ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಅಧಿಕವಾಗುತ್ತಿದ್ದು, ಜನರು ನೀರಿಗೆ ಪರದಾಡುವಂತಾಗಿದೆ. ಹಣವಿದ್ದರೂ ಟ್ಯಾಂಕರ್ ನೀರನ್ನು ತರಿಸುತ್ತಿದ್ದಂತೆ ಬಡವರು ಪಾಲಿಕೆ ಕಳುಹಿಸುವ ನೀರಿಗೆ ಕಾಯುತ್ತಿದ್ದಾರೆ. ಈ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ (ಮಾರ್ಚ್ 18) ಉನ್ನತ ಮಟ್ಟದ ಸಭೆ ನಡೆಯಲಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ಕಾಡುತ್ತಿರುವ ನೀರಿನ ಸಮಸ್ಯೆಯು ಮನೆಗಳು ಮಾತ್ರವಲ್ಲದೆ ಕಚೇರಿಗಳಿಗೂ ತಲುಪಿದೆ. ಸರಿಯಾದ ಯೋಜನೆಯನ್ನು ರೂಪಿಸದೆಯೇ ನಗರದ ಅಭಿವೃದ್ಧಿಯನ್ನು ಶೀಘ್ರವಾಗಿ ಮಾಡಿರುವುದೇ ಈ ನೀರಿನ ಸಮಸ್ಯೆಗೆ ಕಾರಣ ಎಂದು ಸ್ಥಳೀಯರು ಹೇಳುತ್ತಾರೆ. ಸಂಸ್ಥೆಗಳು ಈಗ ವರ್ಕ್ ಫ್ರಮ್ ಹೋಮ್ ನೀಡಲು ಆರಂಭಿಸಿದೆ.
ಇದನ್ನು ಓದಿದ್ದೀರಾ? WPL 2024 | ಆರ್‌ಸಿಬಿ ಕಪ್ ಗೆಲ್ಲುತ್ತಿದ್ದಂತೆಯೇ ಪ್ರತ್ಯಕ್ಷವಾದ ವಿಜಯ್ ಮಲ್ಯ
“ಕಚೇರಿಯಲ್ಲಿ ನೀರಿನ ಸಮಸ್ಯೆ ಇರುವ ಕಾರಣದಿಂದಾಗಿ ಕಂಪನಿಗಳು ಈಗ ನೀರಿನ ಸಮಸ್ಯೆ ಇರುವ ಕಾರಣ ವರ್ಕ್ ಫ್ರಮ್ ಹೋಮ್ ನೀಡಲು ಆರಂಭಿಸಿದೆ. ಇದು ನಮ್ಮ ಕಾರ್ಯ ಚಟುವಟಿಕೆಯ ಮೇಲೆ ಪ್ರಭಾವ ಬೀರಿದೆ. ಆರಂಭದಲ್ಲಿ ಟ್ಯಾಂಕರ್‌ಗಳು 2500 ರೂಪಾಯಿಗೆ ನೀರು ಸರಬರಾಜು ಮಾಡುತ್ತಿತ್ತು. ಆದರೆ ಈಗ ಐದು ಸಾವಿರ ರೂಪಾಯಿ ಆಗಿದೆ” ಎಂದು ಕೂಕೂ ಎಫ್‌ಎಂ ಸಿಇಒ, ಸಹ ಸಂಸ್ಥಾಪಕ ಲಾಕ್ ಚಂದ್ ಬಿಸು ಹೇಳಿದರು.
ಇನ್ನೊಂದೆಡೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದು, ಶಾಲೆಗಳಲ್ಲೂ ನೀರಿನ ಸಮಸ್ಯೆ ಉಂಟಾಗಿದೆ. ಪರೀಕ್ಷೆ ಮುಗಿಯುವವರೆಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುವಂತೆ ಬೆಂಗಳೂರು ಜಲಮಂಡಳಿಗೆ ಖಾಸಗಿ ಶಾಲೆಗಳ ಒಕ್ಕೂಟವು ಮನವಿ ಮಾಡಿದೆ. ಈ ಕುರಿತಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಪತ್ರ ಬರೆದಿದೆ.
ಈ ನಡುವೆ ನಗರದಲ್ಲಿ ನೀರಿನ ಕೊರತೆಗೆ ಪರಿಹಾರ ಕಂಡುಕೊಳ್ಳಲು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯಕ್ತ ತುಷಾರ್ ಗಿರಿನಾಥ್, ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮಪ್ರಸಾದ್ ಮನೋಹರ್ ಅವರು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಿದ್ದಾರೆ.