“ಅಕ್ಷರ ಇರಲಿಲ್ಲ, ಅದು ಸಿಕ್ಕಿದ ಕಾರಣದಿಂದ ಖಾಸಗಿ ಬದುಕು ಸುಧಾರಿಸಿದೆ. ಸುಧಾರಿಸಿದ ಎಲ್ಲರೂ ಮುಂದೆ ನೋಡಿಕೊಂಡು ಹೋದರೇ ವಿನಾ ಹಿಂತಿರುಗಿ ನೋಡಲೇ ಇಲ್ಲ. ಎಲ್ಲಿಂದ ಬಂದೆ, ಅಲ್ಲಿ ಉಳಿದವರು ಹೇಗಿದ್ದಾರೆ? ನಾನೊಬ್ಬನೇ ಬಂದೆನಲ್ಲ, ಅವರು ಯಾವಾಗ ಬರೋದು ಎಂದು ನೋಡದೇ ಬೇಗ ಬೇಗ ಹೆಜ್ಜೆ ಹಾಕಿದರು. ಜನ್ಮ ಜಾತಿಯ ಕಾರಣಕ್ಕೆ ಪ್ರಾಣಿಗಿಂತ ಕಡೆಯಾಗಿದ್ದವರು ತಮಗೆ ಅವಕಾಶ ಸಿಕ್ಕಿದ ನಂತರ ವರ್ಗಾಂತರ ಆದರು” ಎಂದು ಮಾಜಿ ಸಚಿವ ಮತ್ತು ವಿಧಾನಸಭೆಯ ಮಾಜಿ ಸ್ಪೀಕರ್ ಕೆ ಆರ್ ರಮೇಶ್‌ಕುಮಾರ್ ವಿಷಾದ ವ್ಯಕ್ತಪಡಿಸಿದರು.
ಸೋಮವಾರ ಸ್ಪೂರ್ತಿಧಾಮದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಹಬ್ಬದಲ್ಲಿ ಬೋಧಿವೃಕ್ಷ ಮತ್ತು ಬೋಧಿವರ್ಧಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ನಾನು ಜಾತಿಯಿಂದ ಬ್ರಾಹ್ಮಣ. ಅಸ್ಪೃಶ್ಯತೆ ಆಚರಿಸಿದ ಕುಟುಂಬದಲ್ಲಿ ಹುಟ್ಟಿದವನು. ನಾನೇನಾದರೂ ಅಲ್ಲಿ ಹುಟ್ಟಿದ್ದರೆ ಎಂದು ಊಹೆ ಮಾಡಿಕೊಂಡರೆ ನಡುಕ ಬರುತ್ತದೆ ಎಂದರು.
ಬಾಬಾ ಸಾಹೇಬರಿಗೆ ೩೦-೪೦ ವರ್ಷ ಆಚೆಗೆ ಯೋಚಿಸುವ ಶಕ್ತಿ ಇತ್ತು. ಅಂಥಾ ಅದ್ಬುತ ಮನುಷ್ಯ. ವೈಯಕ್ತಿಕ ಬದುಕಿನಲ್ಲಿ ಆದ ಪ್ರತಿ ನೋವು, ಅಪಮಾನಕ್ಕೆ ಸುಧಾರಿಸಿಕೊಂಡು ಉತ್ತರ ಹುಡುಕುತ್ತಿದ್ದರು. ಪ್ರತೀಕಾರ ತೋರುತ್ತಿರಲಿಲ್ಲ. ಪ್ರತಿಯೊಂದು ಚಳವಳಿಯೂ ಪ್ರತೀಕಾರವಾಗಿರದೇ ನೊಂದವರಿಗೆ ಔಷಧಿ ನೀಡುವಂತಿತ್ತು. ಈ ಕ್ಷಣಕ್ಕೆ ನನಗಿರುವ ದುಃಖ, ನಾನು ದಲಿತ ಸಮುದಾಯದ ಮುಂದೆ ಮಾತನಾಡುವುದು ವಿಶೇಷ ಅಲ್ಲ. ನಾವು ಅಲ್ಲಿ ಜನ್ಮ ತಾಳದೇ ಇದ್ದವರು, ನಮ್ಮ ಇತರ ಸಮುದಾಯಗಳಿಗೆ ವಿಚಾರ ತಿಳಿಸಬೇಕು. ನಾವು ಅಧ್ಯಯನ ಮಾಡಬೇಕು, ನಮಗೆ ಬದ್ಧತೆ ಇರಬೇಕು. ನಮ್ಮ ಹಳ್ಳಿಗಾಡಿನಲ್ಲಿ ಮಾಧ್ಯಮ ಮತ್ತು ಭೂಮಾಲೀಕರು, ಕಂಟ್ರಾಕ್ಟರುಗಳು