- ಪ್ರಬಲ ಜಾತಿಗಳ ಒಲೈಕೆಗಾಗಿ ಮುಸ್ಲಿಮರ ಮೀಸಲಾತಿ ರದ್ದು
- ಭಾರತ ಅಂದರೆ ಬಿಜೆಪಿ ಅಲ್ಲ…, ಸರ್ವಾಧಿಕಾರಕ್ಕೆ ಬಗ್ಗುವುದಿಲ್ಲ
ಮುಸ್ಲಿಮರ ಮೀಸಲಾತಿಯನ್ನು ಕಸಿಯುವ ಮೂಲಕ ರಾಜ್ಯದಲ್ಲಿದ್ದ ಸಾಮಾಜಿಕ ನ್ಯಾಯದ ಪರಂಪರೆಯ ಮೇಲೆ ಬಿಜೆಪಿ ಸರ್ಕಾರ ದಾಳಿ ನಡೆಸಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ.
ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕಿದ್ದ 2ಬಿ ಮೀಸಲಾತಿಯನ್ನು ರದ್ದುಪಡಿಸಿ ಅವರನ್ನು ಇಡಬ್ಲ್ಯೂಎಸ್ ವರ್ಗಕ್ಕೆ ಸೇರಿಸಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಹಲವು ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಈ ವೇಳೆ ಮುಸ್ಲಿಂ ವಿದ್ಯಾರ್ಥಿ ಸಂಘಟನೆ (ಎಸ್‌ಐಓ) ಮುಖಂಡ ಝೀಶಾನ್ ಅಖಿಲ್ ಮಾತನಾಡಿ, “ಮುಸ್ಲಿ ಸಮುದಾಯಕ್ಕೆ ನೀಡಿರುವ ಮೀಸಲಾತಿ ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂಬ ಕಾರಣಕ್ಕೆ ಅಥವಾ ಧರ್ಮದ ಆಧಾರದಲ್ಲಿ ನೀಡಿರುವುದಲ್ಲ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗವನ್ನು ಸಮಾಜದ ಮುಖ್ಯ ಭೂಮಿಕೆಗೆ ತರುವ ನಿಟ್ಟಿನಲ್ಲಿ ಮೀಸಲಾತಿ ನೀಡಲಾಗಿದೆ. ಹಾಗಾಗಿ, ಸಂವಿಧಾನ ವಿರೋಧಿಯಾಗಿ ನೀಡಿರುವ ಇಡಬ್ಲ್ಯೂಎಸ್ ಮೀಸಲಾತಿ ನಮಗೆ ಬೇಡ. ಕಾನೂನು ಹೋರಾಟ ನಡೆಸಿ ಮರಳಿ ನಮ್ಮ ಮೀಸಲಾತಿಯನ್ನು ಪಡೆದುಕೊಳ್ಳುತ್ತೇವೆ” ಎಂದು ಸ್ಪಷ್ಟನೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ಶಶಾಂಕ್ ಮಾತನಾಡಿ, “ಮೀಸಲಾತಿ ರದ್ದುಪಡಿಸಿರುವ ಕ್ರಮದ ಉದ್ದೇಶ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಿಂದುಳಿದಿರುವ ಸಮುದಾಯವನ್ನು ಸಂಪೂರ್ಣವಾಗಿ ಮೀಸಲಾತಿಯಿಂದ ದೂರ ಉಳಿಸಲು ನಡೆಸಿರುವ ವ್ಯವಸ್ಥಿತ ಹುನ್ನಾರ. ಆರ್‌ಎಸ್‌ಎಸ್, ಸಂಘಪರಿವಾರ ತಲೆಮಾರುಗಳಿಂದ ಹೇಳಿಕೊಂಡು ಬಂದಿರುವ ಹಸಿ ಸುಳ್ಳುಗಳೆಲ್ಲ ಪ್ರಸ್ತುತದಲ್ಲಿ ಸರ್ಕಾರದ ಆದೇಶಗಳಾಗುತ್ತಿವೆ” ಎಂದು ಹರಿಹಾಯ್ದರು.
ದಲಿತ ವಿದ್ಯಾರ್ಥಿ ಸಂಘಟನೆ ಮುಖಂಡ ಚಂದ್ರು ಪೆರಿಯಾರ್ ಮಾತನಾಡಿ, “ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಂದರ್ಭಗಳಲೆಲ್ಲ ದಲಿತರು, ಆದಿವಾಸಿಗಳು, ಮುಸ್ಲಿಮರು, ಮಹಿಳೆಯರು ಹಾಗೂ ಕ್ರಿಶ್ಚಿಯನ್ನರ ಮೇಲೆ ನಿರಂತರ ದಾಳಿ ನಡೆಸಿರುವ ಬಿಜೆಪಿ ಸರ್ಕಾರ, 2023ರ ಚುನಾವಣಾ ಸಂದರ್ಭದಲ್ಲಿ ಪ್ರಬಲ ಜಾತಿಗಳ ಒಲೈಕೆಗಾಗಿ ರಾಜ್ಯ ಸರ್ಕಾರ ಮುಸ್ಲಿಂ ಸಮುದಾಯದ ಮೀಸಲಾತಿ ಕಸಿದಿದೆ. ಹಸಿದವರ ತಟ್ಟೆಯಿಂದ ಕಸಿದ ಅನ್ನವನ್ನು ಮತ್ತೊಬ್ಬರಿಗೆ ಉಣಬಡಿಸುವ ಬಿಜೆಪಿ ಸರ್ಕಾರದ ಭ್ರಷ್ಟ ರಾಜಕಾರಣವನ್ನು ವಿದ್ಯಾರ್ಥಿ ಸಮೂಹ ಒಪ್ಪುವುದಿಲ್ಲ. ಹಾಗಾಗಿ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಾಕಾರ ಮಾಡುವ ತಾಕತ್ತಿಲ್ಲತ್ತಿದ್ದರೆ ಅಧಿಕಾರ ಬಿಟ್ಟು ತೊಲಗಿ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಲಿಂಗಾಯತ ಪಂಚಮಸಾಲಿ ಉಪವರ್ಗಕ್ಕೆ ಮೀಸಲಾತಿ ಸಿಕ್ಕಿತೇ?
