ಪೌರ ಕಾರ್ಮಿಕ ದಿನಾಚರಣೆಯ ಜೊತೆಗೆ ತಾರತಮ್ಯ, ಅವಮಾನ, ಶೋಷಣೆಯೂ ಇದೆ…

Date:

Advertisements

ನಗರದ ಜೀವನಾಡಿಗಳಾಗಿರುವ ಪೌರ ಕಾರ್ಮಿಕರಿಗೂ ಒಂದು ದಿನ ಇದೇ ಎಂಬುದು ಹಲವು ಜನರಿಗೆ ತಿಳಿದೇ ಇಲ್ಲ. ನಗರದ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ, ಸಮರ್ಪಕವಾಗಿ ಪರಿಸರವನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರು ಇಂದು ತಮ್ಮ ದಿನಾಚರಣೆ ಆಚರಿಸಿಕೊಳ್ಳುತ್ತಿದ್ದಾರೆ. ಈ ದಿನಾಚರಣೆ ತೋರಿಕೆಗಾಗಿ ಅಲ್ಲ, ಸಮಾಜದಲ್ಲಿ ಪೌರ ಕಾರ್ಮಿಕರಿಗೂ ಒಂದು ನೆಲೆ-ಬೆಲೆ ಇದೆ ಎಂದು ಹೇಳಲಿಕ್ಕಾಗಿ. ಎಲ್ಲರಂತೆ ಅವರು ಕೂಡ ಮಾನವರು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲಿಕ್ಕಾಗಿ. ಅವರ ಕಸುಬಿನ ಮೂಲಕ ಅವರನ್ನು ಅಳೆಯದೆ ಅವರಿಗೂ ಘನತೆ, ಗೌರವ ನೀಡಬೇಕೆಂಬ ಉದ್ದೇಶದಿಂದ.

ಸೆಪ್ಟೆಂಬರ್ 23ರಂದು ಪೌರ ಕಾರ್ಮಿಕ ದಿನಾಚರಣೆ ಆಚರಿಸಲಾಗುತ್ತದೆ. ದಿನ ಬೆಳಗ್ಗೆ ಚಳಿ, ಗಾಳಿ, ಮಳೆಗೆ ಜಗ್ಗದೆ ತಮ್ಮ ಕಾಯಕದಲ್ಲಿ ಅವರು ತೊಡಗುತ್ತಾರೆ. ರಸ್ತೆಗಳನ್ನು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚಗೊಳಿಸುತ್ತಾರೆ. ಬೀದಿಯ ಕಸ ತೆಗೆದು ಅಂದಗೊಳಿಸುತ್ತಾರೆ. ಕೊರೋನಾ ಸಂಕಷ್ಟದ ಸಮಯದಲ್ಲೂ ಅವರ ಸೇವೆ ಅಪರಿಮಿತವಾಗಿತ್ತು. ಸ್ವಚ್ಚತೆ, ನೈರ್ಮಲ್ಯ ಕಾಪಾಡುತ್ತಾ, ಸೊಳ್ಳೆ, ವೈರಾಣುಗಳಿಂದ ಜನರ ಆರೋಗ್ಯವನ್ನೂ ಅವರು ರಕ್ಷಿಸುತ್ತಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಉತ್ಪತ್ತಿಯಾಗುವ 5,200 ಟನ್ ತ್ಯಾಜ್ಯ ಕಸವನ್ನು ಪೌರಕಾರ್ಮಿಕರು ಸಮರ್ಪಕವಾಗಿ ವಿಲೇವಾರಿ ಮಾಡುತ್ತಾರೆ. ಆದರೆ, ಅವರ ಸಾಮಾಜಿಕ ಪರಿಸ್ಥಿತಿ, ಬದುಕಿನ ಬವಣೆ ಮಾತ್ರ ಹೇಳತೀರದಾಗಿದೆ.

