- ಎಕ್ಸ್‌ಪ್ರೆಸ್ ವೇ ಮುಖ್ಯ ಭಾಗದಿಂದ ನಿಷೇಧಿಸಲಾದ ವಾಹನಗಳು ಸೇವಾ ರಸ್ತೆಗಳನ್ನು ಬಳಸಬಹುದು
- ಈ ಪ್ರಸ್ತಾವನೆಗೆ ಅನುಮೋದನೆ ದೊರೆತಾಗ ಸರ್ಕಾರದ ಗೆಜೆಟ್ ನೋಟಿಫಿಕೇಶನ್ ಪಟ್ಟಿಯಲ್ಲಿ ಪ್ರಕಟ
ಬೆಂಗಳೂರಿನಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್ ವೇ ಮೂಲಕ 90 ನಿಮಿಷಗಳಲ್ಲಿ ಎರಡು ನಗರಗಳಲ್ಲಿ ಯಾವುದಾದರೂ ನಗರವನ್ನು ತಲುಪುವ ಭರವಸೆಯನ್ನು ಈ ಎಕ್ಸ್‌ಪ್ರೆಸ್ ವೇ ವಾಹನ ಸವಾರರಿಗೆ ನೀಡಿದೆ. ಆದರೆ, ಈ ಮಾರ್ಗದಲ್ಲಿ ದ್ವಿಚಕ್ರ ವಾಹನಗಳ ಸಂಚಾರ ನಿಷೇಧಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಸಜ್ಜಾಗಿದೆ.
ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ಕೃಷಿ ವಾಹನಗಳು ಹೆದ್ದಾರಿಯ ಪ್ರವೇಶ ನಿಯಂತ್ರಿತ ಭಾಗದಲ್ಲಿ ಸಂಚರಿಸಲು ಅನುಮತಿಸುವುದಿಲ್ಲ. ಸುರಕ್ಷತಾ ಕಾರಣಗಳಿಗಾಗಿ ಈ ರೀತಿಯ ವಾಹನಗಳನ್ನು ನಿಷೇಧಿಸುವ ಪ್ರಸ್ತಾವನೆಯು ಪರಿಗಣನೆಯಲ್ಲಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.
“ಸರ್ಕಾರದಿಂದ ಈ ಪ್ರಸ್ತಾವನೆಗೆ ಅನುಮೋದನೆ ದೊರೆತಾಗ ಸರ್ಕಾರದ ಗೆಜೆಟ್ ನೋಟಿಫಿಕೇಶನ್ ಪಟ್ಟಿಯಲ್ಲಿ ಪ್ರಕಟವಾಗುತ್ತದೆ. ಸರ್ಕಾರದಿಂದ ಅನುಮೋದನೆ ದೊರೆತ ಬಗ್ಗೆ ಖಚಿತವಾಗುತ್ತದೆ. ಎಕ್ಸ್‌ಪ್ರೆಸ್‌ವೇಯ ಮುಖ್ಯ ಭಾಗದಿಂದ ನಿಷೇಧಿಸಲಾದ ವಾಹನಗಳು ಸೇವಾ ರಸ್ತೆಗಳನ್ನು ಬಳಸಬಹುದು” ಎಂದು ಎನ್‌ಎಚ್‌ಎಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಈಗ ದ್ವಿಚಕ್ರ ವಾಹನಗಳು, ಆಟೋರಿಕ್ಷಾಗಳು ಮತ್ತು ಸೈಕಲ್‌ಗಳನ್ನು ಅನುಮತಿಸಲಾಗುತ್ತಿದೆ. ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದ ನಂತರ ಮಾತ್ರ ಅವುಗಳನ್ನು ನಿಲ್ಲಿಸಲಾಗುವುದು” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಧ್ಯಂತರ ವರದಿಗೆ ವಿರುದ್ಧವಾಗಿ ಮೀಸಲಾತಿ ಪರಿಷ್ಕರಣೆ ಮೂಗಿಗೆ ತುಪ್ಪ ಸವರುವ ಕೆಲಸ: ಮುಖ್ಯಮಂತ್ರಿ ಚಂದ್ರು
ಮೈಸೂರು ಸಂಸದ ಪ್ರತಾಪ್ ಸಿಂಹ ಮಾತನಾಡಿ, “ಟ್ರಕ್‌ಗಳು ಎಡ ಪಥದಲ್ಲಿ ಚಲಿಸಬೇಕು. ಮಧ್ಯದ ಲೇನ್‌ಗಳನ್ನು ಕಾರುಗಳು ಬಳಸಬೇಕು. ಬಲಭಾಗದ ಲೇನ್ ಅನ್ನು ಓವರ್‌ಟೇಕ್ ಮಾಡಲು ಮುಕ್ತವಾಗಿ ಬಿಡಬೇಕು. ಬದಲಿಗೆ, ಟ್ರಕ್‌ಗಳು ಬಲಭಾಗದಲ್ಲಿ ಚಲಿಸುತ್ತಿವೆ. ಆದ್ದರಿಂದ, ಕಾರುಗಳು ಹಿಂದಿಕ್ಕಲು ಕಷ್ಟವಾಗುತ್ತಿದೆ. ಎಕ್ಸ್‌ಪ್ರೆಸ್ ವೇಯಲ್ಲಿ ರಸ್ತೆ ಶಿಸ್ತು ಮತ್ತು ನಾಗರಿಕ ಪ್ರಜ್ಞೆಯ ಕೊರತೆಯಿದೆ” ಎಂದರು.
“ಸುಮಾರು ಮೂರು ದಿನಗಳ ಹಿಂದೆ ಸಂಭವಿಸಿದ ಭೀಕರ ರಸ್ತೆ ಅವಘಡದಲ್ಲಿ ಒಂದೇ ಕುಟುಂಬದ 5 ಮಂದಿ ಸಾವಿಗೀಡಾಗಿದ್ದಾರೆ. ರಸ್ತೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ” ಎಂದು ಅವರು ಹೇಳಿದರು.