ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಭ್ರಷ್ಟಾಚಾರದ ಗೂಡಾಗಿದೆ ಎಂಬ ಆರೋಪಗಳಿವೆ. ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿರ್ವಾಹಕರು, ಚಾಲಕರಿಗೆ ಒಂದು ದಿನ ರಜೆ ತೆಗೆದುಕೊಳ್ಳಬೇಕಾದರೂ, ಒಂದು ದಿನ ಡ್ಯೂಟಿ ಪಡೆಯಬೇಕಾದರೂ ಅವರ ಮೇಲಾಧಿಕಾರಿಗಳಿಗೆ ಹಣ ನೀಡಬೇಕು. ಹಣ ನೀಡದೆ ಇದ್ದರೇ, ಸಿಬ್ಬಂದಿಗೆ ಮಾನಸಿಕ ಕಿರುಕುಳ ನೀಡಲಾಗುತ್ತದೆ ಎಂದು ಸಿಬ್ಬಂದಿಗಳೇ ಹೇಳುತ್ತಾರೆ. ಕಳೆದ ಹಲವು ವರ್ಷಗಳಿಂದ ಇದರ ವಿರುದ್ಧವಾಗಿ ಬಿಎಂಟಿಸಿ ಸಿಬ್ಬಂದಿ ಪ್ರತಿಭಟಿಸುತ್ತಲೇ ಇದ್ದಾರೆ. ಆದರೂ, ಮೇಲಾಧಿಕಾರಿಗಳ ಧೋರಣೆಗೆ ಕಡಿವಾಣ ಬಿದ್ದಿಲ್ಲ.
ಇದೀಗ, ಬಿಎಂಟಿಸಿ ಅಧಿಕಾರಿಗಳ ಅಕೌಂಟ್‌ನಲ್ಲಿ ಮೊದಲ ಬಾರಿಗೆ ದೊಡ್ಡ ಮೊತ್ತದ ಹಣ ಪತ್ತೆಯಾಗಿದೆ. ಗೂಗಲ್ ಪೇ, ಫೋನ್ ಪೇ ಮೂಲಕ ಅಧಿಕಾರಿಗಳು ₹1.5 ಕೋಟಿಗೂ ಅಧಿಕ ಲಂಚ ಪಡೆದಿದ ವಿಚಾರ ಬೆಳಕಿಗೆ ಬಂದಿದ್ದು, ಬಿಎಂಟಿಸಿಯ ಏಳು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಡ್ಯೂಟಿ, ವೀಕ್ಲಿ ಆಫ್ ರಜೆ ಹಾಗೂ ಕಂಡಿಷನ್ ಇರುವ ಬಸ್ ಮತ್ತು ಹೆಚ್ಚು ಕಲೆಕ್ಷನ್ ಬರುವ ರೂಟ್ ಬೇಕು ಅಂದರೆ ಡಿಪೋ ಮ್ಯಾನೇಜರ್ ಮತ್ತು ಹಿರಿಯ ಅಧಿಕಾರಿಗಳಿಗೆ ನಿರ್ವಾಹಕ ಮತ್ತು ಚಾಲಕ ಹಣ ನೀಡಬೇಕು. ಹಣ ನೀಡಿದರೆ, ಎಲ್ಲ ವ್ಯವಸ್ಥೆಯನ್ನು ಮಾಡಿಕೊಡುತ್ತಾರೆ. ಇಲ್ಲವಾದರೇ, ಅವರಿಗೆ ಮಾನಸಿಕವಾಗಿ ಕಿರುಕುಳ ನೀಡಿ, ಹಿಂಸೆ ನೀಡುತ್ತಾರೆ. ಇದಕ್ಕೆ ಬೇಸತ್ತು ಹಲವು ಬಿಎಂಟಿಸಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿವೆ.