ನಗರಕ್ಕಾಗಿ ಮಾತ್ರವಲ್ಲ, ನಗರದ ಪ್ರತಿಯೊಬ್ಬನಿಗಾಗಿಯೂ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ಸಲ್ಲಬೇಕಾದ ಸವಲತ್ತುಗಳು, ಸೌಕರ್ಯಗಳು ಸಿಗದೆ, ಸಂಕಷ್ಟದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ತಮಗೆ ದಕ್ಕಬೇಕಾದ ಸವಲತ್ತುಗಳನ್ನು ಪಡೆಯಲು ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅದರ ಪ್ರತಿಫಲ ಎಂಬಂತೆ ಈಗ ಕೆಲವು ಕಾರ್ಮಿಕರ ಕೆಲಸವನ್ನು ಖಾಯಂ ಮಾಡಿಕೊಳ್ಳಲು ಸರ್ಕಾರ ಹಸಿರು ನಿಶಾನೆ ತೋರಿದೆ.

Advertisements

ಸಫಾಯಿ ಕರ್ಮಚಾರಿ ರಾಜ್ಯ ಸಂಚಾಲಕ ಓಬಳೇಶ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ಸಾರ್ವಜನಿಕರು ಇಂದು ಆರೋಗ್ಯವಾಗಿದ್ದಾರೆ ಎಂದರೆ ಅದಕ್ಕೆ ಕಾರಣ ಪೌರ ಕಾರ್ಮಿಕರು. ನೌಕರಸ್ಥರು, ಅಧಿಕಾರಿಗಳು ಪೌರ ಕಾರ್ಮಿಕರನ್ನು ಕೀಳು ಮನೋಭಾವದಿಂದ ನೋಡುತ್ತಾರೆ. ಪೌರ ಕಾರ್ಮಿಕರನ್ನು ಸಾರ್ವಜನಿಕರು ಅಸ್ಪೃಶ್ಯರು ಎಂದು ದೂರ ಇಡುತ್ತಾರೆ. ಬೆಳಗ್ಗೆ ಕೆಲಸಕ್ಕೆ ಬರುವ ಪೌರ ಕಾರ್ಮಿಕರಿಗೆ ನೀರು, ವಿಶ್ರಾಂತ ತಾಣಗಳ ಕೊರತೆಯಿದೆ” ಎಂದರು.

“ಪೌರ ಕಾರ್ಮಿಕರು ಯಾರ ಮನೆ ಬಳಿ ಹೋಗಿ ನೀರು ಕೇಳಿದರೆ, ಅವರಿಗೆ ಕುಡಿಯಲು ನೀರು ಕೊಡುವುದಿಲ್ಲ. ಅವರನ್ನು ದೂರ ನಿಲ್ಲು ಎನ್ನುತ್ತಾರೆ, ಮಾನವೀಯತೆಯೂ ಇಲ್ಲದೆ, ಅವರಿಗೆ ಯಾರು ಸಹ ಕುಡಿಯಲು ನೀರು ನೀಡುವುದಿಲ್ಲ. ಅವರನ್ನು ತುಂಬಾ ತುಚ್ಛವಾಗಿ ಕಾಣುತ್ತಾರೆ. ಪೌರ ಕಾರ್ಮಿಕರಿಗೆ ಘನತೆ ಗೌರವ ನೀಡಲು ಈ ದಿನಾಚರಣೆ ಆಚರಿಸುತ್ತೇವೆ. ಸಾರ್ವಜನಿರಕಲ್ಲಿ ಇರುವ ಗ್ರಹಿಕೆಯ ಬಗ್ಗೆ ತಿಳಿಸಬೇಕು. ಪೌರ ಕಾರ್ಮಿಕರ ಸಮಸ್ಯೆ ಸೇರಿದಂತೆ ನಾನಾ ಸಮಸ್ಯೆಗಳ ಬಗ್ಗೆ ವರದಿ ನೀಡಲು 1976ರಲ್ಲಿ ಸರ್ಕಾರ ಐಪಿಡಿ ಸಾಲಪ್ಪ ಸೇರಿದಂತೆ ಒಂದು ಸಮಿತಿಯನ್ನು ರಚನೆ ಮಾಡುತ್ತದೆ. 1976ರ ಸೆ.23 ರಂದು ಈ ಸಮಿತಿ ವರದಿ ನೀಡುತ್ತದೆ. ವರದಿ ನೀಡಿದ ದಿನವನ್ನೇ ಪೌರ ಕಾರ್ಮಿಕರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಐಪಿಡಿ ಸಾಲಪ್ಪ ವರದಿ ಪೌರ ಕಾರ್ಮಿಕರ ಬೈಬಲ್” ಎಂದು ತಿಳಿಸಿದರು.

