- ಮತದಾನ ಮಾಡಿ ಬಂದವರಿಗೆ ಉಚಿತವಾಗಿ ಬೆಣ್ಣೆ ದೋಸೆ, ಮೈಸೂರು ಪಾಕ್ ಮತ್ತು ತಂಪು ಪಾನೀಯ
- ಬಿಬಿಎಂಪಿ ನಿರ್ಬಂಧ ಹೇರುವುದು ಸರಿಯಲ್ಲ ಎಂದು ಹೈಕೋರ್ಟ್ ಮೊರೆ ಹೋಗಿದ್ದ ಹೋಟೆಲ್ ಮಾಲೀಕರು
ಬುಧವಾರ (ಮೇ 10) ರಾಜ್ಯದಲ್ಲಿ ವಿಧಾನಸಭಾ ಚುನಾವನೆಯ ಮತದಾನ ನಡೆಯುತ್ತಿದೆ. ಮತದಾನ ಮಾಡುವಂತೆ ಮತದಾರರನ್ನು ಉತ್ತೇಜಿಸಲು ಬೆಂಗಳೂರಿನ ಎರಡು ಪ್ರತಿಷ್ಠಿತ ಹೋಟೆಲ್‌ಗಳು ಮತದಾನ ಮಾಡಿದವರಿಗೆ ಉಚಿತ ತಿಂಡಿ ನೀಡುವುದಾಗಿ ಹೇಳಿದ್ದವು. ಇದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಬಂಧ ವಿಧಿಸಿತ್ತು. ಇದೀಗ ಈ ನಿರ್ಬಂಧಕ್ಕೆ ಹೈಕೋರ್ಟ್ ತಡೆ ನೀಡಿದೆ.
ಮತದಾನ ಮಾಡಿ ಬಂದವರಿಗೆ ಉಚಿತವಾಗಿ ಬೆಣ್ಣೆ ದೋಸೆ, ಮೈಸೂರು ಪಾಕ್ ಮತ್ತು ತಂಪು ಪಾನೀಯಗಳನ್ನು ನೀಡುವುದಾಗಿ ನಗರದ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಮತ್ತು ಚಾಲುಕ್ಯ ಸಾಮ್ರಾಟ್ ಹೋಟೆಲ್‌ಗಳು ಪ್ರಕಟಣೆ ನೀಡಿದ್ದವು.
ಉಚಿತ ಆಹಾರ ನೀಡುವುದಕ್ಕೆ ನಿರ್ಬಂಧ ಹೇರಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, “ಹೋಟೆಲ್‌ಗಳು ಈ ರೀತಿ ಮತದಾನ ಮಾಡಿದವರಿಗೆ ಉಚಿತ ತಿಂಡಿ ನೀಡುವುದು ಸೇರಿದಂತೆ ಇಂತಹ ಪ್ರಚಾರಗಳಿಗೆ ನಾವು ಅನುಮತಿ ನೀಡುವುದಿಲ್ಲ. ಇಂತಹ ಉಚಿತ ನೀಡುವ ಭರವಸೆಗಳನ್ನು ಹೋಟೆಲ್ ಮಾಲೀಕರು ನೀಡಬಾರದು. ಒಂದು ವೇಳೆ ಈ ರೀತಿಯ ಭಿತ್ತಿಪತ್ರಗಳು ಕಂಡುಬಂದರೆ ಅಥವಾ ಈ ರೀತಿಯ ಪ್ರಕಟಣೆಗಳಿಗೆ ಸಂಬಂಧಿಸಿದ ಹೋಟೆಲ್ ಮಾಲೀಕರನ್ನೇ ನೇರೆ ಹೊಣೆಗಾರರನ್ನಾಗಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದರು.
ಬಿಬಿಎಂಪಿಯ ಈ ನಿರ್ಧಾರಕ್ಕೆ ಹೋಟೆಲ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಬಿಎಂಪಿ ಆದೇಶದ ವಿರುದ್ಧ ಹೋಟೆಲ್ ಮಾಲೀಕರ ಸಂಘ ಮಂಗಳವಾರ ಹೈಕೋರ್ಟ್ ಮೊರೆ ಹೋಗಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೋಟೆಲ್‌ಗಳಲ್ಲಿ ಉಚಿತ ತಿಂಡಿ ವಿತರಣೆ ; ತಡೆಹಿಡಿದ ಬಿಬಿಎಂಪಿ
ವಿಚಾರಣೆ ವೇಳೆ, “ಈ ಉಚಿತ ತಿಂಡಿ ನೀಡುವುದು ಮತದಾನ ಉತ್ತೇಜಿಸುವುದಕ್ಕಾಗಿ ಇದು ರಾಜಕೀಯ ಹೊರತಾದ ಕ್ರಮವಾಗಿದೆ. 2018ರಲ್ಲಿ ಬೆಂಗಳೂರಿನಲ್ಲಿ ಶೇ. 54.7ರಷ್ಟು ಮತದಾನವಾಗಿತ್ತು. 2018 ಮತ್ತು 2019 ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ಸಮಯದಲ್ಲಿಯೂ ಮತದಾನದ ಉತ್ತೇಜನಕ್ಕಾಗಿ ಈ ಉಚಿತಗಳನ್ನು ನೀಡಿದ್ದೇವೆ. 2018ರಲ್ಲಿ ಸುಮಾರು 3,900 ಮತದಾರರ ಗ್ರಾಹಕರು ನಮ್ಮ ಕೊಡುಗೆಯನ್ನು ಪಡೆದುಕೊಂಡಿದ್ದಾರೆ. 2019 ರಲ್ಲಿ ಈ ಸಂಖ್ಯೆ 5,100 ಕ್ಕೆ ಏರಿದೆ. ಹಾಗಾಗಿ, ಈ ಬಾರಿಯೂ ಉಚಿತ ನೀಡಲು ನಿರ್ಧರಿಸಿದ್ದೇವೆ” ಎಂದು ಹೋಟೆಲ್ ಮಾಲೀಕ ಕೃಷ್ಣರಾಜ್ ಹೇಳಿದ್ದರು.
ಹೋಟೆಲ್ ಮಾಲೀಕರ ಸಂಘದ ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ಬಿಬಿಎಂಪಿ ನಿರ್ಬಂಧಕ್ಕೆ ತಡೆಯೊಡ್ಡಿದೆ.