ಧರ್ಮಸ್ಥಳದ ವಕೀಲರು ಲೀಗಲ್ ನೋಟಿಸ್ ನೀಡಿದ್ದಾರೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಬೆಂಗಳೂರಿನಲ್ಲಿ ಸಾಹಿತಿ- ಚಿಂತಕರ ಸಭೆಗೆ ನೀಡಲಾಗಿದ್ದ ಸಭಾಂಗಣವನ್ನು ರದ್ದುಗೊಳಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿಗೆ ಸೌಜನ್ಯ ಪರ ಹೋರಾಟಗಾರರ ಪರವಾಗಿ ಎಸ್ ಬಾಲನ್ ಲೀಗಲ್ ನೋಟಿಸ್ ನೀಡಿದ್ದಾರೆ.
ಎಸ್ ಬಾಲನ್ ಅವರು ನೀಡಿರುವ ಲೀಗಲ್ ನೋಟಿಸ್‌ನಲ್ಲಿ ”ಧರ್ಮಸ್ಥಳದ ವಕೀಲರ ಹೆಸರಿನಲ್ಲಿ ನೀಡಲಾದ ಲೀಗಲ್ ನೋಟಿಸ್‌ಗೆ ವಿಳಾಸ, ಲೆಟರ್ ಹೆಡ್, ಸಂಪರ್ಕ ಸೇರಿದಂತೆ ಯಾವುದೇ ತಲೆ-ಬಾಲ ಇಲ್ಲವಾಗಿದ್ದು, ಸೌಜನ್ಯ ಪರ ಹೋರಾಟಗಾರರನ್ನು ದಾರಿ ತಪ್ಪಿಸಲು ಹೈಕೋರ್ಟ್ ಆದೇಶವನ್ನು ತಿರುಚಿ ವಂಚನೆ ಮಾಡಲಾಗಿದೆ” ಎಂದು ವಿವರಿಸಲಾಗಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಸೌಜನ್ಯ ಪ್ರಕರಣ: ಸಮಾನ ಮನಸ್ಕರ ಸಮಾಲೋಚನಾ ಸಭೆಗೆ ಪೊಲೀಸರಿಂದ ಅಡ್ಡಗಾಲು!
ಸೌಜನ್ಯ ಪರ ಹೋರಾಟಗಾರರು ಮಾರ್ಚ್ 9ರಂದು ‘ಸಾಹಿತಿಗಳ ಸಮಲೋಚನಾ ಸಭೆ’ ನಡೆಸಲು ಕನ್ನಡ ಸಾಹಿತ್ಯ ಪರಿಷತ್‌ಗೆ ಹಣ ಪಾವತಿಸಿ ಅಕ್ಕಮಹಾದೇವಿ ಸಭಾಂಗಣವನ್ನು ಬುಕ್ ಮಾಡಿದ್ದರು. ಆದರೆ ಮಾರ್ಚ್ 8ರಂದು “ಧರ್ಮಸ್ಥಳದ ವಕೀಲರೊಬ್ಬರು ಲೀಗಲ್ ನೋಟಿಸ್ ನೋಟಿಸ್ ಮತ್ತು ಹೈಕೋರ್ಟ್ ರಿಟ್ ಆದೇಶದ ಪ್ರತಿ ನೀಡಿದ್ದಾರೆ. ಆ ಕಾರಣಕ್ಕಾಗಿ ಸಭಾಂಗಣದ ಬುಕ್ಕಿಂಗ್ ಅನ್ನು ರದ್ದುಗೊಳಿಸಲಾಗುವುದು” ಎಂದು ತಿಳಿಸಲಾಗಿತ್ತು. ಸಭಾಂಗಣ ದಿಢೀರ್ ಆಗಿ ರದ್ದಾದ ಕಾರಣ ಸಭೆಯನ್ನೂ ಕೂಡಾ ರದ್ದುಗೊಳಿಸಲಾಗಿತ್ತು.
ಇದೀಗ ಸಭಾಂಗಣವನ್ನು ರದ್ದುಗೊಳಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿಗೆ ಹೋರಾಟಗಾರರ ಪರವಾಗಿ ಎಸ್ ಬಾಲನ್ ಲೀಗಲ್ ನೋಟಿಸ್ ನೀಡಿದ್ದಾರೆ. “ಧರ್ಮಸ್ಥಳದ ವಕೀಲರು ನೀಡಿದ್ದಾರೆ ಎಂದು ಕಳುಹಿಸಲಾದ ಲೀಗಲ್ ನೋಟಿಸ್‌ನಲ್ಲಿ ವಕೀಲನ ವಿಳಾಸ, ಇ-ಮೇಲ್ ಐಡಿ, ದೂರವಾಣಿ ಸಂಖ್ಯೆ ಇತ್ಯಾದಿಗಳು ಯಾವುದೂ ನಮೂದಿಸಲಾಗಿಲ್ಲ. ಎಸ್. ರಾಜಶೇಖರ್ ಎಂಬ ಹೆಸರಿನ ವಕೀಲರು ಯಾರು? ಅವರು ವೃತ್ತಿನಿರತರಾಗಿರುವ ಸ್ಥಳ ಯಾವುದು ಎಂಬ ಬಗೆಗಿನ ಯಾವ ಮಾಹಿತಿಯೂ ಇಲ್ಲವಾಗಿದ್ದು, ಖಾಲಿ ಹಾಳೆಯಲ್ಲಿ ನೋಟಿಸ್ ನೀಡಲಾಗಿದೆ” ಎಂದು ಬಾಲನ್ ತನ್ನ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.
