ಇತ್ತೀಚೆಗೆ ಅಪ್ರಾಪ್ತ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ನಿರ್ಲಕ್ಷ್ಯದಿಂದ ನಿರ್ವಹಿಸಿದ ಮತ್ತು ಆಕೆಯ ತಾಯಿಗೆ ಕಿರುಕುಳ ನೀಡಿದ ಆರೋಪದಲ್ಲಿ ಇಬ್ಬರು ಪೊಲೀಸ್ ಸಬ್-ಇನ್ಸ್‌ಪೆಕ್ಟರ್‌ಗಳನ್ನು ರಾಜ್ಯ ಮಾನವ ಹಕ್ಕುಗಳ ಆಯೋಗ (SHRC) ತಪ್ಪಿತಸ್ಥರೆಂದು ಪರಿಗಣಿಸಿದೆ. ಆಯೋಗವು ಅವರ ಸಂಬಳದಿಂದ ಹಣ ವಸೂಲಿ ಮಾಡಿ, ಪರಿಹಾರವಾಗಿ ಸಂತ್ರಸ್ತೆಗೆ ಪ್ರತಿಯೊಬ್ಬರಿಗೂ 50,000 ದಂಡ ಪಾವತಿಸುವಂತೆ ತಿಳಿಸಿದೆ.
ಠಾಣಾಧಿಕಾರಿಯೊಂದಿಗೆ ಇಬ್ಬರನ್ನು ಪೋಕ್ಸೋ ಕಾಯ್ದೆ, 2012 ಅನ್ನು ಉಲ್ಲಂಘಿಸಿದ ಆರೋಪದಲ್ಲಿ ತಪ್ಪಿತಸ್ಥರೆಂದು ಘೋಷಿಸಲಾಗಿದೆ. ಆದರೆ ಇನ್‌ಸ್ಪೆಕ್ಷರ್ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿದೆ.
ಇದನ್ನು ಓದಿದ್ದೀರಾ? ಬಾಲಕಿಯ ಅತ್ಯಾಚಾರ; ಮಠದ ಅರ್ಚಕ ಸೇರಿ ಇಬ್ಬರ ಬಂಧನ
13 ವರ್ಷದ ಸಂತ್ರಸ್ತೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿರುವ ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದಳು. ಆಕೆಯ ತಾಯಿ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಘಟನೆ 2023ರ ಜನವರಿಯಲ್ಲಿ ನಡೆದಿದೆ. ಇಬ್ಬರು ಬಾಲಕರು, ಬಾಲಕಿಯ ಸಂಬಂಧಿಕರು ಅತ್ಯಾಚಾರ ನಡೆಸಿದ್ದು, ಬಾಲಕಿ ಗರ್ಭಿಣಿಯಾಗಿದ್ದಳು. ಇದು ತಿಳಿದ ಅಜ್ಜಿ ಪೊಲೀಸರಿಗೆ ಮತ್ತು ಬಾಲಕಿಯ ತಾಯಿಗೆ ತಿಳಿಸದೆಯೇ ಗರ್ಭಪಾತ ಮಾಡಿಸಲು ಆಸ್ಪತ್ರೆಗೆ ಕರೆದೊಯ್ದಿದ್ದರು.
ಘಟನೆಯ ಬಗ್ಗೆ ತಿಳಿದ ತಾಯಿ ಆಸ್ಪತ್ರೆಗೆ ಧಾವಿಸಿ, ಗಲಾಟೆ ಮಾಡಿ, ದೂರು ದಾಖಲಿಸಲು ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದರು. ದೂರು ಸ್ವೀಕರಿಸಿದರೂ ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬ ಮಾಡಿದ ಪಿಎಸ್‌ಐಗಳಾದ ಹರೀಶ್ ಮತ್ತು ಪಾಪಣ್ಣ, ವಿಚಾರಣೆಯ ನೆಪದಲ್ಲಿ ಇಡೀ ದಿನ ಠಾಣೆಯಲ್ಲಿಯೇ ಕಾಯಿಸಿದ್ದರು.
ಇದನ್ನು ಓದಿದ್ದೀರಾ? ಕಲಬುರಗಿ | ದಲಿತ ಬಾಲಕಿಯರ ಅತ್ಯಾಚಾರ ಪ್ರಕರಣ; ಸೆ.30ರಂದು ಯಾದಗಿರಿ ಬಂದ್‌ಗೆ ಕರೆ
ಬಳಿಕ ತಾಯಿಯನ್ನು ಮರುದಿನ ಬರುವಂತೆ ಹೇಳಿ ವಾಪಸ್ ಕಳುಹಿಸಲಾಗಿದೆ. ಇದು ಪೋಕ್ಸೊ ಪ್ರಕರಣವಾಗಿದ್ದರೂ, ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಮರುದಿನ ಇಬ್ಬರು ಪಿಎಸ್‌ಐಗಳು ಆರೋಪಿಯನ್ನು ಠಾಣೆಗೆ ಕರೆಸಿ, ಸಂತ್ರಸ್ತೆ ಮತ್ತು ಆರೋಪಿಗಳಿಗೆ ಮುಖಾಮುಖಿಯಾಗಿ ವಿಚಾರಣೆ ನಡೆಸಿದರು. ಹಾಗೆಯೇ ಅಧಿಕಾರಿಗಳು ಆರೋಪಿಯ ಕುಟುಂಬ ಸದಸ್ಯರನ್ನು ಕರೆಸಿ, ದೂರುದಾರರನ್ನು ಬೆದರಿಸಿ ಅವಮಾನಿಸಿ ದೂರನ್ನು ಕೈಬಿಡುವಂತೆ ಒತ್ತಾಯಿಸಿದರು.
ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ನಂತರವೇ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಆರ್‌ಸಿ ತಿಳಿಸಿದೆ. ಇನ್ನು ಪೊಲೀಸರು ಬಾಲಕಿಯನ್ನು ಸರ್ಕಾರಿ ಬಾಲಕಿಯರ ಗೃಹಕ್ಕೆ ಕಳುಹಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಬದಲು ರಾತ್ರಿಯಿಡೀ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಈ ಎಲ್ಲಾ ಕಿರುಕುಳವನ್ನು ಸಹಿಸಲಾಗದೆ, ಬಾಲಕಿಯ ತಾಯಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದರು.
