ದೇಶಾದ್ಯಂತ ಸುದ್ದಿಯಲ್ಲಿರುವ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯರು ಪೊಲೀಸರಿಗೆ ಅತ್ಯಾಚಾರದ ದೂರು ಕೊಟ್ಟರೂ ಕೂಡ, ಹಾಸನ ಪೊಲೀಸರು ಆರೋಪಿಗಳ ರಕ್ಷಣೆಗೆ ನಿಂರು ಅತ್ಯಾಚಾರ ಸೆಕ್ಷನ್‌ಗಳನ್ನು ದಾಖಲಿಸಿಲ್ಲ ಎಂದು ನಾಗರಿಕ ಸಂಘಟನೆಗಳ ಮುಖಂಡರು ಆರೋಪಿಸಿದ್ದು, ಈ ಸಂಬಂಧ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದೆ.
ದಿನಾಂಕ 28.04.2024 ರಂದು 47 ವರ್ಷದ ಸಂತ್ರಸ್ತ ಮಹಿಳೆ ಹೊಳೆನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ರಿ ದೂರನ್ನು ಪಡೆದುಕೊಂಡಿರುವ ಹೊಳೆನರಸೀಪುರ ಪೊಲೀಸರು ಅಪರಾಧ ಸಂಖ್ಯೆ 107/2024 ಎಂದು ದಾಖಲಿಸಿಕೊಂಡು ಐಪಿಸಿ ಸೆಕ್ಷನ್ 354a, 354d, 506, 509 ದಾಖಲಿಸಿಕೊಂಡಿದ್ದಾರೆ.
ಸಂತ್ರಸ್ತ ಮಹಿಳೆ ನೀಡಿರುವ ದೂರು ಮತ್ತು ಪೊಲೀಸರು ದಾಖಲಿಸಿಕೊಂಡಿರುವ ಎಫ್ಐಆರ್ ಸಾರಾಂಶದಲ್ಲಿ “ಪಿರ್ಯಾದಿಗೆ ಒಬ್ಬಳು ಹೆಣ್ಣು ಮಗಳಿರುತ್ತಾಳೆ. ಎಚ್ ಡಿ ರೇವಣ್ಣರವರ ಮನೆಯಲ್ಲಿ ಮೂರುವರೆ ವರ್ಷಗಳ ಕಾಲ ಕೆಲಸ ಮಾಡಿಕೊಂಡಿದ್ದು ಅವರ ಮನೆಗೆ ಕೆಲಸಕ್ಕೆ ಸೇರಿಕೊಂಡ 4 ತಿಂಗಳ ನಂತರ ಹೆಚ್ ಡಿ ರೇವಣ್ಣ ರವರು ತಮ್ಮ ಕೊಠಡಿಗೆ ಬರುವಂತೆ ಅಹ್ವಾನಿಸುತ್ತಿದ್ದರು. ಮನೆಯಲ್ಲಿ 6 ಜನ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿದ್ದರು. ಎಲ್ಲರೂ ಪ್ರಜ್ವಲ್ ರೇವಣ್ಣ ಬಂದಾಗ ನಮಗೆ ಭಯವಾಗುತ್ತದೆ ಎಂದು ಭಯ ಹೊರ ಹಾಕುತ್ತಿದ್ದರು. ರೇವಣ್ಣರವರು ತಮ್ಮ ಪತ್ನಿ ಭವಾನಿಯವರು ಮನೆಯಲ್ಲಿ ಇಲ್ಲದಿದ್ದ ಸಮಯದಲ್ಲಿ ಸ್ಟೋರ್ ರೂಮ್‌ನಲ್ಲಿ ಕೈ ಹಿಡಿದು ಎಳೆಯುತ್ತಿದ್ದರು. ಹಣ್ಣು ಕೊಡುವ ನೆಪದಲ್ಲಿ ಮೈ ಮುಟ್ಟುತ್ತಿದ್ದರು. ಸೀರೆಯ ಪಿನ್ ಕಿತ್ತು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಪ್ರಜ್ವಲ್ ರೇವಣ್ಣ ಅಡುಗೆ ಮನೆಯಲ್ಲಿ ಇದ್ದಾಗ ಹಿಂದಿನಿಂದ ಬಂದು ಮೈ ಮುಟ್ಟುತ್ತಾ ಹೊಟ್ಟೆ ಭಾಗದಲ್ಲಿ, ಜಿಗುಟುತ್ತಿದ್ದರು. ಎಣ್ಣೆ ಹಚ್ಚಲು ನನ್ನನ್ನು ಕಳಿಸು ಎಂದು ಕೆಲಸ ಮಾಡುವ ಹುಡುಗನ ಹೇಳಿ ಕಳುಹಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಹಲವಾರು ಬಾರಿ ಲೈಂಗಿಕ ದೌರ್ಜನ್ಯಗಳನ್ನು ನಡೆಸುತ್ತಿದ್ದು, ಮನೆಯಲ್ಲಿದ್ದಾಗ ಪೋನ್ ಮಾಡಿ ಮನೆಯಲ್ಲಿ ಮಗಳು ಇರುತ್ತಿದ್ದು ಸುಮಾರು ಸಲ ವಿಡಿಯೋ ಕಾಲ್ ಮಾಡಿ ಪಿರ್ಯಾದಿ ಮಗಳ ಜೊತೆಯೂ ಅಸಭ್ಯ ಸಂಭಾಷಣೆ ಮೂಲಕ ಪ್ರಚೋದಿಸಲು ಯತ್ನಿಸುತ್ತಿದ್ದು, ಮಗಳು ಹೆದರಿಕೊಂಡು ನಂಬರ್ ಬ್ಲಾಕ್ ಮಾಡಿದ್ದು, ಇದರಿಂದ ಪಿರ್ಯಾದಿಯವರು ಮನೆಯಿಂದ ಕೆಲಸ ಬಿಟ್ಟು ಹೊರ ಬಂದಿದ್ದರು” ಎಂದು ಎಫ್ಐಆರ್ ಸಾರಾಂಶದಲ್ಲಿ ದಾಖಲಿಸಿಕೊಂಡಿದ್ದಾರೆ.
ಪೊಲೀಸರೇ ದಾಖಲಿಕೊಂಡಿರುವ ಎಫ್ಐಅರ್ ಸಾರಾಂಶದ ಪ್ರಕಾರ ಈ ಪ್ರಕರಣ ಅತ್ಯಾಚಾರದ ಪ್ರಕರಣ ಆಗಿರುತ್ತದೆ. ಹಾಗಾಗಿ ಲೈಂಗಿಕ ದೌರ್ಜನ್ಯಗಳನ್ನು ವಿವರಿಸಿರುವ ಪ್ರಕರಣಗಳಲ್ಲಿ ಅತ್ಯಾಚಾರಕ್ಕೆ ಸಂಬಂಧಪಟ್ಟ ಹಲವು ಸೆಕ್ಷನ್ ಗಳನ್ನು ದಾಖಲಿಸಿಕೊಳ್ಳಬೇಕಿತ್ತು. “ಸೀರೆಯ ಪಿನ್ ಕಿತ್ತು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು” ಎಂಬ ಆರೋಪವು ಅತ್ಯಾಚಾರವನ್ನು ಸ್ಪಷ್ಟವಾಗಿ ಸಂಕೇತಿಸುತ್ತದೆ. ಭರವಸೆಗಳನ್ನು ನೀಡಿ, ಅಮಿಷವೊಡ್ಡಿ ಒಪ್ಪಿತ ಲೈಂಗಿಕ ಚಟುವಟಿಕೆ ಮಾಡುವುದು ಕೂಡಾ ಅತ್ಯಾಚಾರ ಎಂದು ಪರಿಗಣಿತವಾಗಿದೆ. ಕೆಲ ವಿಡಿಯೋಗಳಲ್ಲಿ ಒಪ್ಪಿತ ಲೈಂಗಿಕ ಚಟುವಟಿಕೆ ಎಂದು ಕಂಡು ಬಂದರೆ, ಇನ್ನು ಕೆಲ ವಿಡಿಯೋಗಳಲ್ಲಿ ಮಹಿಳೆಯರು ಪ್ರತಿರೋಧ ಮಾಡಿದರೂ ಲೈಂಗಿಕ ಕ್ರೀಯೆ ನಡೆಸಲಾಗಿದೆ. ಹಾಗಾಗಿ ಆರೋಪಿಯೇ ಚಿತ್ರಿಕರಿಸಿರುವ ನೂರಾರು ವಿಡಿಯೋಗಳಲ್ಲಿ ಅತ್ಯಾಚಾರ ಮಾಡಿರುವುದು ಸ್ಪಷ್ಟವಾಗಿದೆ. ಇವೆಲ್ಲವನ್ನೂ ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಜತೆಗೇ ನೋಡಬೇಕಿದೆ ಎಂದು ಉಲ್ಲೇಖಿಸಿದೆ.
