ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಹಾವಳಿ ಹೆಚ್ಚುತ್ತಲೇ ಇದೆ. ನಗರ ಬಹುಸಂಖ್ಯಾತ ರಸ್ತೆಗಳು ಗುಂಡಿ ಬಿದ್ದಿವೆ. ರಸ್ತೆಗುಂಡಿಗಳಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದು, ವಾಹನ ಸವಾರರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಹಲವರು ಅಂಗ ವೈಕಲ್ಯಕ್ಕೆ ತುತ್ತಾಗಿದ್ದಾರೆ. ದಿನನಿತ್ಯ ಸಂಚರಿಸುವ ಸವಾರರು ರಸ್ತೆಗುಂಡಿಗಳಿಂದಾಗಿ ದೈಹಿಕ ಬೇನೆ, ಮಾನಸಿಕ ಕಿರಿಕಿರಿ ಅನುಭವಿಸಿದ್ದಾರೆ.
ಆ ರೀತಿಯಲ್ಲಿ ರಸ್ತೆಗುಂಡಿಗಳಿಂದ ಬಸವಳಿದ ಬೆಂಗಳೂರಿನ ನಿವಾಸಿ ಮಹಿಳೆಯೊಬ್ಬರು ಬಿಬಿಎಂಪಿಗೆ ಲೀಗಲ್ ನೋಟಿಸ್ ಕಳಿಸಿದ್ದಾರೆ. ರಸ್ತೆಗುಂಡಿಗಳಿಂದ ತಾವು ಅನುಭವಿಸಿದ ಯಾತನೆಗೆ ಪರಿಹಾರವಾಗಿ 50 ಲಕ್ಷ ರೂ. ನೀಡಬೇಕೆಂದು ಕೇಳಿದ್ದಾರೆ. ಪರಿಹಾರ ನೀಡಲು15 ದಿನಗಳ ಗಡುವು ನೀಡಿದ್ದಾರೆ.
ಬೆಂಗಳೂರಿನ ರಿಚ್ಯಂಡ್ ಟೌನ್ ನಿವಾಸಿ ದಿವ್ಯ ಕಿರಣ್ ಅವರು ತಮ್ಮ ವಕೀಲ ಕೆ.ವಿ ಲವೀನ್ ಮೂಲಕ ಮೇ 14 ರಂದು ಬಿಬಿಎಂಪಿಗೆ ನೋಟಿಸ್ ಕಳಿಸಿದ್ದಾರೆ. “ಬೆಂಗಳೂರು ನಿವಾಸಿಗಳು ಹೆಚ್ಚು ತೆರಿಗೆ ಪಾವತಿಸುತ್ತಿದ್ದರೂ, ಉತ್ತಮ ಮೂಲಭೂತ ಸೌಲಭ್ಯಗಳುದೊರೆಯುತ್ತಿಲ್ಲ. ರಸ್ತೆ ಸೇರಿದಂತೆ ಮೂಲಭೂತ ಸೌಯರ್ಕಗಳನ್ನು ಉತ್ತಮವಾಗಿ ನಿರ್ವಹಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ. ನಗರದಲ್ಲಿ ರಸ್ತೆ ಸರಿ ಇಲ್ಲದ ಕಾರಣ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದೇನೆ. ದೈಹಿಕ ಆರೋಗ್ಯ ಹದಗೆಟ್ಟಿದೆ, ಮಾನಸಿಕವಾಗಿ ತೊಂದರೆಗೆ ಒಳಗಾಗಿದ್ದೇನೆ. ಪರಿಣಾಮ, ವೈದ್ಯಕೀಯ ವೆಚ್ಚ ಹೆಚ್ಚಾಗಿದೆ. ವೈದ್ಯಕೀಯ ವೆಚ್ಚ ಮತ್ತು ಮಾನಸಿಕ ಹಿಂಸೆ ಆನುಭವಿಸಿರುವುದಕ್ಕೆ ಬಿಬಿಎಂಪಿ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
“ರಸ್ತೆಗಳನ್ನು ನಿರ್ವಹಿಸುವಲ್ಲಿ ಬಿಬಿಎಂಪಿಯ ವೈಫಲ್ಯ ಎದ್ದುಕಾಣುತ್ತಿದೆ. ರಸ್ತೆಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಅನಾರೋಗ್ಯಕ್ಕೆ ತುತ್ತಾಗಿದ್ದೇನೆ. ತೀವ್ರ ನೋವಿನಿಂದಾಗಿ ಚಿಕಿತ್ಸೆಗಾಗಿ ಐದು ಮೂಳೆ ತಜ್ಞರನ್ನು ಭೇಟಿ ಮಾಡಿದ್ದೇನೆ. ಜೊತೆಗೆ, ಹಲವಾರು ಔಷಧಿಗಳು ಮತ್ತು ನೋವು ನಿವಾರಕಗಳನ್ನು ಖರೀದಿಸಿದ್ದೇನೆ. ರಾತ್ರಿಯೆಲ್ಲ ನೋವಿನಿಂದ ಕಣ್ಣೀರು ಹಾಕಿದ್ದೇನೆ, ನಿದ್ರೆಯಿಲ್ಲದೆ ಬಳಲಿದ್ದೇನೆ, ಆತಂಕ ಮತ್ತು ಮಾನಸಿಕ ಯಾತನೆಯನ್ನು ಅನುಭವಿಸಿದ್ದೇನೆ. ಇವೆಲದಲವೂ ನನ್ನ ದೈನಂದಿನ ಕಾರ್ಯನಿರ್ವಹಣೆಯ ಮೇಲೆ ತೀವ್ರ ಪರಿಣಾಮ ಬೀರಿವೆ” ಎಂದು ಹೇಳಿದ್ದಾರೆ.
“ಪರಿಹಾರ ನೀಡಲು 15 ದಿನಗಳ ಒಳಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದು ಕೇವಲ ವೈಯಕ್ತಿಕ ಹೋರಾಟವಲ್ಲ, ಸಾಮಾಜಿಕ ಜವಾಬ್ದಾರಿಯ ಹೋರಾಟ” ಎಂದಿದ್ದಾರೆ.