸದ್ಯ ಒಂದು ಲಕ್ಷ ರೂಪಾಯಿ ವಶಕ್ಕೆ ಪಡೆದಿದ್ದು, ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.

A