“ಈ ವರದಿಯ ಮೇಲೆ ಮ್ಯಾನುವಲ್ ಸ್ಕ್ಯಾವೆಜಿಂಗ್ ಆಕ್ಟ್‌ ಸೇರಿದಂತೆ ಹಲವಾರು ಯೋಜನೆಗಳು ಜಾರಿಗೆ ಬಂದಿವೆ. ನಾವು ಸಾರ್ವಜನಿಕರಾಗಿ, ಅಧಿಕಾರಿಗಳಾಗಿ ಪೌರ ಕಾರ್ಮಿಕರನ್ನು ಅವರ ಜಾತಿ, ಕಸುಬು ನೋಡಿ ಅಳೆಯುವುದನ್ನು ಬಿಡಬೇಕು. ಈ ಕಸ ಎತ್ತುವ ಕೆಲಸವನ್ನು ಡಾಕ್ಟರ್, ಐಎಎಸ್‌ ಆಫೀಸರ್, ಎಂಜಿನಿಯರ್ ಗಳು ಮಾಡುವುದಿಲ್ಲ. ಅವರು ಅವರ ಬಡತನ ನೀಗಿಸಿಕೊಳ್ಳಲು, ಅವರ ಜೀವನವನ್ನು ಕಟ್ಟಿಕೊಳ್ಳಲು ಈ ಕೆಲಸ ಮಾಡುತ್ತಿದ್ದಾರೆ. ಅಂತಹವರನ್ನು ಯಾವುದೇ ಕಾರಣಕ್ಕೂ ಅವಮಾನಿಸಬಾರದು” ಎಂದರು.

“ಪೌರ ಕಾರ್ಮಿಕರನ್ನು ಕೂಡಾ ಮನುಷ್ಯರಾಗಿ ನೋಡಬೇಕು. ಅವರಿಗೂ ಘನತೆ, ಗೌರವ ನೀಡಬೇಕು. ಅಧಿಕಾರಿಗಳು ಪೌರ ಕಾರ್ಮಿಕರ ಮೇಲೆ ದರ್ಪ ದೌರ್ಜನ್ಯ ತೋರುವುದನ್ನು ನಿಲ್ಲಿಸಬೇಕು. ಈ ತಾರತಮ್ಯವನ್ನು ಹೋಗಲಾಡಿಸಲು ಈ ದಿನಾಚರಣೆ ಮಾಡಲಾಗಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ನಾವೂ ಮನುಷ್ಯರೇ, ನಮ್ಮ ಮೇಲೂ ಸ್ವಲ್ಪ ಕರುಣೆ ತೋರಿ: ಪೌರ ಕಾರ್ಮಿಕರು