ಹಿರಿಯ ಅಧಿಕಾರಿಗಳು ಸಿಬ್ಬಂದಿಗೆ ಕಿರುಕುಳ ನೀಡಿ ಲಂಚ ಪಡೆಯುವತ್ತಿರುವ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಬಿಎಂಟಿಸಿ ಎಂಡಿ ಜಿ. ಸತ್ಯವತಿ ಅವರಿಗೆ ತನಿಖೆ ಮಾಡಲು ಆದೇಶ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಬಿಎಂಟಿಸಿಯ ಭದ್ರತಾ ಮತ್ತು ಜಾಗೃತದಳದ ಅಧಿಕಾರಿಗಳು, ಏಳು ಅಧಿಕಾರಿಗಳ ಎಲ್ಲ ಬ್ಯಾಂಕ್ ಡಿಟೇಲ್ಸ್ ತನಿಖೆ ನಡೆಸಿದ್ದಾರೆ. ಆಗ, ಪ್ರತಿಯೊಬ್ಬರ ಅಕೌಂಟ್‌ಗೆ ನಿರ್ವಾಹಕ ಮತ್ತು ಚಾಲಕರ ಗೂಗಲ್ ಪೇ ಮತ್ತು ಪೋನ್ ಪೇ ಮೂಲಕ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ಪತ್ತೆಯಾಗಿದೆ. ಹೀಗಾಗಿ, ಏಳು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ‘ಹಸಿರು ರಕ್ಷಕ’, ‘ಉದ್ಯಾನ ಮಿತ್ರ’ ಹಾಗೂ ‘ಕೆರೆ ಮಿತ್ರ’ ಎಂಬ ಮೂರು ಮೊಬೈಲ್ ಆಪ್ ಹಾಗೂ ವೆಬ್ ಲಿಂಕ್ ಸಿದ್ದಪಡಿಸಿದ ಬಿಬಿಎಂಪಿ
(ಡಿಪೋ ನಂ-27) ಸಿಬ್ಬಂದಿ ಮೇಲ್ವಿಚಾರಕಿ ಮಂಜುಳಾ.ಆರ್, (ಡಿಪೋ ನಂ-27) ಕಿರಿಯ ಸಹಾಯಕ ಪ್ರೀತಮ್, (ಡಿಪೋ ನಂ-27) ಕಿರಿಯ ಸಹಾಯಕ ಮನೋಜ್ ಕುಮಾರ್ ಎಲ್.ಎಸ್, (ಡಿಪೋ ನಂ-27) ಸಹಾಯಕ ಲೆಕ್ಕಿಗ ಧನಂಜಯ. ವಿ, (ಡಿಪೋ ನಂ-27) ಕಿರಿಯ ಸಹಾಯಕಿ ಸುಮ.ಎ, (ಡಿಪೋ ನಂ-27) ಕಿರಿಯ ಸಹಾಯಕಿ ಶಾಂತವ್ವ, (ಡಿಪೋ ನಂ-27) ಸಹಾಯಕ ಕುಶಲಕರ್ಮಿ ದೇವರಾಜ್.ಜಿ ಅಮಾನತುಗೊಂಡವರು.
ಅಮಾನತುಗೊಂಡ ಒಬ್ಬೊಬ್ಬ ಅಧಿಕಾರಿಗಳ ಬ್ಯಾಂಕ್ ಅಕೌಂಟ್ ಪರಿಶೀಲನೆ ನಡೆಸಿದಾಗ ಒಬ್ಬೊಬ್ಬರ ಅಕೌಂಟ್‌ನಲ್ಲಿ ಸುಮಾರು ₹20 ರಿಂದ ₹25 ಲಕ್ಷ ಪತ್ತೆಯಾಗಿದೆ. ಏಳು ಅಧಿಕಾರಿಗಳಿಂದ ₹1.5 ಕೋಟಿ ಅಕ್ರಮ ಹಣ ಪತ್ತೆಯಾಗಿದೆ.
ಬಿಎಂಟಿಸಿ ನಿರ್ವಾಹಕ ಮತ್ತು ಚಾಲಕರಿಗೆ ರಜೆ, ಡ್ಯೂಟಿ, ಉತ್ತಮ ಬಸ್ ನೀಡಲು ಅವರಿಂದ ಪ್ರತಿ ವಾರ ₹500 ಪ್ರತಿ ತಿಂಗಳಿಗೆ ₹2000 ಹಣ ವಸೂಲಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.