ಅಪಾರ್ಟ್‌ಮೆಂಟ್ ಮಾಲೀಕನ ಸಹೋದರ ತನ್ನ ಕಪಾಳೆಕ್ಕೆ ಹೊಡೆದು, ಕತ್ತು ಹಿಸುಕಿ ಉಸಿರುಗಟ್ಟಿಸಿ ಹಲ್ಲೆ ನಡೆಸಿದ್ದಾರೆ ಎಂದು ಬಾಡಿಗೆದಾರ ಯುವತಿ ಆರೋಪಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಸಂಜಯ್‌ನಗರದ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಪಶ್ಚಿಮ ಬಂಗಾಳದ 26 ವರ್ಷದ ಯುವತಿಯ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮಂಜುನಾಥ ಗೌಡ ಎಂಬಾತನನ್ನು ಬಂಧಿಸಿದ್ದಾರೆ.
“ಡಿಸೆಂಬರ್ 3ರಂದು ಆರ್ಡರ್ ಮಾಡಿದ್ದ ಪಾರ್ಸೆಲ್ ತೆಗೆದುಕೊಳ್ಳಲು ಅಪಾರ್ಟ್‌ಮೆಂಟ್‌ನ ಗೇಟ್ ಬಳಿ ಬಂದಾಗ ನನ್ನ ಮೇಲೆ ಮಾಲೀಕನ ಸಹೋದರ ಮಂಜುನಾಥ್ ಗೌಡ ಹಲ್ಲೆ ನಡೆಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಆರೋಪಿ ನನ್ನನ್ನು ಅವಾಚ್ಯವಾಗಿ ನಿಂದಿಸಿ, ಕಪಾಳಕ್ಕೆ ಹೊಡೆದಿದ್ದಾರೆ. ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ನನ್ನ ಬೆರಳುಗಳನ್ನುಕಚ್ಚಿದ್ದಾನೆ. ನನ್ನನ್ನು ತನ್ನ ಮನೆಗೆ ಎಳೆದೊಯ್ಯಲು ಯತ್ನಿಸಿದ, ಆಗ ನಾನು ಜೋರಾಗಿ ಕಿರುಚಿಕೊಂಡ, ಆತ ಓಡಿ ಹೋದರು” ಎಂದು ಯುವತಿ ಆರೋಪಿಸಿದ್ದಾರೆ.
“ಆ ಬಳಿಕ, ನಾನು ನನ್ನ ಕೊಠಡಿಗೆ ತೆರಳುವಾಗ ಮತ್ತೆ ನನ್ನನ್ನು ತಡೆದು, ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸಿದ. ಕತ್ತು ಹಿಸುಕಿ ಉಸಿರುಗಟ್ಟಿಸಿದ್ದು, ನಾನನ್ನು ಮೆಟ್ಟಿಲುಗಳ ಮೇಲೆ ತಳ್ಳಿ, ನಾನು ಪ್ರಜ್ಞೆ ಕಳೆದುಕೊಳ್ಳುವವರೆಗೂ ನನ್ನ ತಲೆಯನ್ನು ಗೋಡೆಗೆ ಬಡಿದಿದ್ದಾನೆ” ಎಂದು ಯುವತಿ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ದಾಳಿಯ ಸಂದರ್ಭದಲ್ಲಿ ಆರೋಪಿಯು ಅಶ್ಲೀಲವಾಗಿ ನಿಂದಿಸಿದ್ದಾನೆ. ‘ಈಗ ನಾನು ನಿಮಗೆ ಏನು ಬೇಕಾದರೂ ಮಾಡಬಲ್ಲೆ’ ಎಂದು ಬೆದರಿಕೆ ಹಾಕಿದ್ದಾನೆ. ದಾಳಿಯನ್ನು ತಡೆಯಲು ಯತ್ನಿಸಿದ ನನ್ನ ಸ್ನೇಹಿತೆಯ ಮೇಲೂ ಹಲ್ಲೆ ಮಾಡಿದ್ದಾನೆ. ಅವನ ಮಾತುಗಳು ಮತ್ತು ವರ್ತನೆಯು ಆತ ನನ್ನ ಮೇಲೆ ಅತ್ಯಾಚಾರ ಎಸಗಲು ಉದ್ದೇಶಿಸಿದ್ದಾನೆ ಎಂಬುದನ್ನು ತೋರಿಸುತ್ತಿತ್ತು” ಎಂದು ಯುವತಿ ಆರೋಪಿಸಿದ್ದಾರೆ.
A man was arrested for allegedly harassing and assaulting a young woman under the influence of alcohol in #Bengaluru's #SanjayNagar. A counter case was also filed against the woman by the apartment owner. The accused, #ManjunathGowda, is the son of the owner of a flat at… pic.twitter.com/9rxI67GRSV
— Hate Detector 🔍 (@HateDetectors) December 9, 2024
ಈ ಹಿಂಸಾತ್ಮಕ ಘಟನೆಗೂ ಹಿಂದಿನ ಹಲವಾರು ತಿಂಗಳುಗಳಿಂದಲೂ ಆತ ತಮಗೆ ಕಿರುಕುಳ ನೀಡುತ್ತಿದ್ದನೆಂದು ಯುವತಿ ಹೇಳಿಕೊಂಡಿದ್ದಾರೆ. ತನ್ನ ಮೇಲಾದ ದೌರ್ಜನ್ಯದ ಬಗ್ಗೆ ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಯುವತಿ, ತನ್ನ ಕುತ್ತಿಗೆ, ಬೆರಳುಗಳು, ತೋಳುಗಳು ಮತ್ತು ಭುಜಗಳ ಮೇಲೆ ತೀವ್ರ ಗಾಯಗಳಾಗಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ತನ್ನ ವೀಡಿಯೊದಲ್ಲಿ, “ಮಹಿಳೆಯೊಂದಿಗೆ ಯಾರಾದೂ ಜಗಳ ಮಾಡಿದರೆ, ಅವರ ಮೊದಲ ಅಸ್ತ್ರ ಆಕೆಯ ವ್ಯಕ್ತಿತ್ವವನ್ನು ನಾಶ ಮಾಡುವುದೇ ಆಗಿರುತ್ತದೆ. ಆದರೆ, ಕರ್ನಾಟಕದ ಜನರ ನ್ಯಾಯದ ಪರವಾಗಿ ದನಿಗೂಡಿಸುತ್ತಾರೆಂದು ನಾನು ನಂಬಿಸಿದ್ದೇನೆ. ಇದು ಕೇವಲ ನನ್ನ ಮೇಲಿನ ದೌರ್ಜನ್ಯವಲ್ಲ; ಪ್ರತಿ ಮಹಿಳೆಯ ಮೇಲೂ ಇಂತಹ ದೌರ್ಜನ್ಯಗಳು ನಡೆಯುತ್ತಿವೆ” ಎಂದು ಹೇಳಿದ್ದಾರೆ. ಯುವತಿ ತಾನಿದ್ದ ಬಾಡಿಕೆ ಮನೆಯನ್ನು ಖಾಲಿ ಮಾಡಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು, ಆರೋಪಿಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.