ಕರ್ನಾಟಕ ಹೈಕೋರ್ಟ್‌ನ ಸರ್ಕಾರಿ ಕಚೇರಿಯೊಂದರಲ್ಲಿ ತಮ್ಮ ಇಲಾಖೆಯ ಸಹೋದ್ಯೋಗಿಗಳು ಮತ್ತು ಸ್ನೇಹಿತರ ಜೊತೆಗೂಡಿ ಹುಟ್ಟುಹಬ್ಬ ಆಚರಿಸಿದ ಆರೋಪದ ಮೇಲೆ ನಾಲ್ವರು ಇಂಜಿನಿಯರ್ಗಳು ಹಾಗೂ ಓರ್ವ ಪ್ರಥಮ ದರ್ಜೆ ಸಹಾಯಕರೊಬ್ಬರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಸಹಾಯಕ ಇಂಜಿನಿಯರ್ಗಳಾದ ಲಾವಣ್ಯ, ಮೀನಾ ಎ.ಟಿ., ನವೀನ್, ಅಮೀನ್ ಎಸ್.ಆನದಿನ್ನಿ ಮತ್ತು ಪ್ರಥಮ ದರ್ಜೆ ಸಹಾಯಕರಾದ ಜಿ.ಹೆಚ್.ಚಿಕ್ಕಪ್ಪೇಗೌಡ ಎಂಬುವರು ಅಮಾನತುಗೊಂಡ ಅಧಿಕಾರಿಗಳಾಗಿದ್ದಾರೆ.
ಹೈಕೋರ್ಟ್ ಆವರಣದಲ್ಲಿರುವ ಲೋಕೋಪಯೋಗಿ ಇಲಾಖೆಯ ವಿಶೇಷ ಕಟ್ಟಡದ ಉಪ ವಿಭಾಗದ ಕಚೇರಿಯಲ್ಲಿ ಕಳೆದ ತಿಂಗಳು ಮಾರ್ಚ್ 10ರಂದು ನಗರಾಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ಮೀನಾ ಎ.ಟಿ. ಅವರ ಹುಟ್ಟುಹಬ್ಬ ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರದ ಬೇರೆ ಕಚೇರಿಗಳಲ್ಲಿ ಸಹಾಯಕ ಇಂಜಿನಿಯರ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದ ನವೀನ್, ಅಮೀನ್ ಎಸ್. ಆನದಿನ್ನಿ ಮತ್ತು ಇತರರು ಪಾಲ್ಗೊಂಡಿದ್ದರು.
ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಒಳಪಡುವ ಹೈಕೋರ್ಟ್ ಆವರಣದಲ್ಲಿರುವ ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿ ಮೇಲಧಿಕಾರಿಗಳ ಅನುಮತಿ ಪಡೆಯದೇ ಹುಟ್ಟುಹಬ್ಬ ಆಚರಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು, ಈ ಬಗ್ಗೆ ತನಿಖೆ ನಡೆಸಿ ವರದಿ ಪಡೆದಿದ್ದರು. ಸರ್ಕಾರಿ ಕಚೇರಿಯಲ್ಲಿ ನಿರ್ದಿಷ್ಟಪಡಿಸಿದ ಗಣ್ಯ ವ್ಯಕ್ತಿಗಳ ಜಯಂತಿ ಮತ್ತು ಕಾರ್ಯಕ್ರಮ ನಡೆಸಲು ಮಾತ್ರ ಅವಕಾಶವಿದ್ದು, ಇತರರ ಜಯಂತಿ ಆಚರಣೆಗೆ ಅವಕಾಶ ಇರುವುದಿಲ್ಲ ಆದೇಶದಲ್ಲಿ ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅತ್ಯಾಚಾರ ಯತ್ನ ಮಾಮೂಲು ಸಂಗತಿಯೇ ಗೃಹಸಚಿವರೇ?
ಹುಟ್ಟುಹಬ್ಬ ಆಚರಣೆ ವೇಳೆ ಹೈಕೋರ್ಟ್ನಲ್ಲಿ ಭದ್ರತೆಗಾಗಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾವನ್ನು ಸ್ವಿಚ್ ಆಫ್ ಮಾಡಿರುವುದು ಸಹ ಗಂಭೀರ ಸ್ವರೂಪದ ಕರ್ತವ್ಯಲೋಪವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮೇಲಧಿಕಾರಿಗಳ ಅನುಮತಿ ಪಡೆಯದೇ ಸಿಸಿ ಕ್ಯಾಮರಾ ಬಂದ್ ಮಾಡಿದ್ದು ಮತ್ತು ನಿಯಮಬಾಹಿರವಾಗಿ ಹುಟ್ಟುಹಬ್ಬ ಆಚರಿಸಿರುವುದು ಕರ್ನಾಟಕ ರಾಜ್ಯ ನಾಗರಿಕ (ನಡತೆ) ನಿಯಮಗಳು-2021ರ ನಿಯಮ 3(1)(1ರಿಂದ4) ಉಲ್ಲಂಘನೆಯಾಗಿದೆ ಎಂದು ತಿಳಿಸಿ ಈ ಎಲ್ಲ ಇಂಜಿನಿಯರ್ಗಳು ಹಾಗೂ ಪ್ರಥಮ ದರ್ಜೆ ಸಹಾಯಕರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ, ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಸರ್ಕಾರದ ಆದೇಶದಂತೆ ಶಿವಮೊಗ್ಗದ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ (ಸಂಪರ್ಕ ಮತ್ತು ಕೇಂದ್ರ) ಅವರು ಸರ್ಕಾರಿ ಕಚೇರಿಯಲ್ಲಿ ಹುಟ್ಟುಹಬ್ಬದ ಆಚರಣೆ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಶಿಸ್ತುಕ್ರಮ ಜರುಗಿಸುವಂತೆ ಶಿಫಾರಸು ಮಾಡಿದ್ದರು. ಹುಟ್ಟುಹಬ್ಬದ ಸಂದರ್ಭದಲ್ಲಿ ಹೈಕೋರ್ಟ್‌ನ ಭದ್ರತೆಗಾಗಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾ ಸ್ವಿಚ್ ಆಫ್ ಮಾಡಿದ್ದನ್ನು ಗಂಭೀರ ಸ್ವರೂಪದ ಕರ್ತವ್ಯಲೋಪವೆಂದು ಪರಿಗಣಿಸಲಾಗಿದೆ.