ದೀರ್ಘ ವಾರಾಂತ್ಯ ಮತ್ತು ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಮಳೆಯ ಅವಾಂತರ ಮತ್ತು ಟ್ರಾಫಿಕ್ ಸಮಸ್ಯೆ ತಪ್ಪಿಸಲು ಬೆಂಗಳೂರಿನ ಔಟರ್ ರಿಂಗ್ ರಸ್ತೆಯ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ಕೊಡಬೇಕು ಎಂದು ಸಂಚಾರಿ ಪೊಲೀಸರು ವಿನಂತಿಸಿದ್ದಾರೆ.
ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕಂಪನಿಗಳಿಗೆ ರಜೆ ಇದೆ. ಶುಕ್ರವಾರ ಒಂದು ದಿನ ರಜೆ ಮಾಡಿದರೂ ನಾಲ್ಕು ದಿನ ರಜೆ ಸಿಗಲಿದೆ. ಹೀಗಾಗಿ ಆ.14ರಂದು ಕಚೇರಿಯಿಂದ ಮನೆಗೆ ತೆರಳುವವರು, ನಂತರ ಊರಿಗೆ ತೆರಳುವವರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಪರಿಣಾಮವಾಗಿ ಸಂಚಾರ ದಟ್ಟಣೆ ನಿರೀಕ್ಷಿಸಲಾಗಿದೆ. ಇದರ ಜೊತೆಗೆ ಮಳೆಯೂ ಇರುವುದರಿಂದ ಮಳೆಯ ಅವಾಂತರ ತಪ್ಪಿಸಲು ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ನೀಡಿ ಎಂದು ಸಂಚಾರಿ ಜಂಟಿ ಆಯುಕ್ತ ಎಂ ಎನ್ ಅನುಚೇತ್ ಮನವಿ ಮಾಡಿದ್ದಾರೆ.
ಸಿಬ್ಬಂದಿಗೆ ವರ್ಕ್ ಫ್ರಮ್ ಹೊಮ್ ಕೊಡುವುದರಿಂದ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಕಡಿಮೆಯಾಗಲಿದೆ. ಪ್ರಯಾಣಿಸಬೇಕಾದ ಎಲ್ಲರಿಗೂ ಅನುಕೂಲವಾಗಲಿದೆ. ಈ ವಿಷಯದಲ್ಲಿ ನಿಮ್ಮ ಸಹಕಾರವನ್ನು ನಾವು ನಿರೀಕ್ಷಿಸುತ್ತೇವೆ. ನಿಮ್ಮ ಬೆಂಬಲ ಅಗತ್ಯ ಎಂದು ಪತ್ರ ಮೂಲಕ ಅನುಚೇತ್ ಕೋರಿದ್ದಾರೆ.