ಮುಂದಿನ ಸರದಿ ದಲಿತರದ್ದು!
14% ಇರುವ ಮುಸ್ಲಿಂ ಸಮುದಾಯಕ್ಕೆ ಈ ಹಿಂದೆ ಕೇವಲ 4% ಮೀಸಲಾತಿಯಿತ್ತು. ಆದರೆ, ಈಗ ಅವರನ್ನು ಇಡಬ್ಲ್ಯೂಎಸ್ ವರ್ಗಕ್ಕೆ ಸೇರಿಸಿ 10% ಮೀಸಲಾತಿ ಕೊಟ್ಟಿದ್ದೇವೆ ಎಂಬ ರಾಜ್ಯ ಸರ್ಕಾರದ ಹಲವು ನಾಯಕರ ಹೇಳಿಕೆಯನ್ನು ಕರ್ನಾಟಕ ವಿದ್ಯಾರ್ಥಿ ಸಂಘಟನೆ ಮುಖಂಡ ಸರೋವರ ಬೆಂಕಿನಕೆರೆ ಖಂಡಿಸಿದ್ದು, ಭಾರತ ಅಂದರೆ ಬಿಜೆಪಿ ಅಲ್ಲ, ಸರ್ವಾಧಿಕಾರಿ ನಡೆಗೆ ಬಗ್ಗುವುದಿಲ್ಲ ಎಂದು ಹರಿಹಾಯ್ದಿದ್ದಾರೆ.
“ಜನಸಂಖ್ಯೆಯ ಆಧಾರದಲ್ಲಿ ಮೀಸಲಾತಿ ಕೊಡಿ ಎಂದು ಕೇಳುತ್ತಿದ್ದವರ ಮೀಸಲಾತಿಯನ್ನೇ ಕಸಿದು ಸಾಮಾಜಿಕವಾಗಿ ಪ್ರಬಲವಾಗಿರುವ ಸಮುದಾಯಗಳೊಂದಿಗೆ ಸ್ಪರ್ಧಿಸಿ ಎನ್ನುತ್ತಿರುವುದು ಸರಿಯಲ್ಲ. ಮನು ಸಂಸ್ಕೃತಿಯನ್ನು ಮರಳಿ ತರುವುದರ ಭಾಗವಾಗಿ ಮುಸ್ಲಿಂ ಸಮುದಾಯ ನಂತರ ದಲಿತರು, ಆದಿವಾಸಿಗಳು, ಇತರೆ ಹಿಂದುಳಿದ ವರ್ಗಳು ಹಾಗೂ ಮಹಿಳೆಯರನ್ನು ಸಂಪೂರ್ಣವಾಗಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲು ತಮ್ಮ ಅಜೆಂಡಾವನ್ನು ಅನುಷ್ಟಾನ ಮಾಡುತ್ತಿದೆ. ಬಿಜೆಪಿ ಸರ್ಕಾರ ತನ್ನ ಈ ಚಿಲ್ಲರೆ ರಾಜಕಾರಣ ಬಿಡಬೇಕು. ಮುಸ್ಲಿಮರಿಗೆ 2ಬಿ ಮೀಸಲಾತಿಯನ್ನು ಮರಳಿ ಕೊಡಬೇಕು ಮತ್ತು ರಾಜ್ಯದಲ್ಲಿ ಎಲ್ಲರಿಗೂ ಉಚಿತ ಸಮಾನ ಶಿಕ್ಷಣ ಸಿಗಬೇಕು” ಎಂದು ಅವರು ಆಗ್ರಹಿಸಿದರು.
ಮುಸ್ಲಿಂ ಸಮುದಾಯದಿಂದ ಕಿತ್ತು ಹಂಚಿರುವ ಮೀಸಲಾತಿಯನ್ನು ಒಕ್ಕಲಿಗ, ಲಿಂಗಾಯತ ಹಾಗೂ ದಲಿತ ಸಮುದಾಯಗಳು ತಿರಸ್ಕರಿಸಬೇಕು. ಕಾನೂನು ಹೋರಾಟಕ್ಕೆ ಮುಂದಾಗಿರುವ ಮುಸ್ಲಿಂ ಸಮುದಾಯಕ್ಕೆ ಎಲ್ಲರೂ ನೈತಿಕ ಬೆಂಬಲ ಕೊಡಬೇಕು ಎಂದು ವಿದ್ಯಾರ್ಥಿ ಮುಖಂಡರು ಕರೆ ಕೊಟ್ಟರು.