ದಿನಾಚರಣೆಯ ದಿನದಂದು ಈ ದಿನ.ಕಾಮ್‌ ಜತೆಗೆ ಮಾತನಾಡಿದ ಪೌರ ಕಾರ್ಮಿಕರು

ಈ ದಿನ.ಕಾಮ್‌ ಜತೆಗೆ ಮಾತನಾಡಿದ ಪೌರ ಕಾರ್ಮಿಕ ಉಮಾ, ”ಕಳೆದ 20 ವರ್ಷದಿಂದ ನಾನು ಪೌರ ಕಾರ್ಮಿಕಳಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೆಲಸ ಮಾಡುವುದರಲ್ಲಿ ನನಗೆ ಯಾವುದೇ ಬೇಸರವಿಲ್ಲ, ಇಷ್ಟಪಟ್ಟು ಈ ಕಾರ್ಯ ನಿರ್ವಹಿಸುತ್ತಿದ್ದೇನೆ. ಸದ್ಯ ಈ ಹಿಂದೆ ನಮ್ಮ ಹಕ್ಕುಗಳಿಗಾಗಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಿದಾಗ ಸರ್ಕಾರ ನಮ್ಮ ಕೆಲಸ ಖಾಯಂ ಮಾಡುವುದಾಗಿ ಹೇಳಿದೆ. ಅದರಿಂದ ಕೊಂಚ ನೆಮ್ಮದಿ ಇದೆ. ತಿಂಗಳ ಸಂಬಳ ಸರಿಯಾಗಿ ಬರುತ್ತದೆ. ಯಾವುದೇ ಸಮಸ್ಯೆಯಿಲ್ಲ. ಆದರೆ, ನಾವು ಕೆಲಸ ಮಾಡುವ ಸ್ಥಳದಲ್ಲಿ ಯಾವುದೇ ಶೌಚಾಲಯವಿಲ್ಲ” ಎಂದು ಹೇಳಿದ್ದಾರೆ.

ಪೌರ ಕಾರ್ಮಿಕರು

ಮತ್ತೋರ್ವ ಪೌರ ಕಾರ್ಮಿಕ ವನಿತಾ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ಕಳೆದ 20 ವರ್ಷದಂದ ಇಷ್ಟಪಟ್ಟು ಈ ಕೆಲಸ ಮಾಡುತ್ತಿದ್ದೇನೆ. ಬಡತನ ಕಾರಣದಿಂದ ಅನಿವಾರ್ಯವಾಗಿ ಈ ಕೆಲಸ ಮಾಡಲು ಪ್ರಾರಂಭಿಸಿದೆ. ಆದರೆ, ಯಾವುದೇ ಬೇಸರವಿಲ್ಲ. ನಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕ್ಕೊಳ್ಳುವಂತೆ ನಗರವನ್ನು ಸ್ವಚ್ಛವಾಗಿಡಲು ಪ್ರಯತ್ನಿಸುತ್ತಿದ್ದೇವೆ. ಜನರು ನಮಗೆ ಸಹಕಾರ ಕೊಡಬೇಕು” ಎಂದು ಹೇಳಿದರು.

WhatsApp Image 2023 09 23 at 11.41.55 AM

“ಕಳೆದ 15 ವರ್ಷದಿಂದ ಪೌರಕಾರ್ಮಿಕಳಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದೇನೆ. ನಂತರ ಮನೆಯ ಬಡತನದಿಂದ ಈ ಕೆಲಸ ಮಾಡಲು ಪ್ರಾರಂಭ ಮಾಡಿದೆ. ಚಿಕ್ಕವಯಸ್ಸಿನಿಂದಲೂ ಈ ಕೆಲಸ ಮಾಡುತ್ತಿರುವುದರಿಂದ ರೂಢಿಯಾಯಿತು. ಈಗ ಯಾವುದೇ ಬೇಜಾರು ಇಲ್ಲದೆ, ಅತ್ಯಂತ ಸಂತೋಷದಿಂದ ಈ ಕೆಲಸ ಮಾಡುತ್ತಿದ್ದೇನೆ. ಬೆಳಗ್ಗೆ 6.30ಕ್ಕೆ ಕೆಲಸಕ್ಕೆ ಹಾಜರಾಗಿ ಮಧ್ಯಾಹ್ನ 2.30ರವರೆಗೆ ಕೆಲಸ ಮಾಡುತ್ತೇವೆ” ಎಂದು ಈ ದಿನ.ಕಾಮ್‌ ಪೌರ ಕಾರ್ಮಿಕ ಅಣ್ಣಮ್ಮ ಹೇಳಿದರು.

