ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಹಲವೆಡೆ ದಿಢೀರ್ ತುಂತುರು ಮಳೆಯಾಗಿದ್ದು, ಬೇಸಿಗೆಯ ಬಿರು ಬಿಸಿಲಿನಿಂದ ಬಳಲಿದ್ದ ನೆಲ ತಂಪಾಗಿದೆ.
ಬೇಸಿಗೆ ಕಾಲ ಆರಂಭದ ಬಳಿಕ ಇದು ಮೊದಲ ಮಳೆ ಎಂಬುದು ವಿಶೇಷ. ಇತ್ತ ಮಳೆಯಿಂದ ಬೇಸಿಗೆ ಬಿಸಿಲಿನಿಂದ ಕಂಗೆಟ್ಟಿದ್ದ ಜನರು ಒಂದಿಷ್ಟು ತಂಪಾದ ವಾತಾವರಣದ ಅನುಭವ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೂ ತಾಪಮಾನ ಹೆಚ್ಚಿತ್ತು. ಮಧ್ಯಾಹ್ನದ ವೇಳೆಗೆ ತಾಪಮಾನ ಮತ್ತಷ್ಟು ಏರಿಕೆಯಾಗಿತ್ತು. ಆದರೆ, ಸಂಜೆ 6 ಗಂಟೆಗೆ ಏಕಾಏಕಿ ಹಲವು ಪ್ರದೇಶಗಳಲ್ಲಿ ದಿಢೀರ್ ಮಳೆ ಹನಿ ಸುರಿಯಿತು. ಇನ್ನು ಒಂದೆರಡು ತಿಂಗಳಿಂದ ಕಾಣೆಯಾಗಿದ್ದ ಮಳೆಯನ್ನು ಒಮ್ಮೆ ಕಂಡು ಬೆಂಗಳೂರಿನ ಜನ ಅಚ್ಚರಿಗೊಳಗಾದರು.
ಕರ್ನಾಟಕದಲ್ಲಿ ತಾಪಮಾನ ಏರಿಕೆ ನಡುವೆಯೇ ಹವಾಮಾನ ಇಲಾಖೆಯ ಮಳೆಯ ಮುನ್ಸೂಚನೆ ನೀಡಿತ್ತು. ರಾಜ್ಯದ ಹಲವು ಭಾಗಗಳಲ್ಲಿ ಮಾರ್ಚ್ 14ರವರೆಗೆ ಸುಡುವ ಬೇಸಿಗೆಯಲ್ಲಿ ಮುಂಗಾರು ಪೂರ್ವ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದೀಗ ಹವಾಮಾನ ಇಲಾಖೆ ನೀಡಿದ್ದ ಮುನ್ಸೂನೆ ನಿಜವಾಗಿದ್ದು, ಬೆಂಗಳೂರಿನಲ್ಲಿ ವಿವಿಧ ಭಾಗಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಸುರಿದಿದೆ. ಇದರಿಂದ ಜನರು ಸಂತಷಗೊಂಡಿದ್ದಾರೆ.
ಎಲ್ಲೆಲ್ಲಿ ಮಳೆ?
ಪ್ರಮುಖವಾಗಿ ಬೆಂಗಳೂರು ಕೇಂದ್ರ ಭಾಗವಾದ ಮೆಜೆಸ್ಟಿಕ್, ಗಾಂಧಿನಗರ, ಶಿವಾಜಿನಗರ, ಎಂಜಿ ರಸ್ತೆ, ಕಬ್ಬನ್ ಪಾರ್ಕ್, ಇಂದಿರಾನಗರ, ಹಲಸೂರು, ಬನಶಂಕರಿ, ಬಸವನಗುಡಿ, ಚಾಮರಾಜಪೇಟೆ, ಯಶವಂತಪುರ, ರಾಜಾಜಿ ನಗರ, ವಿಜಯ ನಗರ. ಹೊರ ವಲಯಗಳಾದ ಕೆಆರ್ ಪುರಂ, ಕನಕಪುರ ರಸ್ತೆ, ಮೈಸೂರು ರಸ್ತೆ ಸುತ್ತಮುತ್ತ ಬಡಾವಣೆಗಳಲ್ಲಿ ತುಸು ಮಳೆಯಾಗಿದೆ.