ರಾಜಶೇಖರ್ ಎಂಬ ವಕೀಲರ ಹೆಸರಿನಲ್ಲಿ ವಿವಿಪುರಂ ಪೊಲೀಸ್ ಇನ್ಸ್‌ಪೆಕ್ಟರ್‌ಗೂ ನೋಟಿಸ್ ನೀಡಲಾಗಿದೆ. ಈ ನೋಟಿಸ್ ಅನ್ನು ಇನ್ಸ್‌ಪೆಕ್ಟರ್ ಕೂಡಾ ಕನ್ನಡ ಸಾಹಿತ್ಯ ಪರಿಷತ್‌ಗೆ ನೀಡಿದ್ದಾರೆ. ರಾಜಶೇಖರ್ ಎಂಬ ವಕೀಲರ ಹೆಸರಿನಲ್ಲಿ ನೀಡಲಾದ ನೋಟಿಸ್‌ನಲ್ಲಿ “ಜಸ್ಟಿಸ್ ಪಾರ್ ಸೌಜನ್ಯ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮಗಳು ಅಥವಾ ಸಾರ್ವಜನಿಕ ಕಾರ್ಯಗಳನ್ನು ಯಾರೂ ಕೂಡಾ ನಡೆಸದಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ” ಎಂದು ಉಲ್ಲೇಖಿಸಲಾಗಿದೆ. ಆದರೆ ಈ ವಾದ ಅಥವಾ ಹೇಳಿಕೆಗಳು ವಂಚನೆ ಮಾತ್ರವಲ್ಲ, ಹಾಸ್ಯಾಸ್ಪದವೂ ಆಗಿದೆ ಎಂದು ವಕೀಲ ಬಾಲನ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಸೌಜನ್ಯ ಪ್ರಕರಣದಲ್ಲಿ ಬಿಜೆಪಿ ಮೌನ; ಒಂದು ವೇಳೆ ಕೊಲೆಗಡುಕರು ಮುಸ್ಲಿಂ ಆಗಿದ್ದರೆ?
“ಹೈಕೋರ್ಟ್ ತನ್ನ ಆದೇಶದಲ್ಲಿ ಸೌಜನ್ಯ ಪ್ರಕರಣದಲ್ಲಿ ಯಾವುದೇ ವ್ಯಕ್ತಿಯು ಅವಹೇಳನಕಾರಿಯಾಗಿ ಯಾವುದೇ ಹೇಳಿಕೆಯನ್ನು ನೀಡಿದರೆ ಅಥವಾ ಅಂತಹ ಯಾವುದೇ ಅವಹೇಳನಕಾರಿ ಹೇಳಿಕೆಯನ್ನು ಪ್ರಕಟಿಸಿದರೆ, ಪ್ರತಿವಾದಿ ಪೊಲೀಸರು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಪರಾಧ ನಡೆದರೆ, ಕಾನೂನಿನ ಪ್ರಕಾರ ತಕ್ಷಣ ಕ್ರಮ ಕೈಗೊಳ್ಳುವುದು ಪೊಲೀಸರ ಬದ್ಧ ಕರ್ತವ್ಯ. ಆದರೆ ಹೈಕೋರ್ಟ್‌ನ ಈ ಸ್ಪಷ್ಟ ಆದೇಶವನ್ನು ತಿರುಚಿ, ಧರ್ಮಸ್ಥಳದ ಬಗ್ಗೆ ಯಾರೂ ಮಾತನಾಡಬಾರದು ಎಂದು ಬಿಂಬಿಸಿ ನೋಟಿಸ್ ನೀಡಲಾಗಿದೆ” ಎಂದು ಬಾಲನ್ ಆರೋಪಿಸಿದ್ದಾರೆ.
“ತಲೆ ಮತ್ತು ಬಾಲವಿಲ್ಲದ ಲೀಗಲ್ ನೋಟಿಸ್ ಆಧಾರದ ಮೇಲೆ ನೀವು ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಮಾಡಲಾಗಿದ್ದ ಹಾಲ್ ಬುಕಿಂಗ್ ಅನ್ನು ಹೇಗೆ ರದ್ದುಗೊಳಿಸಿದ್ದೀರಿ” ಎಂದು ಸೌಜನ್ಯ ಪರ ಹೋರಾಟಗಾರರ ವಕೀಲ ಬಾಲನ್ ಪ್ರಶ್ನಿಸಿದ್ದಾರೆ.
