- ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ
- ಮಳೆಯ ಕಾರಣ ವಿಳಂಬವಾಗುತ್ತಿರುವ ಕಾಮಗಾರಿ
ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆಗೆ ಮತ್ತೊಂದು ರ‍್ಯಾಂಪ್ ಅಳವಡಿಕೆ ಕಾಮಗಾರಿ ಜುಲೈ 19 ರೊಳಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪೂರ್ಣಗೊಳಿಸುವುದರಿಂದ ಮುಂದಿನ ವಾರ ಹೆಬ್ಬಾಳ ಸರ್ವೀಸ್ ರಸ್ತೆಯಲ್ಲಿ ಸಂಚಾರ ಪುನರಾರಂಭವಾಗಬಹುದು.
ಶನಿವಾರ ಬಿಡಿಎ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. “ಸರ್ವಿಸ್ ರಸ್ತೆಯಲ್ಲಿ ಡೌನ್ ರ‍್ಯಾಂಪ್ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಜುಲೈ 19 ರೊಳಗೆ ಸರ್ವಿಸ್ ರಸ್ತೆಯ ಎರಡು ಸ್ಥಳಗಳಲ್ಲಿ ಅಡಿಪಾಯ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಚ್ಚಲಾಗುವುದು. ನಂತರ, ಶೀಘ್ರದಲ್ಲೇ ಸಂಚಾರ ಪುನರಾರಂಭಿಸಬಹುದು” ಎಂದು ಬಿಡಿಎ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಸುರೇಶ್ ಆರ್ ತಿಳಿಸಿದರು.
“ರಸ್ತೆ ಪಕ್ಕದ ಗೋಡೆಗಳ ನಿರ್ಮಾಣ ಸೇರಿದಂತೆ ಇನ್ನಿತರ ಕೆಲಸಗಳು ನಡೆಯಬೇಕಿದ್ದು, ಇಡೀ ಯೋಜನೆ ಪೂರ್ಣಗೊಳ್ಳಲು ಕನಿಷ್ಠ ಒಂದೂವರೆ ವರ್ಷ ಬೇಕಾಗುತ್ತದೆ. ಮಳೆಯ ಕಾರಣ ಪ್ರತಿದಿನ ಕೆಲಸ ಕೆಲವು ಗಂಟೆಗಳ ಕಾಲ ವಿಳಂಬವಾಗುತ್ತಿದೆ. ಕಾಂಕ್ರೀಟ್ ಸುರಿದು ಎರಡು ಸ್ಥಳಗಳನ್ನು ಮುಚ್ಚಲು ಮೂರು ದಿನ ಸಮಯ ತೆಗೆದುಕೊಳ್ಳುತ್ತದೆ” ಎಂದು ಗುತ್ತಿಗೆದಾರರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕದಲ್ಲಿ ದಾಖಲಾದ ಪ್ರಕರಣಗಳಲ್ಲಿ ಸೈಬರ್ ಕ್ರೈಮ್ ಶೇ. 20 ರಷ್ಟಿದೆ: ಎಂ ಎ ಸಲೀಂ
ಸಂಚಾರ ದಟ್ಟಣೆ ತಗ್ಗಿಸುವ ಸಲುವಾಗಿ ಮೇಲ್ಸೇತುವೆಗೆ ಸುಮಾರು 700 ಅಡಿ ಉದ್ದದ ಮತ್ತೊಂದು ರ‍್ಯಾಂಪ್ ಅಳವಡಿಕೆ ಕಾಮಗಾರಿಯನ್ನು ಬಿಡಿಎ ಕೈಗೆತ್ತಿಕೊಂಡಿದೆ. ಹೆಚ್ಚುವರಿ ರ‍್ಯಾಂಪ್ ಕೊನೆಯಾಗುವ ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗ ಕಾಮಗಾರಿ ಸಲುವಾಗಿ ರಸ್ತೆ ಗುಂಡಿ ಅಗೆಯಲಾಗಿದೆ. ಹೀಗಾಗಿ, ಹೆಬ್ಬಾಳ ಪೊಲೀಸ್ ಠಾಣೆ ಮುಂಭಾಗದಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆವರೆಗಿನ ಸರ್ವೀಸ್ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.