ಮಹಿಳೆ ನೀಡಿರುವ ದೂರಿನ ಎಫ್ಐಆರ್ ಸಾರಾಂಶದಲ್ಲಿ, ಮಹಿಳೆಯ ಇಚ್ಚೆಗೆ ವಿರುದ್ದವಾಗಿ ಮಹಿಳೆಯ ಮೈ ಮುಟ್ಟಿರುವುದಲ್ಲದೇ, ದೌರ್ಜನ್ಯವನ್ನು ಮುಂದುವರೆಸಿದ್ದರು ಎಂದು ಹೇಳಲಾಗಿದೆ. ಮಾತ್ರವಲ್ಲದೇ ಸಂತ್ರಸ್ತ ಮಹಿಳೆಯ ಮಗಳಿಗೂ ಲೈಂಗಿಕ ದೌರ್ಜನ್ಯ ನೀಡಿದ ಬಗ್ಗೆ ಸಂತ್ರಸ್ತ ಮಹಿಳೆ ಹೇಳಿಕೊಂಡಿದ್ದಾರೆ. ಆದರೆ ಎಫ್ಐಆರ್ ನ ಸಂತ್ರಸ್ತರ ಕಾಲಂನಲ್ಲಿ ಓರ್ವ ಸಂತ್ರಸ್ತರ ಹೆಸರು ಮಾತ್ರ ಉಲ್ಲೇಖಿಸಲಾಗಿದೆ. ಇಬ್ಬರು ಸಂತ್ರಸ್ತರು ಎಂಬುದನ್ನು ದಾಖಲಿಸದೇ ಎಫ್ಐಆರ್ ಅನ್ನು ಸರಳೀಕರಿಸಿ ಆರೋಪಿ ಪ್ರಜ್ವಲ್ ರೇವಣ್ಣ ಮತ್ತು ಎಚ್ ಡಿ ರೇವಣ್ಣ ಗೆ ಪೊಲೀಸರು ಸಹಕಾರ ನೀಡಿದ್ದಾರೆ ಎಂದು ನಾಗರಿಕ ಸಂಘಟನೆಗಳ ಮುಖಂಡರು ದೂರಿದ್ದಾರೆ.
ಪ್ರಜ್ವಲ್ ರೇವಣ್ಣ ಹಾಲಿ ಸಂಸದರಾಗಿದ್ದು, ಎಚ್ ಡಿ ರೇವಣ್ಣ ಹಲವು ಭಾರಿ ಪ್ರಭಾವಿ ಸಚಿವರಾಗಿದ್ದವರು. ಇಡೀ ಕುಟುಂಬ ರಾಜ್ಯದ ಪ್ರಭಾವಿ ರಾಜಕೀಯ ಕುಟುಂಬವಾಗಿದ್ದು, ಅವರನ್ನು ರಕ್ಷಣೆ ಮಾಡಲೆಂದೇ ಪೊಲೀಸರು ದುರ್ಬಲ ಸೆಕ್ಷನ್ ಗಳನ್ನು ದಾಖಲಿಸಿದ್ದಾರೆ ಮತ್ತು ಅತ್ಯಾಚಾರದ ಸೆಕ್ಷನ್‌ಗಳನ್ನು ಕೈಬಿಟ್ಟಿದ್ದಾರೆ. ಹಾಗಾಗಿ ಹೊಳೆನರಸೀಪುರ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಸೇರಿದಂತೆ ಈ ಎಫ್ಐಆರ್‌ಗೆ ಸಂಬಂಧಿಸಿದ ಎಲ್ಲಾ ಪೊಲೀಸರನ್ನು ಅಮಾನತು ಮಾಡಿ, ಪ್ರಾಮಾಣಿಕ ಅಧಿಕಾರಿಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸುವಂತೆ ದೂರು ನೀಡಿದ್ದಾರೆ.
ದೂರಿನಲ್ಲಿ ನಾಗರಿಕ ಸಂಘಟನೆಗಳ ಮುಖಂಡರ ಬೇಡಿಕೆಗಳು
- ದೂರುದಾರ ಸಂತ್ರಸ್ತ ಮಹಿಳೆಯರ ಹೇಳಿಕೆ ದಾಖಲಿಸಿಕೊಳ್ಳುವ ಸಂದರ್ಭದಲ್ಲಿ ಮಹಿಳಾ ಆಪ್ತ ಸಮಾಲೋಚಕರು ಇರಬೇಕು.
- ಅತ್ಯಾಚಾರದ ಸ್ಪಷ್ಟ ಸಂಕೇತಗಳು ಇದ್ದರೂ ದುರ್ಬಲ ಸೆಕ್ಷನ್‌ಗಳಡಿಯಲ್ಲಿ ಎಫ್ಐಆರ್ ದಾಖಲಿಸಿದ ಹೊಳೆನರಸೀಪುರದ ಇನ್ಸ್‌ಪೆಕ್ಟರ್ ಅವರನ್ನು ಅಮಾನತು ಮಾಡಬೇಕು.
