ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘವು ಎನ್‌ಪಿಎಸ್ ಯೋಜನೆಯ ರದ್ದತಿಗೆ ಒತ್ತಾಯಿಸಿ ಮತ್ತು ಒಪಿಎಸ್ ಹಕ್ಕೊತ್ತಾಯಕ್ಕೆ ಫೆ.7 ಧರಣಿ ನಡೆಸಲು ತೀರ್ಮಾನಿಸಿದೆ.
ಎನ್‌ಪಿಎಸ್ ಯೋಜನೆಯನ್ನು 2025-26ನೇ ಸಾಲಿನ ಆಯವ್ಯಯದಲ್ಲಿ ರದ್ದುಗೊಳಿಸುವಂತೆ ಆಗ್ರಹಿಸಿ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಒಪಿಎಸ್ ಹಕ್ಕೊತ್ತಾಯ ಧರಣಿ ನಡೆಸಲು ವಿಶೇಷ ರಾಜ್ಯ ಕಾರ್ಯಕಾರಿಣಿ ಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿದೆ.
ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘವು 13.10.2022 ರಿಂದ ಒಂದು ತಿಂಗಳು ಒಪಿಎಸ್ ಸಂಕಲ್ಪ ಯಾತ್ರೆಯನ್ನು ಹಾಗೂ 14 ದಿನಗಳ ಕಾಲ ಒಪಿಎಸ್ ಜಾರಿಗಾಗಿ ಪ್ರೀಡಂ ಪಾರ್ಕ್‌ಲ್ಲಿ ಅಹೋರಾತ್ರಿ ಧರಣಿ ನಡೆಸಿತ್ತು. ಹಾಗೂ ಜನವರಿ ತಿಂಗಳಿಂದ ಮೂರು ತಿಂಗಳ ಕಾಲ Vote for OPS ಅಭಿಯಾನ ಕೂಡ ನಡೆಸಿತ್ತು.
ಆಗ ವಿರೋಧಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎನ್‌ಪಿಎಸ್ ಯೋಜನೆಯನ್ನು ರದ್ದುಗೊಳಿಸುವ ಭರವಸೆಯನ್ನು ತನ್ನ ಪುಣಾಳಿಕೆಯಲ್ಲಿ ಸೇರಿಸಿತ್ತು. ಮುಂದುವರಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ತಕ್ಷಣ ಸಂಘದ ಪದಾಧಿಕಾರಿಗಳೊಂದಿಗೆ 13.06.2023 ರಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿ ಎನ್‌ಪಿಎಸ್ ರದ್ದತಿ ಭರವಸೆ ನೀಡಿದ್ದರು.
ಈಗ ಮುಖ್ಯಮಂತ್ರಿಗಳು ಎನ್‌ಪಿಎಸ್ ಯೋಜನೆಯನ್ನು ರದ್ದುಗೊಳಿಸುವ ಕುರಿತು ಕ್ರಮಕೈಗೊಳ್ಳುವುದಾಗಿ ತಿಳಿಸಿ, ಈವರೆಗೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಒಪಿಎಸ್ ಹಕ್ಕೊತ್ತಾಯಕ್ಕೆ ಫೆ.7 ಧರಣಿ ನಡೆಸಲು ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ ತೀರ್ಮಾನಿಸಿದೆ.