“ಕೆಲಸದ ಸಮಯದಲ್ಲಿ ನಾವು ರಸ್ತೆಯಲ್ಲೇ ದಿನ ಕಳೆಯಬೇಕಾಗುತ್ತದೆ. ನಮಗೆ ಕುಳಿತುಕೊಳ್ಳಲು ಎಲ್ಲಿಯೂ ಜಾಗವಿಲ್ಲ. ಸ್ವಲ್ಪ ಹೊತ್ತು ತಂಗಲು ಅಥವಾ ವಿಶ್ರಾಂತಿ ಪಡೆಯಲು ನಿಗದಿತ ಸ್ಥಳವಿಲ್ಲ. ರಸ್ತೆಯ ಬಳಿ ಇರುವ ಮರದ ನೆರಳಿನಲ್ಲಿ ಸ್ವಲ್ಪ ಸಮಯ ಕಳೆಯುತ್ತೇವೆ. ಇನ್ನು ಬಳಸಲು ಶೌಚಾಲಯವೇ ಇಲ್ಲ. ಕೆಲಸ ಸಮಯದಲ್ಲಿ ನಮಗೆ ಶೌಚ ಬಂದರೆ, ಇಲ್ಲಿಯೇ ಮಾಲ್ ಬಳಿ ಹೊರಗೆ ಹೋಗುವುದು ಅಥವಾ ಇನ್ನೊಬ್ಬರ ಮನೆಗೆ ಬೇಡಿ ಹೋಗುವಂತಹ ಪರಿಸ್ಥಿತಿ ಇದೆ” ಎಂದು ಹೇಳಿದರು.

ಪೌರ ಕಾರ್ಮಿಕ

“ಶೌಚ ಬರಬಹುದು ಎಂಬ ಭಯದಿಂದ ನಾವು ನೀರು ಕುಡಿಯುವುದೇ ಕಡಿಮೆ ಮಾಡಿದ್ದೇವೆ. ಇದರಿಂದ ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಸರ್ಕಾರ ಆದಷ್ಟು ಬೇಗ ಈ ಬಗ್ಗೆ ಗಮನಹರಿಸಿ, ನಮ್ಮ ಸಮಸ್ಯೆಗೆ ಪರಿಹಾರ ನೀಡಬೇಕು” ಎಂದು ತಿಳಿಸಿದರು.

ಪೌರ ಕಾರ್ಮಿಕ ಧನುಷ್ಕೋಡಿ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ಕಳೆದ 20 ವರ್ಷದಿಂದ ಪೊರಕೆ ಹಿಡಿದು ನಗರವನ್ನು ಸ್ವಚ್ಛ ಮಾಡುತ್ತಿದ್ದೇನೆ. ಆರೋಗ್ಯವಾಗಿಯೇ ಇದ್ದೇನೆ. ಯಾವುದೇ ಸಮಸ್ಯೆಯಿಲ್ಲ. ಇಷ್ಟಪಟ್ಟು ಈ ಕೆಲಸವನ್ನು ಮಾಡುತ್ತಿದ್ದೇನೆ” ಎಂದು ಹೇಳಿದರು.

WhatsApp Image 2023 09 23 at 11.41.00 AM

ಸದ್ಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅಂದಾಜು 17,000 ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ 14,980 ಪೌರ ಕಾರ್ಮಿಕರನ್ನು ಖಾಯಂ ಮಾಡಲು ಸರ್ಕಾರದಿಂದ ಅನುಮತಿ ದೊರೆತಿದೆ. ಇದರಲ್ಲಿ 3,673 ಪೌರ ಕಾರ್ಮಿಕರಿಗೆ ಖಾಯಂ ನೀಡಲು ಕೆಲವು ತಾಂತ್ರಿಕ ಸಮಸ್ಯೆ ಉಂಟಾಗಿವೆ ಎನ್ನಲಾಗಿದೆ. 11,307 ಪೌರ ಕಾರ್ಮಿಕರ ಖಾಯಮಾತಿಗೆ ಸರ್ಕಾರದಿಂದ ಈಗಾಗಲೇ ಅನುಮೋದನೆ ಸಿಕ್ಕಿದೆ. ಬಿಬಿಎಂಪಿ ನೇರ ವೇತನ ಪದ್ಧತಿ ಅಡಿಯಲ್ಲಿ ಸದ್ಯ 15,626 ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ” ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಈ ದಿನ.ಕಾಮ್‌ಗೆ ಮಾಹಿತಿ ನೀಡಿದರು.  

e4c01bd9b2970ccfecae47b47af65a36?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X