ಮುಡಾ ಪ್ರಕರಣದಲ್ಲಿ ತನ್ನ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮತ್ತೆ ಮುಂದೂಡಿದೆ.
ಆಗಸ್ಟ್ 31ರಂದು ದೀರ್ಘ ವಿಚಾರಣೆಯನ್ನು ನಡೆಸಿದ ಕರ್ನಾಟಕ ಹೈಕೋರ್ಟ್ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 2 ಮಧ್ಯಾಹ್ನ 2:30ಕ್ಕೆ ಮುಂದೂಡಿಕೆ ಮಾಡಿದೆ. ಜೊತೆಗೆ ಮಧ್ಯಂತರ ಆದೇಶವನ್ನು ಮುಂದುವರೆಸಿದ್ದು, ವಿಚಾರಣೆ ಮುಂದೂಡುವಂತೆ ಜನಪ್ರತಿನಿಧಿಗಳ ಕೋರ್ಟ್‌ಗೆ ಆದೇಶಿಸಿದೆ.
ಇಂದು ವಿಚಾರಣೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಮುಡಾ ಪ್ರಕರಣದಲ್ಲಿ 6ನೇ ಪ್ರತಿವಾದಿ ಪಿ ಎಸ್ ಪ್ರದೀಪ್ ಕುಮಾರ್ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು. ಮೈಸೂರಿನ ಸ್ನೇಹಮಯಿ ಕೃಷ್ಣ ಪರವಾಗಿ ಹಿರಿಯ ವಕೀಲ ಮಣೀಂದರ್ ಸಿಂಗ್ ವಾದ ಮಂಡಿಸಿದರು. ಟಿ ಜೆ ಅಬ್ರಾಹಂ ಪರವಾಗಿ ವಕೀಲ ರಂಗನಾಥ್ ರೆಡ್ಡಿ ವಾದಿಸಿದರು.
ಇದನ್ನು ಓದಿದ್ದೀರಾ? ಮುಡಾ ಪ್ರಕರಣ | ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ: ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ
ಪ್ರದೀಪ್ ಕುಮಾರ್ ಪರವಾಗಿ ವಕೀಲ ಪ್ರಭುಲಿಂಗ ನಾವದಗಿ ವಾದ ಆರಂಭಿಸುತ್ತಿದ್ದಂತೆ “ಈ ಪ್ರಕರಣದಲ್ಲಿ ಯಾರೂ ಕೂಡಾ ಸಿದ್ದರಾಮಯ್ಯ ಅವರ ಪಾತ್ರವೇನೆಂದು ಹೇಳಿಲ್ಲ. ನೀವಾದರೂ ಈ ಬಗ್ಗೆ ಮಾತನಾಡುತ್ತೀರಾ” ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಪ್ರಶ್ನಿಸಿದ್ದಾರೆ.
ಇನ್ನು ಈ ಪ್ರಕರಣವನ್ನು ಸ್ವತಂತ್ರ್ಯ ತನಿಖಾ ಸಂಸ್ಥೆಗಳ ಅಧಿಕಾರಿಗಳ ತಂಡವು ತನಿಖೆ ನಡೆಸಬೇಕು. ಅಕೌಂಟೆಂಟ್‌ಗಳು ಕೂಡಾ ಈ ತಂಡದಲ್ಲಿರಬೇಕು ಎಂದು ಸ್ನೇಹಮಯಿ ಕೃಷ್ಣ ಅವರ ಪರ ವಕೀಲ ಮಣೀಂದರ್ ಸಿಂಗ್ ಮನವಿ ಮಾಡಿದ್ದಾರೆ.
ಮೂರು ದೂರಿನಲ್ಲಿಯೂ ಒಂದೇ ಅಂಶಗಳಿದ್ದವು. ಆದ್ದರಿಂದ ಒಂದೇ ಶೋಕಾಸ್ ನೋಟಿಸ್ ನೀಡಲಾಗಿದೆ. ಎಲ್ಲಾ ದೂರುಗಳಿಗೂ ಶೋಕಾಸ್ ನೋಟಿಸ್ ನೀಡಬೇಕೇ ಬೇಡವೇ ಎಂಬುದು ರಾಜ್ಯಪಾಲರಿಗೆ ಬಿಟ್ಟ ವಿಚಾರ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸ್ಪಷ್ಟಪಡಿಸಿದ್ದಾರೆ.
“ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೂರು ಬಂದಾಗ ರಾಜ್ಯಪಾಲರು ಏಕಾಏಕಿ ನಿರ್ಧಾರ ಕೈಗೊಂಡಿಲ್ಲ. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಹೆಚ್ಚುವರಿ ದಾಖಲೆ ತರಿಸಿಕೊಂಡು ಪರಿಶೀಲಿಸಿ ತನಿಖೆಗೆ ಅನುಮತಿ ನೀಡಿದ್ದಾರೆ” ಎಂದು ಮೆಹ್ತಾ ಹೇಳಿದರು.
“ಸಚಿವರುಗಳನ್ನು ಆಯ್ಕೆ ಮಾಡುವವರು ಸಿಎಂ ಆಗಿದ್ದಾರೆ. ಅವರ ಪರವಾಗಿಯೇ ಸಚಿವರುಗಳು ನಿರ್ಧಾರ ಕೈಗೊಳ್ಳುತ್ತಾರೆ. ಆದ್ದರಿಂದ ಕ್ಯಾಬಿನೆಟ್ ನಿರ್ಧಾರವನ್ನು ಪಾಲಿಸಿಲ್ಲ. ಸ್ವಂತ ವಿವೇಚನೆ ಬಳಸಿ ರಾಜ್ಯಪಾಲರು ಈ ನಿರ್ಧಾರ ಕೈಗೊಂಡಿದ್ದಾರೆ” ಎಂದು ತಿಳಿಸಿದರು.
ಎಲ್ರೂ ಮೂಡ ಮೂಡ ಅಂತ ಹೊಯ್ಕೋತಿದೀರಿ ಆದ್ರೆ ಇದ್ರಲ್ಲಿ ಮುಖ್ಯ ಮಂತ್ರಿಯ ಪಾತ್ರ ಏನೂ ಅಂತ ಯಾವಾನೂ ಹೇಳ್ತಿಲ್ವಲ್ರಯ್ಯ ಅಂತ ಕೇಳ್ತಿದ್ದಾರೆ ಜಜ್ಜು…
— LATPOTBABA (@LATPOTBABA1) August 31, 2024
🤣🤣 pic.twitter.com/DakIGukAxd
