- ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಧರ್ಮಾವರಂ ಮಾರ್ಗಗಳಲ್ಲಿ ಚಲಿಸುತ್ತಿದ್ದ ರೈಲುಗಳಲ್ಲಿ ಕಳ್ಳತನ
- ಚಲಿಸುತ್ತಿರುವ ರೈಲುಗಳಲ್ಲಿ ಇಂತಹ ಘಟನೆಗಳು ಆಗಾಗ ವರದಿಯಾಗುತ್ತಿವೆ ಎಂದ ರೈಲ್ವೆ ಇಲಾಖೆ
ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಧರ್ಮಾವರಂ ಮಾರ್ಗಗಳಲ್ಲಿ ಚಲಿಸುತ್ತಿದ್ದ ರೈಲುನಲ್ಲಿರುವ ಕೊಳಾಯಿ ಮತ್ತು ಇತರ ಪರಿಕರಗಳನ್ನು ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಜೂನ್ 30ರಂದು ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಬೆಂಗಳೂರು ವಿಭಾಗದ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಬಂಧಿಸಿದೆ.
ರಂಗಸ್ವಾಮಿ(47) ಮತ್ತು ಗಾಂಧಿ(29) ಬಂಧಿತರು. ಇವರು ಮೂಲತಃ ಬೆಂಗಳೂರಿನ ಶ್ರೀರಾಮಪುರದವರು. ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಧರ್ಮಾವರಂ ಮಾರ್ಗಗಳಲ್ಲಿ ಚಲಿಸುತ್ತಿದ್ದ ರೈಲುಗಳಲ್ಲಿನ ಕೊಳಾಯಿಗಳು ಮತ್ತು ಇತರ ಪರಿಕರಗಳನ್ನು ಕದಿಯುತ್ತಿದ್ದರು.
ಬೆಂಗಳೂರು ವಿಭಾಗದ ಹಿರಿಯ ವಿಭಾಗೀಯ ಭದ್ರತಾ ಆಯುಕ್ತ ದೇವಾಂಶ್ ಶುಕ್ಲಾ ಅವರ ಮಾರ್ಗದರ್ಶನದಲ್ಲಿ ನಲ್ಲಿಗಳು ಮತ್ತು ಇತರ ಕ್ಯಾರೇಜ್ ಮತ್ತು ವ್ಯಾಗನ್ (ಸಿ & ಡಬ್ಲ್ಯೂ) ಪರಿಕರಗಳ ಕಳ್ಳತನದಲ್ಲಿ ತೊಡಗಿರುವ ದುಷ್ಕರ್ಮಿಗಳ ಚಟುವಟಿಕೆಗಳ ಮೇಲೆ ನಿಗಾ ಇಡಲು ವಿಶೇಷ ತಂಡವನ್ನು ರಚಿಸಲಾಗಿದೆ. ಚಲಿಸುತ್ತಿರುವ ರೈಲುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಆಗಾಗ ವರದಿಯಾಗುತ್ತಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಮಂಡ್ಯದ ಆರ್ಪಿಎಫ್ ನಿರೀಕ್ಷಕ ಎ.ಕೆ.ತಿವಾರಿ ನೇತೃತ್ವದ ತಂಡ ಕೆಎಸ್ಆರ್ ಬೆಂಗಳೂರು ಠಾಣೆಯಲ್ಲಿ ರಂಗಸ್ವಾಮಿಯನ್ನು ಬಂಧಿಸಿ ನಂತರ ಗಾಂಧಿಯನ್ನು ವಶಕ್ಕೆ ತೆಗೆದುಕೊಂಡಿದೆ. ದುಷ್ಕರ್ಮಿಗಳಿಂದ ₹12,960 ಮೌಲ್ಯದ ನಲ್ಲಿಗಳು ಮತ್ತು ಇತರೆ ಫಿಟ್ಟಿಂಗ್ಗಳನ್ನು ಜಪ್ತಿ ಮಾಡಲಾಗಿದೆ. ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಶಿಕ್ಷಕರ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ ; ದೂರು ದಾಖಲು
ದುಷ್ಕರ್ಮಿಗಳಿಂದ 56 ಜಾಯ್ಸನ್ ಟ್ಯಾಪ್ಸ್, 03 ಜಾಗ್ವಾರ್ ಟ್ಯಾಪ್ಸ್, 01 ಜಾಗ್ವಾರ್ ಪ್ರೆಸ್ ಟ್ಯಾಪ್ ಮತ್ತು 06 ಬ್ರಾಸ್ ಫೂಟ್ ವಾಲ್ವ್ ವಶಪಡಿಸಿಕೊಳ್ಳಲಾಗಿದೆ.
ಅಪರಾಧಿಗಳ ಪತ್ತೆಯಲ್ಲಿ ಕಾರ್ಯನಿರ್ವಹಿಸಿದ ಆರ್ಪಿಎಫ್ ತಂಡದ ಪ್ರಯತ್ನವನ್ನು ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಶ್ಲಾಘಿಸಿದ್ದಾರೆ.