ರಾಜ್ಯಾದ್ಯಂತ ಇನ್ನೂ ನಾಲ್ಕು ದಿನ ಮಳೆ ಮುಂದುವರೆಯುವ ಸಾಧ್ಯತೆ: ಹವಾಮಾನ ಇಲಾಖೆ

Date:

Advertisements
  • ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಶೇ.6ರಷ್ಟು ಹೆಚ್ಚು ಮಳೆ
  • ಇಡೀ ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ

ರಾಜ್ಯಕ್ಕೆ ಮುಂಗಾರು ಪ್ರವೇಶಿಸಿ ಎರಡು ತಿಂಗಳು ಕಳೆದಿದ್ದು, ಜೂನ್‌ನಲ್ಲಿ ಕಾಣದ ಮಳೆಯ ಅಬ್ಬರ, ಜುಲೈ ತಿಂಗಳಿನಲ್ಲಿ ಜೋರಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಇನ್ನೂ ನಾಲ್ಕು ದಿನಗಳವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

“ಭಾನುವಾರ ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಕರಾವಳಿಯಲ್ಲಿ ಅತೀ ಮಳೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆ ಸಿದ್ದಾಪೂರದಲ್ಲಿ 20 ಸೆಂ.ಮೀ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16ಸೆಂ.ಮೀ, ಉಡುಪಿ ಜಿಲ್ಲೆಯ ಕುಂದೂರಿನಲ್ಲಿ 13 ಸೆಂ.ಮೀ, ಕೊಡಗು ಜಿಲ್ಲೆ ಭಾಗಮಂಡಲದಲ್ಲಿ 20ಸೆಂ.ಮೀ, ಶಿವಮೊಗ್ಗ ಜಿಲ್ಲೆ ಹುಂಚದಕಟ್ಟೆಯಲ್ಲಿ 14 ಸೆಂ.ಮೀ, ಚಿತ್ರದುರ್ಗ ಜಿಲ್ಲೆಯ ಕೊಮ್ಮರೆಡ್ಡಿ ಮತ್ತು ಕೊಪ್ಪದಲ್ಲಿ ತಲಾ 13ಸೆಂ.ಮೀ ಮಳೆಯಾಗಿದೆ ಹಾಗೂ ಉತ್ತರ ಒಳನಾಡಿನ ಎರಡು ಕಡೆ ಭಾರೀ ಮಳೆಯಾಗಿದ್ದು, ಬೆಳಗಾವಿ ಜಿಲ್ಲೆ ಮೊಂಡಾದಲ್ಲಿ 10ಸೆಂ.ಮೀ, ಬೆಳಗಾವಿಯಲ್ಲಿ 8 ಸೆಂ ಮೀ ಮಳೆಯಾಗಿದೆ” ಎಂದು ಹವಾಮಾನ ತಜ್ಞ ಪ್ರಸಾದ್ ತಿಳಿಸಿದರು.

“ನೈರುತ್ಯ ಮುಂಗಾರು ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಚುರುಕಾಗಿದ್ದು, ದಕ್ಷಿಣ ಒಳನಾಡಿನಲ್ಲಿ ತೀವ್ರವಾಗಿದೆ. ಜೂನ್‌ 1ರಿಂದ ಇಲ್ಲಿಯವರೆಗೂ ಇಡೀ ರಾಜ್ಯದಲ್ಲಿ ಮಳೆಯ ಕೊರತೆ ಶೇ. 4ರಷ್ಟು ಕಡಿಮೆಯಾಗಿದೆ. ವಾಡಿಕೆ ಮಳೆಯಾಗಲೂ ಇನ್ನೂ 4 ಸೆಂ.ಮೀ ಬಾಕಿ ಇದ್ದು, ಇದೀಗ ಒಟ್ಟು 38 ಸೆಂ.ಮೀ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಶೇ.6ರಷ್ಟು ಹೆಚ್ಚು ಮಳೆಯಾಗಿದೆ. ವಾಡಿಕೆ ಮಳೆ 19 ಸೆಂ.ಮೀ. ಮಳೆ ಆಗಿದ್ದು, 21 ಸೆಂ.ಮೀ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ವಾಡಿಕೆ ಮಳೆ 30 ಸೆಂ.ಮೀ ಇದ್ದು, 26 ಸೆಂ.ಮೀ ಮಳೆಯಾಗಿದೆ. ವಾಡಿಕೆ ಮಳೆಗೆ ಶೇ. 15ರಷ್ಟು ಮಳೆಯ ಕೊರತೆ ಇದೆ” ಎಂದು ಹೇಳಿದರು.