ಒಂದು ಹವಾ ಹುಟ್ಟು ಹಾಕಿದ್ದಾರೆ. ಅಂಬೇಡ್ಕರ್ ಪರಿಶಿಷ್ಟ ಜಾತಿಗೆ ಸೇರಿದವರು. ಎಲ್ಲವನ್ನೂ ಅವರಿಗೇ ಸುರಿದುಬಿಟ್ಟಿದ್ದಾರೆ. ಕೆಲಸ, ಬಡ್ತಿ ಎಲ್ಲ ಅವರಿಗೇ ಸಿಗುತ್ತದೆ ಅಂತ. ಈ ಸಂವಿಧಾನ ದೇಶದಲ್ಲಿ ಇಲ್ಲದಿದ್ದರೆ, ಕೋರ್ಟು, ಪೊಲೀಸ್ ಠಾಣೆಗೆ ಹೋಗುವ ಅವಕಾಶ ಇಲ್ಲದಿದ್ದರೆ ಎಂದು ಯೋಚಿಸುವ ಶಕ್ತಿ ಇಲ್ಲ. ಅಂತಹ ಮಹಾನ್ ವ್ಯಕ್ತಿಯನ್ನು ಪೆಟ್ಟಿಗೆ ಅಂಗಡಿ ಮುಂದೆ ಕೇವಲ ಮಾಡಿಬಿಟ್ಟಿದ್ದಾರೆ ಎಂದರು.
ಭೂಮಿಯ ರಾಷ್ಟ್ರೀಕರಣ ಮಾಡಿ ಎಂದರು. ಪರಿಶಿಷ್ಟ ಜಾತಿಯವರಿಗೆ ಕೊಟ್ಟುಬಿಡಿ ಅಂದ್ರಾ? ಮುನುಷ್ಯ ಮಾನಸಿಕ ಸಮತೋಲನ ಕಳೆದುಕೊಳ್ಳುವುದು ಒಂದು ಮದ್ಯಪಾನದಿಂದ. ಅದಕ್ಕಿಂತ ಹೆಚ್ಚು ಭೂಮಿಯಿಂದ. ದಬ್ಬಾಳಿಕೆ ಅಸಮಾನತೆ ಮೂಲ ಭುಮಿ. ಭೂಮಿ ರಾಷ್ಟ್ರೀಕರಣ ಆಗಲಿ. ಒಬ್ಬನ ಹಂಗಿನಲ್ಲಿ ಇತರರು ಇರಬೇಕಾಗುತ್ತದೆ. ಒಬ್ಬ ಮಾನವತಾವಾದಿಯಾಗಿ ಮಾತನಾಡಲು ಸಂಸತ್ತು ವಿಕೇಂದ್ರೀಕರಣ ಆಗಬೇಕು. ದೇಶದ ಆಸ್ತಿಯೆಲ್ಲ ಕೆಲವರ ಕೈಯಲ್ಲಿ ಸಿಲುಕಿದೆ. ಅವರು ಇಡೀ ದೇಶದ ಹೆಣ್ಣುಮಕ್ಕಳ ಬಗ್ಗೆ ಮಾತನಾಡುತ್ತಾರೆ. ಇದು ಪುರುಷ ಪ್ರಧಾನ ಸಮಾಜ. ಆಸ್ತಿಯಲ್ಲಿ ಪಾಲು ಕೇಳಿ ಅಂದ್ರು. ಪರಿಶಿಷ್ಟ ಜಾತಿಯವರಿಗೆ ಮಾತ್ರ ಕೊಡಿ ಅಂದ್ರಾ? ಅದೇ ಹೆಣ್ಣುಮಕ್ಕಳು ಮೋರ್ಚ ಮಾಡಿಕೊಂಡು ಅಂಬೇಡ್ಕರ್ ವಿರುದ್ಧ ಮಾತಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದೂ ಕೋಡ್ ಬಿಲ್ ಬಹಳ ಸರಳ. ವಿವಾಹ ಆದ ಹಿಂದೂ ಪುರುಷ ತಾನು ವಿವಾಹವಾಗಿದ್ದೇನೆ ಎಂದು ಗೊತ್ತಿದ್ದೂ ಕಾನೂನುಬಾಹಿರವಾಗಿ ವಿವಾಹೇತರ ಸಂಬಂಧ ಇಟ್ಟುಕೊಂಡು, ಹುಟ್ಟಿದ ಮಗುವಿಗೆ ಈ ಸಮಾಜ ಯಾವ ಸ್ಥಾನ ಕೊಡುತ್ತದೆ? ನಾಳೆ ಆ ತಾಯಿ ಮಗುವನ್ನು ಶಾಲೆಗೆ ದಾಖಲಿಸಲು ಹೋದಾಗ ತಂದೆ ಯಾರು ಎಂದು ಕೇಳುತ್ತಾರೆ. ಆಗ ತಾಯಿ ತಲೆ ತಗ್ಗಿಸಬೇಕಾಗುತ್ತದೆ. ಆ ಹೆಣ್ಣುಮಕ್ಕಳಿಗೆ ಹೆಂಡತಿಯ ಸ್ಥಾನ ಕೊಡಬೇಕು. ಆತನ ಮಕ್ಕಳೇ ಆಗಬೇಕು ಅಂತ ಅಂಬೇಡ್ಕರ್ ಹೇಳಿದ್ರು. ಅದರ ವಿರುದ್ಧ ಯಾರೂ ಹೋಗಿಲ್ಲ. ಪರಿಶಿಷ್ಟರೂ ಹೋಗಲಿಲ್ಲ. ಅವರು ಹೇಳಿದ ಮೂಲಭೂತ ವಿಚಾರಗಳ ಬಗ್ಗೆ ಯೋಚಿಸದಿದ್ರೆ ಸಂವಿಧಾನದ ಮೂಲಕ್ಕೆ ಕೈ ಹಾಕುತ್ತಾರೆ ಎಂದು ಎಚ್ಚರಿಸಿದರು.
ಹಿರೋಷಿಮಾ, ನಾಗಸಾಕಿ ದುರಂತದಿಂದ ಮಾನವಹಕ್ಕುಗಳು ರೂಪಿತವಾದವು. ಫ್ರೆಂಚ್- ರಷ್ಯಾ ಕ್ರಾಂತಿಯಿಂದ ಸಮಾನತೆ, ಬ್ರಾತೃತ್ವ ಕಲ್ಪನೆ ಬಂತು. ಇಲ್ಲಿನ ಕೆಡುಕು ಹುಳುಕು ನೋಡ್ತಾರೆ. ಒಬ್ಬ ಮನುಷ್ಯನಾಗಿ ಹಿರೋಷಿಮಾ ನಾಗಸಾಕಿಯಲ್ಲಿ ಸತ್ತ ಜನರಿಗಾಗಿ ಅಳುತ್ತಾರೆ. ಇದೆಲ್ಲ ಇಟ್ಟುಕೊಂಡು ಬಾಬಾಸಾಹೇಬರು ಸಂವಿಧಾನ ಬರೆದರು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿದ್ವಾಂಸರು ಮತ್ತು ರಾಜಕೀಯ ವಿಜ್ಞಾನಿ ಪ್ರೊ ವೆಲೆರಿಯನ್ ರಾಡ್ರಿಗಸ್ ಅವರಿಗೆ ʼಬೋಧಿವೃಕ್ಷ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಒಂದು ಲಕ್ಷ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಬೆಟ್ಟಯ್ಯ ಕೋಟೆ, ನಫೀಸಾ ಪೆರುವಾಯಿ, ಡಾ ಶಿವಪ್ಪ ಅರಿವು, ಸಂಗಮ್ಮ ಸಾಣಕ, ಡಿಂಗ್ರಿ ನರಸಪ್ಪ ಅವರಿಗೆ ಬೋಧಿವರ್ಧನ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯು ಇಪ್ಪತ್ತೈದು ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.
ವೇದಿಕೆಯಲ್ಲಿ ಪತ್ರಕರ್ತ ಇಂದೂಧರ ಹೊನ್ನಾಪುರ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಉಪಸ್ಥಿತರಿದ್ದರು. ಸ್ಪೂರ್ತಿಧಾಮ ಅಧ್ಯಕ್ಷ ಎಸ್.ಮರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಬೆಳಿಗ್ಗೆ 9ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.