ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಯತ್ನಾಳ್ ಹೇಳಿಕೆಯನ್ನು ಖಂಡಿಸಿ ಭಾವಚಿತ್ರ ದಹಿಸಿ ಪ್ರತಿಭಟಿಸಿರುವ ಕಾಂಗ್ರೆಸ್, ಯತ್ನಾಳ್ ಬಂಧನಕ್ಕೆ ಆಗ್ರಹಿಸಿದ್ದಾರೆ.
“ಬಸವಣ್ಣನವರಂತೆ ಹೊಳ್ಯಾಗ ಜಿಗಿಯಬೇಕು, ಇಲ್ಲವಾದರೆ ಸಾಬ್ರು ಆಗಿ” ಎಂದು ಯತ್ನಾಳ್ ನವೆಂಬರ್ 25ರಂದು ಬೀದರ್‌ನಲ್ಲಿ ವಕ್ಫ್ ವಿರೋಧಿ ಪ್ರತಿಭಟನಾ ಸಭೆಯಲ್ಲಿ ಹೇಳಿದ್ದರು.
ಈ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ಎಸ್ ಮನೋಹರ್ ವಕ್ತಾರ ಎಸ್ ಮನೋಹರ್, “ಇಡೀ ವಿಶ್ವಕ್ಕೆ ಸಮಾನತೆಯ ದಾರಿಯನ್ನು ತೋರಿದ ವಿಶ್ವಗುರು ಬಸವಣ್ಣನವರ ಇಂದಿಗೂ ವಿಶ್ವಕ್ಕೆ ದಾರಿದೀಪವಾಗಿದ್ದಾರೆ. ಬಸವಣ್ಣನವರ ಕುರಿತು ಅವಹೇಳನ ಮಾಡಿರುವ ಹಾಗೂ ರಾಜಕೀಯಕ್ಕೆ ಅವರ ಹೆಸರನ್ನು ಬಳಸಿಕೊಂಡಿರುವ ತುಚ್ಛ ನಾಲಿಗೆಯ ಬಸನಗೌಡ ಪಾಟೀಲರನ್ನು ಕೂಡಲೇ ಬಿಜೆಪಿ ಉಚ್ಚಾಟಿಸಬೇಕು. ಆತನ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಬೀದರ್ | ಯತ್ನಾಳ್ ಮಾತುಗಳು ಇತಿಹಾಸದ ಅರಿವಿಲ್ಲದ ಮಾತು : ಬಸವಲಿಂಗ ಪಟ್ಟದ್ದೇವರು
“ಬಿಜೆಪಿ ನಾಯಕರು ಬಸವಣ್ಣನವರ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ಅವರನ್ನು ಅವಹೇಳನ ಮಾಡಿರುವ ಬಸನಗೌಡ ಪಾಟೀಲ್ ಯತ್ನಾಳ್‌ರನ್ನ ಬಿಜೆಪಿಯಿಂದ ಉಚ್ಛಾಟಿಸುವ ಶಕ್ತಿಯನ್ನು ಕರ್ನಾಟಕ ಹಾಗೂ ಕೇಂದ್ರದ ಬಿಜೆಪಿ ನಾಯಕರು ಕಳೆದುಕೊಂಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಕರ್ನಾಟಕದಲ್ಲಿ ನಾಯಕತ್ವವೇ ಇಲ್ಲದಂತಾಗಿದೆ. ಬಿಜೆಪಿ ನಾಯಕರು ದಾರಿ ತಪ್ಪಿದ ಮಕ್ಕಳಂತಾಗಿದ್ದಾರೆ” ಎಂದು ಟೀಕಿಸಿದರು.
ಬಸವಣ್ಣನವರ ಬಗ್ಗೆ ಮಾತನಾಡುವ ಯೋಗ್ಯತೆ ಅರ್ಹತೆ ಬಿಜೆಪಿ ನಾಯಕರಿಗೆ ಇಲ್ಲ. ಬಿಜೆಪಿ ನಾಯಕರು ಇನ್ನು ಮುಂದೆ ವಿಶ್ವಗುರು ಬಸವಣ್ಣನವರ ಹೆಸರನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಈಗ ಬಳಸಿಕೊಂಡು ಬಸವಣ್ಣನವರನ್ನು ಹೀಯಾಳಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ವೇಳೆಯಲ್ಲೇ “ಕಾಂಗ್ರೆಸ್ ಸರ್ಕಾರದ ವಿರುದ್ಧ ಆಧಾರ ರಹಿತವಾದಂತ ಆರೋಪ ಮಾಡಿ ಇಂದು ರಾಜ್ಯದ ಜನತೆ ಮುಂದೆ ಬಿಜೆಪಿಯ ನಾಯಕರುಗಳ ಭ್ರಷ್ಟಾಚಾರದ ಬಣ್ಣವನ್ನು ಸ್ವತಃ ಅವರೇ ಬಹಿರಂಗಪಡಿಸಿಕೊಂಡಿದ್ದಾರೆ” ಎಂದರು.
ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಂ.ಇ.ಐ ಅಧ್ಯಕ್ಷರಾದ ಎಸ್ ಮನೋಹರ್, ಕಾಂಗ್ರೆಸ್ ಮುಖಂಡರುಗಳಾದ ಜಿ, ಪ್ರಕಾಶ್, ಹೇಮರಾಜ್, ಚಂದ್ರಶೇಖರ್, ಪುಟ್ಟರಾಜು, ಉಮೇಶ್ ,ಒಬಳೇಶ್ ಚಿನ್ನಿಪ್ರಕಾಶ್, ರವಿ, ಮಾಧವ, ಕುಶಾಲ್ ಅರವೇಗೌಡ, ನವೀನ್ ಸಾಯಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದರು.