Advertisements

“ಇಡೀ ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಶೇ. 60ರಷ್ಟಾಗಿದೆ. ಬೀದರ್, ಹಾವೇರಿ, ಕಲಬುರ್ಗಿ, ದಾವಣಗೆರೆ ಹಾಗೂ ವಿಜಯನಗರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ಮೈಸೂರು, ತುಮಕೂರು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ” ಎಂದರು.

“ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಮಳೆ ಕೊರತೆ ಎದುರಾಗಿದ್ದು, ಕೊಡಗು ಜಿಲ್ಲೆಯಲ್ಲಿ ಶೇ.40, ರಾಮನಗರ ಜಿಲ್ಲೆಯಲ್ಲಿ ಶೇ.46, ಹಾಸನ ಜಿಲ್ಲೆ ಹಾಗೂ ವಿಜಯಪುರ ಜಿಲ್ಲೆಯಲ್ಲಿ ತಲಾ ಶೇ.29 ಮಳೆ ಕೊರತೆ ಉಂಟಾಗಿದೆ. ಬೆಂಗಳೂರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಶೇ. 12ರಷ್ಟು ಹೆಚ್ಚು ಮಳೆಯಾಗಿದೆ. ಜೂನ್ 1 ರಿಂದ ಇಲ್ಲಿಯವರೆಗೂ 17 ಸೆಂ.ಮೀ ವಾಡಿಕೆ ಮಳೆ ಇದ್ದು, 19 ಸೆಂ.ಮೀ ಮಳೆಯಾಗಿದೆ” ಎಂದು ತಿಳಿಸಿದರು.

“ಮುಂದಿನ ಮೂರು ದಿನಗಳಿಗೆ ಉತ್ತರ ಒಳನಾಡಿನಲ್ಲಿ ಭಾರೀ ಮಳೆಯಾಗುವ ಹಿನ್ನೆಲೆ, ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ. ಸೋಮವಾರ ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಭಾಗದಲ್ಲಿ 20ಸೆಂ.ಮೀ ಗೂ ಅಧಿಕ ಮಳೆ ಬೀಳುವ ಹಿನ್ನೆಲೆ ‘ರೆಡ್‌ ಅಲರ್ಟ್‌’ ನೀಡಲಾಗಿದೆ. ಮಂಗಳವಾರ ದಕ್ಷಿಣ ಒಳನಾಡು, ಶಿವಮೊಗ್ಗ, ಕೊಡಗು ಜಿಲ್ಲೆಗಳಿಗೆ ‘ಆರೆಂಜ್‌ ಅಲರ್ಟ್‌’ ನೀಡಲಾಗಿದೆ. ಶಿವಮೊಗ್ಗ, ಹಾಸನ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ. ಮಂಗಳವಾರದಿಂದ ನಾಲ್ಕು ದಿನಗಳವರೆಗೆ ಹಾಸನ, ಶಿವಮೊಗ್ಗ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ” ಎಂದು ಮಾಹಿತಿ ನೀಡಿದರು.

“ಬಿರುಗಾಳಿಯು ಗಂಟೆಗೆ 40 ರಿಂದ 50 ಕಿಲೋ ಮೀಟರ್‌ ವೇಗದಲ್ಲಿ ಬೀಸಲಿದೆ. ಹಾಗಾಗಿ, ಜುಲೈ 24ರಿಂದ ಐದು ದಿನಗಳವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ” ಎಂದರು.

ಬೆಂಗಳೂರಿನಲ್ಲಿ ಭಾರೀ ಮಳೆ

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನದಿಂದ ಜೋರು ಮಳೆ ಸುರಿಯುತ್ತಿದ್ದು, ಸೋಮವಾರ ಬೆಳಗ್ಗೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣವಿದೆ. ಬೆಳಗ್ಗೆಯಿಂದ ಜಿಟಿಜಿಟಿಯಿಂದ ಆರಂಭವಾದ ಮಳೆ ಮಧ್ಯಾಹ್ನದ ವೇಳೆಗೆ ಜೋರು ಮಳೆ ಸುರಿದಿದೆ. ಮುಂದಿನ ಐದು ದಿನದವರೆಗೆ ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಗರದ ತಾಪಮಾನ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ನಗರದಲ್ಲಿ ತಂಪು ವಾತಾವರಣವಿದ್ದು, ಚಳಿಯಿಂದ ತಪ್ಪಿಸಿಕೊಳ್ಳಲು ಜನ ಸ್ವೆಟರ್, ಟೋಪಿ ಮೊರೆಹೋಗಿದ್ದಾರೆ. ಎಲ್ಲೆಡೆ ಮಳೆಯಾಗುತ್ತಿರುವುದರಿಂದ ನಿತ್ಯ ಕೆಲಸಕ್ಕೆ ತೆರಳುವವರು, ವಾಹನ ಸವಾರರು ಮಳೆಯಿಂದ ಕ್ಷಣಕಾಲ ಪರದಾಡುವಂತಾಯಿತು.

ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶ, ಯಶವಂತಪುರ, ರಾಜರಾಜೇಶ್ವರಿ ನಗರ, ಮಲ್ಲೇಶ್ವರ, ಆರ್‌ ಟಿ ನಗರ, ಹೆಬ್ಬಾಳ, ಯಲಹಂಕ, ಜಾಲಹಳ್ಳಿ, ಪ್ರಕಾಶನಗರ, ವಿಜಯನಗರ, ಗೋವಿಂದರಾಜನಗರ, ಅಶೋಕನಗರ, ಚರ್ಚ್‌ಸ್ಟ್ರೀಟ್‌, ಎಂಜಿ ರಸ್ತೆ, ಜಾಲಹಳ್ಳಿ, ಕೋರಮಂಗಲ ಸೇರಿದಂತೆ ನಗರದ ನಾನಾ ಕಡೆ ಭಾರೀ ಮಳೆಯಾಗಿದೆ.

ನಗರದಲ್ಲಿ ಇನ್ನೂ ಐದು ದಿನ ಮೋಡ ಕವಿದ ವಾತಾವರಣವಿರಲಿದೆ. ಕೆಲವೊಮ್ಮೆ ಬಲವಾದ ಮೇಲ್ಮೈಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದೂರಮಾಡುತ್ತಿದ್ದ ಪ್ರಿಯಕರನಿಗೆ ಚಾಕುವಿನಿಂದ ಇರಿದ 38 ವರ್ಷದ ಮಹಿಳೆ : ಬಂಧನ

ರಾಜ್ಯದಲ್ಲಿ ಮಳೆಯ ಅವಾಂತರ

ರಾಜ್ಯದ ಮಲೆನಾಡು, ಕೊಡಗು, ದಕ್ಷಿಣ ಕನ್ನಡ ಹಾಗೂ ಮಂಗಳೂರು ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಕಳೆದ ಒಂದು ವಾರದಿಂದ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿರುವದರಿಂದ ಕೊಪ್ಪ ತಾಲೂಕಿನ ಬಸರೀಕಟ್ಟೆಯಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಆವರಣ ಗೋಡೆ ಕುಸಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಫಲ್ಗುಣಿ‌‌ ನದಿ ತುಂಬಿ ಅದ್ಯಪಾಡಿ ಸಮೀಪದ ಮುಗೇರ ಕುದ್ರು ಪ್ರದೇಶ ನದಿ ನೀರಿನಿಂದ ಜಲಾವೃತವಾಗಿದೆ. ಸುಮಾರು ‌30 ಕ್ಕೂ ಹೆಚ್ಚು ಮನೆಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮನೆಯ‌ ಸುತ್ತಲು ನೀರು ಆವರಿಸಿದೆ. ಸುಮಾರು 100 ಎಕರೆಗೂ ಹೆಚ್ಚು ಪ್ರದೇಶ ಜಲಾವೃತವಾಗಿದೆ. ಹೀಗಾಗಿ ಜನರು ದೋಣಿಯನ್ನು ಅವಲಂಬಿಸಿದ್ದಾರೆ.

ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಚೆರಿಯ ಪರಂಬು, ಕಲ್ಲುಮೊಟ್ಟೆ ಗ್ರಾಮಕ್ಕೆ ಜಲದಿಗ್ಬಂಧನ ಹಾಕಿದ್ದು, 70 ಕ್ಕೂ ಅಧಿಕ ಕುಟುಂಬಗಳು ನೆರೆಯಲ್ಲಿ ಸಿಲುಕಿಕೊಂಡಿವೆ.

ಅಂಕೋಲ ತಾಲೂಕಿನ ಬಿಳಿಹೊಯ್ಯ, ಹೊನ್ನೆಬೈಲ್ ಗ್ರಾಮಗಳಿಗೆ ನದಿ ನೀರು ನುಗ್ಗಿದೆ. ಸದ್ಯ ದೋಣಿಗಳ ಮೂಲಕ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದೆ. ಕಳೆದ ಎರಡು ವಾರದಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ, ಭೀಮಾ ಸೇರಿದಂತೆ ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X