ಕ್ವೀನ್ಸ್ ರಸ್ತೆಯಲ್ಲಿರುವ 93 ವರ್ಷ ಹಳೆಯ ಶಾಲೆಯಾದ ಶ್ರೀಮತಿ ಕಮಲಾಬಾಯಿ ಶಿಕ್ಷಣ ಸಂಸ್ಥೆಯ (ಎಸ್‌ಕೆಇಐ) ಕಾಂಪೌಂಡ್ ಗೋಡೆಯನ್ನು ಕೆಡವಿದ್ದಕ್ಕಾಗಿ ಬೆಂಗಳೂರು ನಗರ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ ಗುಂಪೊಂದು ಜೆಸಿಬಿ ಸಮೇತವಾಗಿ ಬಲವಂತವಾಗಿ ಶಾಲೆಯ ಆವರಣಕ್ಕೆ ನುಗ್ಗಿ ಗೋಡೆಯನ್ನು ಕೆಡವಿದೆ. ಜುಲೈ 5ರಂದು ಸಂಜೆ 4:30ಕ್ಕೆ ಘಟನೆ ನಡೆದಿದ್ದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬಂಧಿತ ಮೂವರನ್ನು ಮರಿಯಾ ಎಲಿಜಬೆತ್, ಮೊಹಮ್ಮದ್ ಜಬಿ ಮತ್ತು ಜೆರಾರ್ಡ್ ಸ್ಟೀಫನ್ ಹ್ಯಾರಿ ಎಂದು ಗುರುತಿಸಲಾಗಿದೆ.
ಹ್ಯಾರಿ, ಎಲಿಜಬೆತ್ ಮತ್ತು ಜಬಿ ಜೆಸಿಬಿ ಸಮೇತವಾಗಿ ಶಾಲೆಯೊಳಗೆ ನುಗ್ಗಿದ್ದು ಭದ್ರತಾ ಸಿಬ್ಬಂದಿಗಳಾದ ಕಾರ್ತಿಕ್ ಮತ್ತು ಮುರಳಿ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಬೆಂಗಳೂರು ಗ್ರಾಮಾಂತರ | ನಾಲ್ವರು ಬಾಲಕಾರ್ಮಿಕರನ್ನು ರಕ್ಷಿಸಿದ ಅಧಿಕಾರಿಗಳು
ಎಲಿಜಬೆತ್ ಮತ್ತು ಶಾಲಾ ಆಡಳಿತದ ನಡುವಿನ 25 ವರ್ಷಗಳ ಆಸ್ತಿ ವಿವಾದದ ಕಾರಣ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
“ಶಾಲಾ ಕ್ಯಾಂಪಸ್‌ನ ಒಂದು ಭಾಗವು ತನಗೆ ಸೇರಿದೆ ಎಂದು ಎಲಿಜಬೆತ್ ಹೇಳಿಕೊಂಡಿದ್ದಾರೆ. ಆದರೆ ಶಾಲೆಯ ಆಡಳಿತ ಮಾತ್ರ ಮುನ್ಸಿಪಲ್ ಕಾರ್ಪೊರೇಷನ್‌ನಿಂದ 10 ಎಕರೆ ಆಸ್ತಿಯನ್ನು ಖರೀದಿಸಿದೆ ಎಂದು ಹೇಳಿಕೊಳ್ಳುತ್ತಿದೆ. ತನ್ನ ಮುತ್ತಜ್ಜ ರಕ್ಷಣೆಯ ಸೇವೆ ಸಲ್ಲಿಸಿದ ಕಾರಣ ಆಸ್ತಿಯನ್ನು ಸರ್ಕಾರವು ತನಗೆ ನೀಡಿದೆ ಎಂದು ಹೇಳಿಕೊಂಡಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
“ಪ್ರಸ್ತುತ, ಆಸ್ತಿ ವಿವಾದವು ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಾಂಗ ಪರಿಶೀಲನೆಯಲ್ಲಿದೆ” ಎಂದು ಪೊಲೀಸರು ತಿಳಿಸಿದ್ದಾರೆ.