ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದ 3,351 ವಿದ್ಯಾಥಿಗಳಿಗೆ 5.16 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗಿದ್ದು, ಡಿಬಿಟಿ ಮೂಲಕ ಪಾವತಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಸಗೋಡು ಜಯಸಿಂಹ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ಮಂಡಳಿಯಲ್ಲಿ ವಿದ್ಯಾರ್ಥಿ ವೇತನ ವಿತರಿಸಿ ಅವರು ಮಾತನಾಡಿದರು. “ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದ 4,123 ವಿದ್ಯಾರ್ಥಿಗಳು ಶಿಷ್ಯ ವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ, 3,351 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಾವತಿಸಲಾಗಿದೆ. ಫಲಾನುಭವ ಪಡೆದ ವಿದ್ಯಾರ್ಥಿಗಳಲ್ಲಿ ಪಿಯುಸಿ, ಸಾಮಾನ್ಯ ಪದವಿ ವ್ಯಾಸಂಗ ಮಾಡುತ್ತಿರುವ 1,511 ವಿದ್ಯಾರ್ಥಿಗಳಿಗೆ 2.26 ಕೋಟಿ ರೂ., ವೃತ್ತಿಪರ ಕೋರ್ಸ್ (ಮೆಡಿಕಲ್, ಇಂಜಿನಿಯರಿಂಗ್) ವ್ಯಾಸಂಗ ಮಾಡುತ್ತಿರುವ 1,840 ವಿದ್ಯಾರ್ಥಿಗಳಿಗೆ 2.90 ಕೋಟಿ ರೂ.ಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ” ಎಂದಿದ್ದಾರೆ.
“ಆರ್ಥಿಕವಾಗಿ ಹಿಂದುಳಿದಿರುವ ವಿಪ್ರ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬ್ರಾಹ್ಮಣ ಮಂಡಳಿ ವತಿಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದರೊಂದಿಗೆ ಸಮಾಜಕ್ಕೆ ಬೆಳಕಾಗಬೇಕು” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಮಲ್ಪೆ ಮೀನುಪೇಟೆ ಪ್ರಕರಣ-2: ಬಡವರ ಬದುಕು ಹಿಂಡುವ ಹಿಂದುತ್ವ
“2025-26ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 10 ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.
“ಮಂಡಳಿ ವತಿಯಿಂದ ಪ್ರತಿ ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಮೊದಲ 3 ಸ್ಥಾನ ಪಡೆದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಕ್ರಮವಾಗಿ 15 ಸಾವಿರ ರೂ., 10 ಸಾವಿರ ರೂ. ಹಾಗೂ 5 ಸಾವಿರ ರೂ.ಗಳನ್ನು ಪುರಸ್ಕಾರವಾಗಿ ನೀಡಲಾಗುತ್ತಿದೆ. ರಾಜ್ಯದ 32 ಜಿಲ್ಲೆಗಳ ಒಟ್ಟು 694 ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪುರಸ್ಕಾರವಾಗಿ ಒಟ್ಟು 80.35 ಲಕ್ಷ ರೂ. ನೀಡಲಾಗಿದೆ” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಮಲ್ಪೆ ಮೀನು ಪೇಟೆ ಪ್ರಕರಣ | ಕರಾವಳಿಯ (ಅ)ನ್ಯಾಯ ನಿರ್ಣಯದ ನಮೂನೆ
“ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಲಾಭದಾಯಕ ಉದ್ಯಮ ಸ್ಥಾಪಿಸಲು ಸಾಲದ ಮೇಲೆ 20%ರಷ್ಟು ಸಹಾಯಧನ ವಿತರಿಸಲಾಗುತ್ತದೆ. ಸದರಿ ಯೋಜನೆಯಿಂದ 192 ಫಲಾನುಭವಿಗಳು ಅನುಕೂಲ ಪಡೆದುಕೊಂಡಿದ್ದು, ಯೋಜನೆಯ ಒಟ್ಟು ವೆಚ್ಚ 36,78,671 ರೂ. ಆಗಿದೆ” ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕಿ ನಿರ್ದೇಶಕಿ ದೀಪಶ್ರೀ ಕೆ ಮಾತನಾಡಿ, “ಮುಂದಿನ ದಿನಗಳಲ್ಲಿ ಮಂಡಳಿಗೆ ಹೆಚ್ಚಿನ ಅನುದಾನವು ದೊರಕಿದ್ದಲ್ಲಿ ಸಮುದಾಯದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಯೋಜನೆಗಳನ್ನು ರೂಪಿಸಲಾಗುವುದು” ಎಂದು ತಿಳಿಸಿದರು.