- ಜಾಲತಾಣದ ಮೂಲಕ ₹25,000 ಬೆಲೆಗೆ ಮತದಾರರ ಮಾಹಿತಿ ಮಾರಾಟಕ್ಕೆ ಇರಿಸಿದ ಖಾಸಗಿ ಸಂಸ್ಥೆ
- ವಿಧಾನಸಭಾ ಕ್ಷೇತ್ರದ ದತ್ತಾಂಶ ಖರೀದಿಸಿ, 2023ರ ಚುನಾವಣೆಯಲ್ಲಿ ಗೆಲ್ಲಿ ಎಂದು ಜಾಹೀರಾತು
ಮತದಾರರ ದತ್ತಾಂಶ ಕಳ್ಳತನ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ, ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಖಾಸಗಿ ಸಂಸ್ಥೆಯ ವೆಬ್ಸೈಟ್ ದೆಹಲಿ ವಿಳಾಸದಲ್ಲಿ ನೋಂದಣಿಯಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು, ಮತದಾರರ ದತ್ತಾಂಶ ಮಾರಾಟಕ್ಕೆ ಇರಿಸಿದ್ದ ವೆಬ್ಸೈಟ್ನ ಸರ್ವರ್ ಬಗ್ಗೆ ತಾಂತ್ರಿಕ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಬಗ್ಗೆ ಇನ್ನೂ ಕೆಲವೇ ದಿನಗಳಲ್ಲಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸ್ತುತವಾಗಿ ದತ್ತಾಂಶ ಮಾರಾಟ ಮಾಡುತ್ತಿದ್ದ ಖಾಸಗಿ ಸಂಸ್ಥೆಯ ವಿರುದ್ಧ ತನಿಖೆ ಕೈಗೊಂಡಿರುವುದರಿಂದ ಖಾಸಗಿ ಸಂಸ್ಥೆಯ ಹೆಸರು ಸದ್ಯಕ್ಕೆ ಬಹಿರಂಗ ಪಡಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.
“ಈ ಖಾಸಗಿ ಸಂಸ್ಥೆಯೂ ಬೆಂಗಳೂರು ದಕ್ಷಿಣ ಸೇರಿದಂತೆ ನಗರದ ಹಲವು ವಿಧಾನಸಭಾ ಕ್ಷೇತ್ರಗಳ ಮತದಾರರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿದೆ. ಕಲೆ ಹಾಕಿದ ಸಂಪೂರ್ಣ ಮಾಹಿತಿಯನ್ನು ತನ್ನ ಸರ್ವರ್ನಲ್ಲಿ ಅಪಲೋಡ್ ಮಾಡಿದ್ದು, ಜಾಲತಾಣದ ಮೂಲಕ ₹25,000 ಬೆಲೆಗೆ ಮಾಹಿತಿಯನ್ನು ಮಾರಾಟಕ್ಕೆ ಇರಿಸಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
“ಖಾಸಗಿ ಕಂಪನಿಯೂ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಪ್ರಕಟಿಸಿದ್ದು, ವಿಧಾನಸಭಾ ಕ್ಷೇತ್ರದ ದತ್ತಾಂಶವನ್ನು ₹25,000 ಬೆಲೆಗೆ ಖರೀದಿ ಮಾಡಿ, 2023ರ ಚುನಾವಣೆಯಲ್ಲಿ ಗೆಲ್ಲಿ ಎಂದು ಹೇಳಿದೆ. ಜಾಲತಾಣದಲ್ಲಿ ಲಾಗಿನ್ ಆಗಿ ಹಣ ಪಾವತಿ ಮಾಡಿದ ಬಳಿಕ ದತ್ತಾಂಶ ಡೌನ್ಲೋಡ್ ಮಾಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ” ಎಂದು ಮೂಲಗಳು ತಿಳಿಸಿವೆ.
ಈ ಖಾಸಗಿ ಸಂಸ್ಥೆಯ ವೆಬ್ತಾಣದಲ್ಲಿ ಏನಿದೆ?
ಈ ಖಾಸಗಿ ಸಂಸ್ಥೆಯ ವೆಬ್ತಾಣದಲ್ಲಿ ಒಟ್ಟು 6.50 ಲಕ್ಷ ಮತದಾರರ ಮಾಹಿತಿ ಲಭ್ಯವಿದೆ. ಸಂಪೂರ್ಣ ಮತದಾರರ ಪಟ್ಟಿಯನ್ನು ನೀಡಿದ್ದು, 3,45,089 ಪುರುಷರು, 2,93,000 ಮಹಿಳೆಯರು ಹಾಗೂ 5,630 ಇತರರ ವೈಯಕ್ತಿಕ ಮಾಹಿತಿ ಇದೆ.
ಈ ವೆಬ್ಸೈಟ್ನಲ್ಲಿ ಮತದಾರರ ದೂರವಾಣಿ ಸಂಖ್ಯೆ, ಸಾಮಾಜಿಕ ಮಾಧ್ಯಮ ಖಾತೆಗಳ ಮಾಹಿತಿ ಇದೆ. ಕನ್ನಡ, ತಮಿಳು ಹಾಗೂ ಇಂಗ್ಲಿಷ್ನಲ್ಲಿ ದತ್ತಾಂಶವಿದೆ ಎಂಬ ಬಗ್ಗೆ ತನಿಖೆಯಿಂದ ತಿಳಿದುಬಂದಿದೆ ಎಂದು ಮೂಲಗಳು ಹೇಳಿವೆ.
ಈ ಸುದ್ದಿ ಓದಿದ್ದೀರಾ? ₹25 ಸಾವಿರಕ್ಕೆ ಮತದಾರರ ಮಾಹಿತಿ ಮಾರಾಟ; ಎಫ್ಐಆರ್ ದಾಖಲು
ದತ್ತಾಂಶ ಮಾರಾಟಕ್ಕೆ ಇರಿಸಿರುವ ಖಾಸಗಿ ಸಂಸ್ಥಯ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದ್ದು, 2023ರ ಏಪ್ರಿಲ್ನಲ್ಲಿ ದೆಹಲಿ ವಿಳಾಸದಲ್ಲಿ ಈ ವೆಬ್ಸೈಟ್ ಅನ್ನು ಖರೀದಿಸಿದ್ದಾರೆ. ಯುಪಿಐ ಮೂಲಕ ಖರೀದಿ ಮಾಡಿರುವುದಕ್ಕೆ ಹಣ ಪಾವತಿ ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟ ಪುರಾವೆಗಳು ಲಭಿಸಿವೆ. ಎಚ್ಡಿಎಫ್ಸಿ, ಐಸಿಐಸಿಐ ಹಾಗೂ ಆ್ಯಕ್ಸಿಸ್ ಬ್ಯಾಂಕ್ ಖಾತೆಗಳನ್ನು ಬಳಸಿದ್ದು, ಈ ಮೂರು ಬ್ಯಾಂಕ್ ಖಾತೆಗಳು ಒಬ್ಬನೇ ವ್ಯಕ್ತಿ ಹೆಸರಿನಲ್ಲಿವೆ. ಆ ವ್ಯಕ್ತಿಯ ಪತ್ತೆಗಾಗಿ ವಿಶೇಷ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.