ಬೆಂಗಳೂರಿಗೆ ಬೇರೆ ರಾಜ್ಯದಿಂದ ನಾಯಿ ಮಾಂಸ ಸಾಗಾಟ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಹಿಂದೂ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಠಾಣೆಯಲ್ಲೇ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಕಾಟನ್ಪೇಟೆ ಪೊಲೀಸರು ಪುನೀತ್ ಕೆರೆಹಳ್ಳಿ ಅವರನ್ನು ರಾತ್ರಿ 12 ಗಂಟೆ ವೇಳೆಗೆ ಬಂಧಿಸಿದ್ದರು. ಠಾಣೆಯಲ್ಲಿ ಮಲಗಿದ್ದ ಪುನೀತ್ ಮುಂಜಾನೆ 4.45ರ ವೇಳೆಗೆ ಅಸ್ವಸ್ಥಗೊಂಡಿದ್ದು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಏನಿದು ನಾಯಿ ಮಾಂಸ ಸಾಗಾಟ ಆರೋಪ?
ಶುಕ್ರವಾರ ರಾತ್ರಿ ಜೈಪುರದಿಂದ ಸುಮಾರು 50ಕ್ಕೂ ಹೆಚ್ಚು ಬಾಕ್ಸ್‌ಗಳಲ್ಲಿ 4,500 ಕೆಜಿ ಕುರಿ ಮಾಂಸ ಸಾಗಿಸಲಾಗಿದ್ದು, ಇದರಲ್ಲಿ ನಾಯಿ ಮಾಂಸವನ್ನು ಕೂಡಾ ಸೇರ್ಪಡೆ ಮಾಡಲಾಗಿದೆ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿದ್ದಾರೆ.
ರೈಲಿನಿಂದ ಈ ಬಾಕ್ಸ್‌ಗಳನ್ನು ಹೊರಗೆ ತರುತ್ತಿದ್ದಂತೆ ಪುನೀತ್ ಕೆರೆಹಳ್ಳಿ ಮತ್ತು ಇತರರು ರೈಲು ನಿಲ್ದಾಣದಲ್ಲೇ ಬಾಕ್ಸ್‌ಗಳ ರವಾನೆಗೆ ಅಡ್ಡಿಪಡಿಸಿದ್ದರು. ಈ ಬಾಕ್ಸ್‌ಗಳಲ್ಲಿ ನಾಯಿ ಮಾಂಸ ಇದೆ, ಸ್ವಚ್ಛವಾಗಿಲ್ಲ ಎಂದು ದೂರಿದ್ದರು.
ಇದನ್ನು ಓದಿದ್ದೀರಾ? ಕೋಮು ದ್ವೇಷ ಹರಡಲು ಯತ್ನ: ಪುನೀತ್ ಕೆರೆಹಳ್ಳಿ ವಿರುದ್ಧ ಪೊಲೀಸ್ ದೂರು
ಆದರೆ ಮಾಂಸ ವ್ಯಾಪಾರಿ ಅಬ್ದುಲ್ ರಜಾಕ್, “ಇದು ಕುರಿ ಮಾಂಸವಾಗಿದೆ. ಪುನೀತ್ ಕೆರೆಹಳ್ಳಿ ಅವರಿಗೆ ರೋಲ್ ಕಾಲ್ ಕೊಡಲಿಲ್ಲ ಎಂಬ ಕಾರಣಕ್ಕೆ ಈ ರೀತಿ ಆರೋಪ ಮಾಡುತ್ತಿದ್ದಾರೆ. ಈ ಮಾಂಸ ಸಾಗಾಟಕ್ಕೆ ನನ್ನ ಬಳಿ ಪರವಾನಗಿ ಇದೆ” ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪುನೀತ್ ಕೆರೆಹಳ್ಳಿ ಬಂಧಿಸಲಾಗಿದ್ದು, ಸದ್ಯ ಅಸ್ವಸ್ಥರಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಈ ಮಾಂಸವನ್ನು ಬಿಬಿಎಂಪಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿಗಳು ಗುಣಮಟ್ಟ ಹಾಗೂ ಮಾಂಸ ದೃಢೀಕರಣಕ್ಕಾಗಿ ಪರೀಕ್ಷೆಗೆ ಕಳುಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಹಾರ ಸುರಕ್ಷತೆ ಅಧಿಕಾರಿ ಸುಬ್ರಮಣ್ಯ, “ನಾವು ಒಟ್ಟು ನಾಲ್ಕು ಬಾಕ್ಸ್‌ಗಳಿಗೆ ಸ್ಯಾಂಪಲ್ ಸಂಗ್ರಹಿಸಿದ್ದೇವೆ. ವಿವಿಧ ಭಾಗಗಳಿಂದ ಮಾಂಸದ ಮಾದರಿ ಪಡೆದಿದ್ದೇವೆ. ಇದನ್ನು ಲ್ಯಾಬ್‌ಗೆ ರವಾನಿಸಿ ಪರೀಕ್ಷಿಸಲಾಗುತ್ತದೆ” ಎಂದು ಹೇಳಿದ್ದಾರೆ.
“ಈ ಮಾಂಸದ ಪರೀಕ್ಷೆಯ ವರದಿ ಬರಲು 14 ದಿನಗಳು ಬೇಕಾಗುತ್ತದೆ. ಪರೀಕ್ಷೆಯಲ್ಲಿ ಈ ಮಾಂಸದ ಗುಣಮಟ್ಟ ಮತ್ತು ಇದು ಯಾವುದರ ಮಾಂಸ ಎಂದು ತಿಳಿಯಲಿದೆ. ಒಂದು ವೇಳೆ ದೂರಿನಂತೆ ಇದು ನಾಯಿ ಮಾಂಸವಾಗಿದ್ದರೆ ವ್ಯಾಪಾರಿಯ ಮೇಲೆ ಕ್ರಮ ಕೈಗೊಳ್ಳಲಾಗುವುದು. ಕುರಿ ಮಾಂಸವೇ ಆಗಿದ್ದರೆ ದೂರುದಾರನ ಮೇಲೆ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ” ಎಂದು ತಿಳಿಸಿದ್ದಾರೆ.