“ರಾಷ್ಟ್ರದ ಭವಿಷ್ಯ ಯುವ ಸಮೂಹದ ಕೈಯಲ್ಲಿದ್ದು, ಎಲ್ಲರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿ ಪ್ರತಿ ಚುನಾವಣೆಯಲ್ಲಿಯೂ ತಪ್ಪದೆ ಮತ ಚಲಾಯಿಸಬೇಕು” ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಯುವ ಮತದಾರರ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, “ಪ್ರಜಾಪ್ರಭುತ್ವವನ್ನು ಉಳಿಸಲು ನೀವೆಲ್ಲರೂ ನಿಮ್ಮ ಶಕ್ತಿಯನ್ನು ಉಪಯೋಗಿಸಬೇಕು. ಬದಲಾವಣೆ ತರುವ ಶಕ್ತಿ ಯುವ ಸಮೂಹದಲ್ಲಿ ಮಾತ್ರವಿದ್ದು, ಅದನ್ನು ಸರಿಯಾಗಿ ಸದ್ಬಳಕೆ ಮಾಡಬೇಕು” ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
“18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಲು ಅರ್ಜಿ ಸಲ್ಲಿಸಬಹುದು. ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಿದ್ದಾರೆ. ಜತೆಗೆ ವೋಟರ್ ಹೆಲ್ಪ್ ಲೈನ್ ಆಪ್ (Voter Help Line App) ಮೂಲಕ ಸ್ವಯಂಪ್ರೇರಿತವಾಗಿ ನೋಂದಣಿಯಾಗಬಹುದು” ಎಂದು ತಿಳಿಸಿದರು.
“ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವುದು ದೊಡ್ಡ ವಿಷಯವಲ್ಲ, ಸೇರ್ಪಡೆಯಾದ ಬಳಿಕ ಪ್ರತಿ ಚುನಾವಣೆಯಲ್ಲಿ ತಮ್ಮ ಅತ್ಯಮೂಲ್ಯವಾದ ಮತವನ್ನು ತಪ್ಪದೆ ಚಲಾಯಿಸುವುದು ದೊಡ್ಡ ವಿಷಯ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ | ಮತ್ತೊಂದು ಸುರಂಗ ಕೊರೆದು ಹೊರ ಬಂದ ಟಿಬಿಎಂ ತುಂಗಾ
1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ
ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 4,000 ವಿದ್ಯಾರ್ಥಿಗಳಿದ್ದು, 1,000ಕ್ಕೂ ಹೆಚ್ಚು ಮಕ್ಕಳನ್ನು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಲಾಗುತ್ತಿದೆ ಎಂದು ಶಿಕ್ಷಕರೊಬ್ಬರು ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾ ಸ್ವೀಪ್ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾದ ಕಾಂತರಾಜು, ಸ್ವೀಪ್ ನೋಡಲ್ ಅಧಿಕಾರಿಯಾದ ಪೂರ್ಣಿಮಾ, ಕಾಲೇಜು ಪ್ರಾಂಶುಪಾಲರಾದ ಡಾ. ವೈ ವೆಂಕಟೇಶಪ್ಪ, ಮತದಾರ ನೋಂದಣಿ ಅಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.