ರಾಹುಲ್ ಗಾಂಧಿ ಬಗ್ಗೆ ಅಪಪ್ರಚಾರ ಮಾಡಿದ ಬಲಪಂಥೀಯ ಯೂಟ್ಯೂಬರ್ ಅಜಿತ್ ಭಾರ್ತಿ ವಿರುದ್ಧ ಬೆಂಗಳೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. “ಸುಳ್ಳು ಹೇಳಿಕೆಗಳ ಮೂಲಕ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಹರಡುತ್ತಿದ್ದಾರೆ” ಎಂದು ಆರೋಪಿಸಿ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ಘಟಕದ ಕಾರ್ಯದರ್ಶಿ ಹಾಗೂ ವಕೀಲ ಬಿ.ಕೆ.ಬೋಪಣ್ಣ ಅವರ ದೂರಿನ ಆಧಾರದ ಮೇಲೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಮ್ಮ ಭಾಷಣಗಳಲ್ಲಿ ರಾಮಮಂದಿರದ ಜಾಗದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸುವ ಪ್ರಸ್ತಾಪ ಮಾಡಿದ್ದಾರೆ ಎಂದು ಯೂಟ್ಯೂಬರ್ ಅಜಿತ್ ಭಾರ್ತಿ ವಿಡಿಯೋವೊಂದರಲ್ಲಿ ಸುಳ್ಳು ಆರೋಪವನ್ನು ಮಾಡಿದ್ದಾರೆ. ಬೋಪಣ್ಣ ತನ್ನ ದೂರಿನಲ್ಲಿ ಅಜಿತ್ ಭಾರ್ತಿ ಅವರು ಎಕ್ಸ್ನಲ್ಲಿ ಹಂಚಿಕೊಂಡಿರುವ ವಿಡಿಯೋವನ್ನು ಉಲ್ಲೇಖಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ಚುನಾವಣೆಯಲ್ಲಿ ಮೋದಿಗಿಂತ ರಾಹುಲ್ ಗಾಂಧಿ ಹೆಚ್ಚು ಪ್ರಭಾವಶಾಲಿ ಆಗಿದ್ಹೇಗೆ?
ವಿಡಿಯೋದಲ್ಲಿ ಅಜಿತ್ ಭಾರ್ತಿ, “ನಮ್ಮ ಮಂದಿರ ಇದ್ದ ಜಾಗದಲ್ಲಿ ಮಸೀದಿ ಇದ್ದರೆ ಅದನ್ನು ನಾವು ಕೆಡವುತ್ತೇವೆ ಎಂದು ಮೋದಿ ಎಂದಿಗೂ ಹೇಳಿಲ್ಲ. ಬಿಜೆಪಿ ಕೆಲವು ನಾಯಕರು ಹೇಳಿರಬಹುದು. ಆದರೆ ಕೆಲವು ಪಕ್ಷದ ಪ್ರಮುಖ ನಾಯಕರು ಇಂತಹ ಭಾಷಣ ಮಾಡುತ್ತಾರೆ. ರಾಹುಲ್ ಗಾಂಧಿ ಮಾಡಿದ್ದಾರೆ. ರಾಮಮಂದಿರವನ್ನು ಕೆಡವಿ ಮತ್ತೆ ಬಾಬರಿ ಮಸೀದಿ ಕಟ್ಟುತ್ತೇವೆ ಎಂದು ಹೇಳಿದ್ದಾರೆ. ನೇರವಾಗಿ ಹೇಳಲಾಗುತ್ತದೆ” ಎಂದು ಹೇಳಿರುವುದು ಕಾಣಬಹುದು.
When did Rahul Gandhi say in any of his speeches that Ram Mandir will be removed and he would bring back Babri Masjid?
They repeatedly spread disinformation because they know they are protected by BJP and the opposition will not take any action against them. pic.twitter.com/TzSgaVlONs— Mohammed Zubair (@zoo_bear) June 15, 2024
ಈ ವಿಡಿಯೋ ಆಧಾರದಲ್ಲಿ ದೂರು ನೀಡಿರುವ ಬಿ.ಕೆ.ಬೋಪಣ್ಣ, “ರಾಹುಲ್ ಗಾಂಧಿಯವರು ತಮ್ಮ ಭಾಷಣಗಳಲ್ಲಿ ರಾಮ ಮಂದಿರದ ಬದಲಿಗೆ ಬಾಬರಿ ಮಸೀದಿಯನ್ನು ಮರಳಿ ತರಲು ಉದ್ದೇಶಿಸಿದ್ದಾರೆ ಎಂದು ಅಜಿತ್ ಭಾರ್ತಿ ಸುಳ್ಳು ಹೇಳಿದ್ದಾರೆ. ರಾಹುಲ್ ಗಾಂಧಿ ತಮ್ಮ ಯಾವುದೇ ಭಾಷಣದಲ್ಲಿ ಇಂತಹ ಹೇಳಿಕೆಗಳನ್ನು ನೀಡಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ ಉಗ್ರ ದಾಳಿ ಬಗ್ಗೆ ಪ್ರಧಾನಿ ಮೋದಿ ‘ಮೌನ’ ಪ್ರಶ್ನಿಸಿದ ರಾಹುಲ್ ಗಾಂಧಿ
“ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಹುಟ್ಟುಹಾಕಲು ಸುಳ್ಳು ಮಾಹಿತಿಯನ್ನು ಹರಡಿದ್ದಾರೆ. ಭಾರ್ತಿ ಅವರ ಹೇಳಿಕೆಗಳು ಸಾರ್ವಜನಿಕ ಶಾಂತಿಯನ್ನು ಕದಡುವ ಮತ್ತು ಜನರನ್ನು ಕೆರಳಿಸುವ ಉದ್ದೇಶವನ್ನು ಹೊಂದಿವೆ. ಧಾರ್ಮಿಕ ಗುಂಪುಗಳ ನಡುವೆ ಸಂಘರ್ಷ ಮತ್ತು ದ್ವೇಷದ ಬೀಜಗಳನ್ನು ಬಿತ್ತುವ ಮೂಲಕ ಸಾಮಾಜಿಕ ಶಾಂತಿಯನ್ನು ನಾಶಪಡಿಸುವಲ್ಲಿ ತೊಡಗಿದ್ದಾರೆ” ಎಂದು ಬೋಪಣ್ಣ ಆರೋಪಿಸಿದರು.
ಪೊಲೀಸರು ಐಪಿಸಿ ಸೆಕ್ಷನ್ 153ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ ಅಥವಾ ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 505 (2) (ವರ್ಗಗಳ ನಡುವೆ ದ್ವೇಷ, ಅಥವಾ ಕೆಟ್ಟ ಇಚ್ಛೆಯನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.