- ಬಿರುಗಾಳಿಯು ಗಂಟೆಗೆ 45-65 ಕಿ.ಮೀ ವರೆಗೂ ಬೀಸುವ ಸಾಧ್ಯತೆ
- ಕರಾವಳಿಯ ಶಾಲಾ-ಕಾಲೇಜುಗಳಿಗೆ ಜು.6ರಂದು ರಜೆ ಘೋಷಣೆ
ಜೂನ್‌ನಲ್ಲಿ ಕೈಕೊಟ್ಟಿದ್ದ ಮುಂಗಾರು ಮಳೆ ಇದೀಗ ಜುಲೈನಲ್ಲಿ ಚುರುಕು ಪಡೆದುಕೊಂಡಿದೆ. ರಾಜ್ಯದ ಕರಾವಳಿ ಭಾಗಗಳಲ್ಲಿ ಗುಡುಗು ಮಿಂಚು ಸಹಿತ ಜೋರು ಮಳೆಯಾಗುತ್ತಿದೆ. ಹಲವೆಡೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.
ಕರಾವಳಿ ಭಾಗಗಳಲ್ಲಿ ಜೋರು ಮಳೆಯಾಗುತ್ತಿದ್ದು, ಜುಲೈ 8ರವರೆಗೆ ಮುಂದುವರೆಯಲಿದೆ. ಬಿರುಗಾಳಿಯು ಗಂಟೆಗೆ 45-65 ಕಿ.ಮೀ ವರೆಗೂ ಬೀಸುವ ಸಾಧ್ಯತೆ ಇದೆ. ಉತ್ತರ ಕನ್ನಡದಲ್ಲಿ ಅತ್ಯಂತ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದ್ದು, ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಘೋಷಿಸಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ಚಿಕ್ಕಮಗಳೂರು, ದಾವಣಗೆರೆ, ಕೊಡಗು, ಶಿವಮೊಗ್ಗ, ವಿಜಯನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ಬೆಳಗಾವಿ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದ್ದು, ವಿಜಯನಗರ, ದಾವಣಗೆರೆ, ರಾಯಚೂರು, ಗದಗ ಹಾಗೂ ಧಾರವಾಡ ಒಟ್ಟು 5 ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.
ಮುಂದುವರೆದ ಶಾಲಾ ರಜೆ
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ, ಜು.6ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದ್ದಾರೆ.
ಎಲ್ಲೆಲ್ಲಿ ಮಳೆಯಾಗಿದೆ?
ಕಾರವಾರ, ಹೊನ್ನಾವರ, ಶಿರಾಲಿ, ಮುಲ್ಕಿ, ಬೆಳ್ತಂಗಡಿ, ಕಾರ್ಕಳ, ಕೊಲ್ಲೂರು, ಗೇರುಸೊಪ್ಪ, ಕುಮಟಾ, ಮಂಗಳೂರು, ಮಾಣಿ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಅತ್ಯಧಿಕ ಮಳೆಯಾಗಿದೆ.
ಧರ್ಮಸ್ಥಳ, ಪುತ್ತೂರು, ಗೋಕರ್ಣ, ನಿರ್ಣಾ, ಉಪ್ಪಿನಂಗಡಿ, ಬೇಲಿಕೇರಿ, ಕದ್ರಾ, ಕೊಟ್ಟಿಗೆಹಾರ, ಅಡಕಿ, ಭಾಗಮಂಡಲ, ಶೃಂಗೇರಿ ಸುಳ್ಯ, ಬೀದರ್, ದೇವದುರ್ಗ, ವಿರಾಜಪೇಟೆ, ಮಸ್ಕಿ, ರಾಯಚೂರು, ಹೊಸಕೋಟೆ, ಪಾವಗಡ, ಹಾರಂಗಿ, ಬಂಡೀಪುರ, ಶಿವಮೊಗ್ಗ, ಚಿಕ್ಕಮಗಳೂರು, ಭದ್ರಾವತಿ, ಹರಪನಹಳ್ಳಿಯಲ್ಲಿ ಮಳೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಬಿಎಂಟಿಸಿ | ಹೆಬ್ಬಾಳ-ಶಿವಾಜಿನಗರ ಬಸ್‌ಗಳ ಸೇವೆ ಕೊಡಿಗೇಹಳ್ಳಿ ಗೇಟ್‌ವರೆಗೆ ವಿಸ್ತರಣೆ
ಬೆಂಗಳೂರಿಗೆ ಸಾಧಾರಣ ಮಳೆ
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಚ್ಎಎಲ್ನಲ್ಲಿ 27.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 27.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, 29.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಕೊಡಗು | ಧರೆಗುರುಳಿದ ಮರಗಳು
ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಸುಂಟಿಕೊಪ್ಪದ ಕೆದಕಲ್ ಗ್ರಾಮದ ಭದ್ರಕಾಳಿ ದೇಗುದ ಸಮೀಪ ಮಡಿಕೇರಿ-ಮೈಸೂರು ರಸ್ತೆಗೆ ಮರವೊಂದು ಉರುಳಿ ಬಿದ್ದಿದೆ. ಹೀಗಾಗಿ, ರಸ್ತೆಯ ಒಂದು ಕಡೆ ಮಾತ್ರ ವಾಹನಗಳು ಸಂಚಾರ ನಡೆಸುತ್ತಿವೆ.
ಬಿಟ್ಟುಬಿಡದೆ ಮಳೆ ಸುರಿಯುತ್ತಿರುವ ಕಾರಣ ಬಿದ್ದಿರುವ ಮರವನ್ನು ತೆರವು ಮಾಡಲು ಅಡ್ಡಿ ಉಂಟಾಗಿದೆ. ಸುಂಟಿಕೊಪ್ಪದ ಕಂಬಿಕಾಣೆಯ ಭೂದಾನ ಪೈಸಾರಿಯಲ್ಲಿ ಮನೆಗಳ ಮೇಲೆ ಮರ ಬಿದ್ದಿದ್ದು, ಕಂಬಗಳು ಧರೆಗುರುಳಿವೆ.