- ದೂರುದಾರ ಸಂತ್ರಸ್ತ ಮಹಿಳೆಯರಿಗೆ ಭದ್ರತೆ ಒದಗಿಸಬೇಕು.
- ವಿಡಿಯೋದಲ್ಲಿರುವ ಮಹಿಳೆಯರನ್ನು ಪೊಲೀಸರೇ ಪತ್ತೆ ಹಚ್ಚಿ ಹೇಳಿಕೆ ದಾಖಲಿಸಬೇಕು.
- ಈಗಾಗಲೇ ದೂರು ದಾಖಲಿಸಿರುವ ಮಹಿಳೆಯ ಮರು ಹೇಳಿಕೆ ತೆಗೆದುಕೊಳ್ಳಬೇಕು.
- FIR 107/2024 ನಲ್ಲಿ ಇಬ್ಬರು ಸಂತ್ರಸ್ತರಿದ್ದರೂ ಸಂತ್ರಸ್ತರ ಕಾಲಂನಲ್ಲಿ ಹಾಕದೇ ಇರುವ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಬೇಕು.
- ಈಗಾಗಲೇ ದಾಖಲಿಸಿರುವ ಎಫ್ಐಆರ್‌ಗೆ ಹೆಚ್ಚುವರಿ ಅಂಶಗಳನ್ನು, ಸೆಕ್ಷನ್‌ಗಳನ್ನು ಸೇರ್ಪಡೆಗೊಳಿಸಿ ಬಲಗೊಳಿಸಬೇಕು.
- ಆರೋಪಿ ಕುಟುಂಬದ ಜೊತೆ ನಿಕಟ ಸಂಪರ್ಕ ಹೊಂದಿರುವ ಪೊಲೀಸರನ್ನು ವರ್ಗಾಯಿಸಬೇಕು.
- ಆರೋಪಿಯ ಕುಟುಂಬದ ಯಾವುದೇ ವ್ಯಕ್ತಿಯ ಶಿಫಾರಸ್ಸು ಪತ್ರದ ಮೇರೆಗೆ ನಿಯೋಜನೆಗೊಂಡಿರುವ ಎಲ್ಲ ಅಧಿಕಾರಿಗಳನ್ನು ಹಾಸನದಿಂದ ವರ್ಗಾಯಿಸಬೇಕು.
- ತನ್ನ ಪ್ರಭಾವವನ್ನೆ ಅಸ್ತ್ರವನ್ನಾಗಿಸಿಕೊಂಡು ನೂರಾರು ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿದ ಅತಿ ಘೋರ ಪ್ರಕರಣ ಇದಾಗಿರುವುದರಿಂದ ಈ ಪ್ರಕರಣವನ್ನು ನಿಷ್ಪಕ್ಷಪಾತ, ನಿರ್ಭೀತಿಯಿಂದ ತನಿಖೆ ನಡೆಸಲಾಗುತ್ತದೆ ಎಂದು ಖಾತ್ರಿಗೊಳಿಸಬೇಕು ಎಂದು ಮನವಿಯಲ್ಲಿ ತಿಳಿಸಿದೆ.
ಈ ಮನವಿಗೆ ಜನವಾದಿ ಮಹಿಳಾ ಸಂಘಟನೆಯ ಮೀನಾಕ್ಷಿ ಬಾಳಿ, ಕೆ ನೀಲಾ, ಪ್ರಭಾ ಬೆಳವಂಗಲ, ಸತ್ಯಾ ಎಸ್, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಬೀಹಾ ಭೂಮಿಗೌಡ, ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ, ನವೀನ್ ಸೂರಿಂಜೆ, ಅಖಿಲಾ ವಿದ್ಯಾಸಂದ್ರ, ಜ್ಯೋತಿ ಅನಂತ ಸುಬ್ಬರಾವ್, ವಿನಯ್ ಶ್ರೀನಿವಾಸ್, ನಾಗೇಗೌಡ ಕೆ ಎಸ್, ಬೈರಪ್ಪ ಹರೀಶ್ ಕುಮಾರ್, ಮಹಿಳಾ ಹಕ್ಕು ಹೋರಾಟಗಾರರಾದ ಮಧುಭೂಷನ್, ಕಾವ್ಯ ಅಚ್ಯುತ್ ಸಹಿ ಹಾಕಿದ್ದಾರೆ.
