ವಾಕಿಂಗ್ ಮಾಡುತ್ತಿದ್ದ ವೃದ್ದ ಮಹಿಳೆಯ ಮೇಲೆ ಏಳೆಂಟು ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ್ದು, ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಜಾಲಹಳ್ಳಿ ಏರ್ಫೋರ್ಸ್ ಕ್ಯಾಂಪಸ್‌ನಲ್ಲಿ ಬುಧವಾರ ನಡೆದಿದೆ. ಸುಮಾರು 60 ವರ್ಷದ ಮಹಿಳೆಮೇಲೆ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಸುಮಾರು 60 ವರ್ಷದ ಮಹಿಳೆ ಏರ್ಫೋರ್ಸ್ ಕ್ಯಾಂಪಸ್‌ನಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಬೀದಿ ನಾಯಿಗಳು ದಾಳಿ ನಡೆಸಿದೆ. ಮಹಿಳೆಯ ತಲೆ ಹಿಂಭಾಗ, ಮುಖ, ಕೈ ಹಾಗೂ ಕತ್ತಿನ ಭಾಗದಲ್ಲಿ ಗಂಭೀರವಾದ ಗಾಯಗಳಾಗಿದೆ.
ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಕೂಡಾ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇದನ್ನು ಓದಿದ್ದೀರಾ? ಬೀದಿ ನಾಯಿಗಳಿಗೆ ಆಹಾರ | ಬಿಬಿಎಂಪಿಯಿಂದ ಮಾರ್ಗಸೂಚಿ ಬಿಡುಗಡೆ; ಮಿಶ್ರ ಪ್ರತಿಕ್ರಿಯೆ
ಮೃತ ಮಹಿಳೆಯ ಅಳಿಯ ಜಾಲಹಳ್ಳಿ ಏರ್ಫೋರ್ಸ್‌ನ ಉದ್ಯೋಗಿಯಾಗಿದ್ದು, ಅಳಿಯ ಹಾಗೂ ತನ್ನ ಮಗಳನ್ನು ನೋಡಲೆಂದು ಮಹಿಳೆ ಬಿಹಾರದಿಂದ ಬೆಂಗಳೂರಿಗೆ ಬಂದಿದ್ದರು ಎಂದು ವರದಿಯಾಗಿದೆ.
ಇದೇ ಕ್ಯಾಂಪಸ್‌ನಲ್ಲಿ ಈ ಹಿಂದೆಯೂ ಬೀದಿ ನಾಯಿಗಳು ಹಲವರ ಮೇಲೆ ದಾಳಿ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
